‘ಗೃಹಲಕ್ಷ್ಮೀ ಯೋಜನೆಯಡಿ ಈವರೆಗೆ ರಾಜ್ಯದ 1.24 ಕೋಟಿ ಮಹಿಳೆಯರಿಗೆ ತಲಾ 2000 ರು.ನಂತೆ 23 ಕಂತುಗಳಲ್ಲಿ 54,000 ಕೋಟಿ ರು. ಪಾವತಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಸುವರ್ಣ ವಿಧಾನಸಭೆ (ಡಿ.10): ‘ಗೃಹಲಕ್ಷ್ಮೀ ಯೋಜನೆಯಡಿ ಈವರೆಗೆ ರಾಜ್ಯದ 1.24 ಕೋಟಿ ಮಹಿಳೆಯರಿಗೆ ತಲಾ 2000 ರು.ನಂತೆ 23 ಕಂತುಗಳಲ್ಲಿ 54,000 ಕೋಟಿ ರು. ಪಾವತಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬಿಜೆಪಿ ಸದಸ್ಯ ಮಹೇಶ್‌ ಟೆಂಗಿನಕಾಯಿ ಪ್ರಶ್ನೆಗೆ ಉತ್ತರಿಸಿದ ಸಚಿವೆ,‘ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆಯನ್ನು ಮಾದರಿಯಾಗಿ ಸ್ವೀಕರಿಸಿ ಇತರೆ ರಾಜ್ಯಗಳು ಜಾರಿಗೊಳಿಸಿವೆ. ಯೋಜನೆ ಆರಂಭದಿಂದ ಕಳೆದ ಆಗಸ್ಟ್‌ವರೆಗೆ 1.24 ಕೋಟಿ ರು. ಮಹಿಳಾ ಫಲಾನುಭವಿಗಳಿಗೆ ತಲಾ 2 ಸಾವಿರ ರು.ನಂತೆ 54 ಸಾವಿರ ಕೋಟಿ ರು. ಪಾವತಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಮಹೇಶ್‌ ಟೆಂಗಿನಕಾಯಿ ಮಾತನಾಡಿ, ಪ್ರಸಕ್ತ ಸಾಲಿನ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಫಲಾನುಭವಿಗಳಿಗೆ ಹಣ ಬಂದಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ತಾವು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದು. ಇದಕ್ಕೆ ಉತ್ತರಿಸಿದ ಸಚಿವೆ, ಈವರೆಗೆ 23 ಕಂತುಗಳನ್ನು ಪಾವತಿಸಲಾಗಿದೆ. ಸೆಪ್ಟೆಂಬರ್‌, ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಕಂತು ಬಾಕಿಯಿದೆ. ಆರ್ಥಿಕ ಇಲಾಖೆ ಕಡತ ವಿಲೇವಾರಿ ಮಾಡುತ್ತಿದ್ದಂತೆ ಕೂಡಲೇ ಬಾಕಿ ಕಂತುಗಳನ್ನು ಪಾವತಿಸಲಾಗುವುದು ಎಂದು ತಿಳಿಸಿದರು.

‘ಯೋಜನೆ ಆರಂಭದಲ್ಲಿ 3 ತಿಂಗಳ ಕಾಲ ಕೊಂಚ ಗೊಂದಲಗಳಿದ್ದ ಕಾರಣ ವಿಳಂಬವಾಯಿತು. ಇದೀಗ ಎಲ್ಲವೂ ಬಗೆಹರಿದಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ. ಈ ಯೋಜನೆ ಅನುಷ್ಠಾನಕ್ಕೆ ನಮಗೆ ಬದ್ಧತೆ ಇದೆ. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಸ್ವಾರ್ಥ ಇಲ್ಲ’ ಎಂದು ಹೇಳಿದರು.

ರೈತರಿಗೆ ಬಿಜೆಪಿ ಏನು ಮಾಡಿದೆ?

ಬಿಜೆಪಿ ನಾಯಕರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ‌.‌ ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ, ಯಾರು ಬೇಡ ಅಂದೋರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಬಗ್ಗೆ ಬಿಜೆಪಿಯವರಿಗೆ ಕರುಣೆ ಬಂದ ಹಾಗಿದೆ. ರೈತರ ಪರವಾಗಿ ಬಿಜೆಪಿಯವರು ಏನು‌ ಮಾಡಿದ್ದಾರೆ ಅಂತ ಒಂದು ಪಟ್ಟಿ ಬಿಡುಗಡೆ ಮಾಡಲಿ.‌ ಅವರಿಗೆ ನಾಚಿಕೆ ಆಗಬೇಕು. ರೈತರ ಮೇಲೆ ಗೋಲಿಬಾರ್ ಮಾಡಿಸಿದವರು, ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಚಳಿ, ಮಳೆಯಲ್ಲಿ ನೂರಾರು ಜನ ರೈತರು ಸತ್ತರು. ರೈತರ ಮೇಲೆ ಗಾಡಿ ಹತ್ತಿಸಿದವರು ಯಾರು? ಈಗ ರೈತರ ಬಗ್ಗೆ ಮಾತನಾಡಲು ಬರುತ್ತಾರೆ, ಅವರಿಗೆ ನಾಚಿಕೆಯಾಗಬೇಕು ಎಂದು ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷವಾಗಲಿ, ನಾನಾಗಲಿ, ಎಲ್ಲರೂ ರೈತರ ಪರವಾಗಿದ್ದೇವೆ. ನಮ್ಮದು ಜಾತ್ಯತೀತ ಸರ್ಕಾರ, ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಾಬಾ ಸಾಹೇಬ ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕ ಮಹನೀಯರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಟಿಪ್ಪು ಜಯಂತಿಯನ್ನು ಏಕೆ ವಿವಾದ ಮಾಡಲಾಗುತ್ತಿದೆ ಎಂದು‌ ತಿಳಿಯುತ್ತಿಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕೆನ್ನುವುದು ನಮ್ಮ ನಿಲುವು ಎಂದು ತಿಳಿಸಿದರು.