ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿ ಮುಂದುವರಿಯಬೇಕಾದರೂ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಕೋಲಾರ (ನ.25): ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿ ಮುಂದುವರಿಯಬೇಕಾದರೂ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ವೇಳೆ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆದಿಲ್ಲ. ಬದಲಾಗಿ ಇಲಾಖೆಯ ವಿಚಾರವಾಗಿ ಚರ್ಚೆ ಮಾಡಿದ್ದೇನೆ.

ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ದೆಹಲಿಗೆ ಬರುವಂತೆ ನನಗೆ ಯಾರು ಫೋನ್ ಮಾಡಿಲ್ಲ. ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಷ್ಟ ಪಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಕೆಲಸ ಮಾಡಿದ್ದಾರೆ. ಏನೇ ಬದಲಾವಣೆ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು. ಗೃಹಲಕ್ಷ್ಮಿ ಯೋಜನೆಯ 3 ತಿಂಗಳು ಹಣ ಬಾಕಿಯಿದೆ. ಆಗಸ್ಟ್ ತಿಂಗಳ ಹಣ ಬಿಡುಗಡೆಯಾಗಿದ್ದು, ಉಳಿದ ಹಣ ಆದಷ್ಟು ಬೇಗ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಆರ್ಥಿಕ ಆಸರೆಗೆ ‘ಗೃಹಲಕ್ಷ್ಮಿ ಸಂಘ’, ಸುರಕ್ಷತೆಗೆ ‘ಅಕ್ಕ ಪಡೆ’: ರಾಜ್ಯದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಲಾಭ ತಂದುಕೊಡುವ ಸಲುವಾಗಿ ನ.೨೮ರಂದು ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಆರಂಭಿಸಲಾಗುತ್ತಿದೆ. ಮೂರು ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸೊಸೈಟಿ ವಿಸ್ತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಐಸಿಡಿಎಸ್ ಯೋಜನೆಯ ಅಂಗನವಾಡಿ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದರು.

ಸ್ತ್ರೀ ಸಬಲೀಕರಣ ಯೋಜನೆ: ಸ್ತ್ರೀಯರು ಹಾಗೂ ಮಕ್ಕಳ ಹಿತದೃಷ್ಟಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ೫೦ ವರ್ಷಗಳ ಹಿಂದೆ ಐಸಿಡಿಎಸ್ ಯೋಜನೆ ಜಾರಿಗೆ ತಂದು ಅಂಗನವಾಡಿ ಆರಂಭಿಸಿದರು. ಯೋಜನೆಯ ಸುವರ್ಣ ಮಹೋತ್ಸವ ಸಂಭ್ರಮಿಸುವ ಜೊತೆಗೆ, ಮುಂದಿನ ೫೦ ವರ್ಷಕ್ಕೆ ಸ್ತ್ರೀ ಸಬಲೀಕರಣಕ್ಕೆ ಅಣಿಗೊಳಿಸುವುದಕ್ಕೆ ಹೆಜ್ಜೆ ಇಡುವ ಘಳಿಗೆ ಇದಾಗಿದೆ ಎಂದರು.

ಸಂಘದ ಮೂಲಕ ₹3 ಲಕ್ಷ ಸಾಲ: ಗೃಹಲಕ್ಷ್ಮಿ ಸೊಸೈಟಿ ಮೂಲಕ 3 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಫಲಾನುಭವಿಗಳಿಗೆ ಸಾಲ ನೀಡಲಾಗುವುದು. ಸೊಸೈಟಿ ಯಶಸ್ಸಿಗೆ ಎಲ್ಲರ ಸಹಕಾರ, ಜವಾಬ್ದಾರಿ ಇರಬೇಕು. ನಾವು ಯಾರಿಂದಲೂ ಹಣ ಪಡೆಯುವುದಿಲ್ಲ, ಫಲಾನುಭವಿಗಳಿಂದ ಫೋನ್ ಪೇ ಮೂಲಕ ಹಣ ಸಂಗ್ರಹಿಸಲಾಗುವುದು. ಗೃಹಲಕ್ಷ್ಮಿ ಯಶಸ್ಸಿಗೆ ಯಾವ ರೀತಿ ಎಲ್ಲರೂ ಶ್ರಮ ವಹಿಸಿದ್ದೀರೋ ಹಾಗೆಯೇ ಗೃಹಲಕ್ಷ್ಮಿ ಸೊಸೈಟಿಯ ಯಶಸ್ಸಿಗೂ ಹೆಚ್ಚಿನ ನಿಗಾವಹಿಸಬೇಕು ಎಂದು ಸಚಿವೆ ತಿಳಿಸಿದರು.

ಮಹಿಳೆಯರ ಸುರಕ್ಷತೆಗೆ ಅಕ್ಕಪಡೆ

ಮಹಿಳೆಯರಿಗೆ ಹೆಚ್ಚು ಸುರಕ್ಷತೆ ನೀಡುವ ಸಲುವಾಗಿ ಅಕ್ಕ ಪಡೆಯನ್ನು ರಾಜ್ಯಾದ್ಯಂತ ಇದೇ ೨೮ ರಂದು ಆರಂಭಿಸಲಾಗುತ್ತಿದೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅಕ್ಕ ಪಡೆ ಮನೆ ಮಾತಾಗುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು. ಕಳೆದ ಬಾರಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ಗೌರವ ಧನವನ್ನು 2 ಸಾವಿರ ರೂ. ಹೆಚ್ಚಿಸುವಂತೆ ಒತ್ತಾಯಿಸಿದ್ದರು. ಆದರೆ 1 ಸಾವಿರ ಮಾತ್ರ ಹೆಚ್ಚಿಸಲಾಗಿತ್ತು. ಈಸಲದ ಬಜೆಟ್‌ನಲ್ಲಿ ಮತ್ತೊಂದು ಸಾವಿರ ಹೆಚ್ಚಿಸಲಾಗುವುದು. ಇದು ನಮ್ಮ ಸರ್ಕಾರದ ಮತ್ತೊಂದು ಗ್ಯಾರಂಟಿ ಎಂದು ಲಕ್ಷ್ಮಿ ಹೆಬ್ಬಾಳಕರ ಹೇಳಿದರು.