ಸಿದ್ದರಾಮಯ್ಯ ಅವರೇ ನಮ್ಮ (ಅಹಿಂದ) ನಾಯಕರು. ಅವರು ಇನ್ನೂ ಇದ್ದಾರೆ. ಎಂದಿಗೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು. ಟೈಗರ್‌ ಜಿಂದಾ ಹೈ ಮತ್ತು ಕಿಂಗ್‌ ಇಸ್‌ ಅಲೈವ್‌ ಹೀಗಂತ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.

ಸುವರ್ಣ ವಿಧಾನಸೌಧ (ಡಿ.10): ‘ಸಿದ್ದರಾಮಯ್ಯ ಅವರೇ ನಮ್ಮ (ಅಹಿಂದ) ನಾಯಕರು. ಅವರು ಇನ್ನೂ ಇದ್ದಾರೆ. ಟೈಗರ್‌ ಜಿಂದಾ ಹೈ ಮತ್ತು ಕಿಂಗ್‌ ಇಸ್‌ ಅಲೈವ್‌. ಹೀಗಾಗಿ, ಸರ್ಕಾರವನ್ನಾಗಲಿ ಅಥವಾ ಅಹಿಂದ ಹೋರಾಟವನ್ನಾಗಲೀ ಮುಂದೆ ತೆಗೆದುಕೊಂಡು ಹೋಗುವವರು ಯಾರು ಎಂದು ಸಿದ್ದರಾಮಯ್ಯ ಅವರೇ ತೀರ್ಮಾನಿಸುತ್ತಾರೆ.’ ಹೀಗಂತ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು. ಮುಂದಿನ ಅಹಿಂದ ನಾಯಕ ಯಾರು ಎಂಬ ಬಗ್ಗೆ ಹಿರಿಯ ಕಾಂಗ್ರೆಸ್ಸಿಗ ಬಿ.ಕೆ. ಹರಿಪ್ರಸಾದ್ ಸೇರಿ ಕೆಲ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೈರತಿ, ‘ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯೇ ಇಲ್ಲ’ ಎಂದರು.

‘ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಇದ್ದಾರೆ. ಮುಂದಿನ ನಾಯಕತ್ವ ಸೇರಿದಂತೆ ಉಳಿದೆಲ್ಲವನ್ನೂ ಸಿದ್ದರಾಮಯ್ಯ, ಹೈಕಮಾಂಡ್‌ ನಾಯಕರು ತೀರ್ಮಾನ ಮಾಡುತ್ತಾರೆ. ಅದರಲ್ಲೂ ಸರ್ಕಾರ ಅಥವಾ ಅಹಿಂದ ಹೋರಾಟವನ್ನು ಮುಂದೆ ತೆಗೆದುಕೊಂಡು ಹೋಗೋರು ಯಾರು ಎಂದು ಸಿದ್ದರಾಮಯ್ಯ ಅವರೇ ತೀರ್ಮಾನಿಸಬೇಕು. ಅಲ್ಲಿಯವರೆಗೆ ಯಾರು ಏನೇ ಹೇಳಿದರೂ ಅವರವರ ವೈಯಕ್ತಿಕ ಅಭಿಪ್ರಾಯವಷ್ಟೇ’ ಎಂದರು. ‘ಎಂದಿಗೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು. ಅವರು ಇನ್ನೂ ಇದ್ದಾರೆ. ಟೈಗರ್‌ ಜಿಂದಾ ಹೈ, ಕಿಂಗ್‌ ಈಸ್‌ ಅಲೈವ್‌. ಪ್ರಜಾಪ್ರಭುತ್ವ ಭಾಷೆಯಲ್ಲಿ ಇಂತಹ ಮಾತುಗಳನ್ನು ಹೇಳಬಾರದು. ಅದರೂ, ಅವರು ನಮ್ಮ ನಾಯಕರೇ’ ಎಂದರು.

ಯತೀಂದ್ರ ತಮ್ಮ ಅಭಿಪ್ರಾಯ ಹೇಳಿದ್ದಾರೆ: ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಲಿದ್ದಾರೆ ಎಂಬ ಯತೀಂದ್ರ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ‘ಯತೀಂದ್ರ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅಭಿಪ್ರಾಯ ಹೇಳಲು ಸ್ವತಂತ್ರರು. ಇನ್ನು, ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಇಬ್ಬರೂ ಹೇಳಿದ್ದಾರೆ. ಹೈಕಮಾಂಡ್‌ ನಿರ್ಧಾರವನ್ನು ನಾವೆಲ್ಲರೂ ಒಪ್ಪಬೇಕು’ ಎಂದು ಹೇಳಿದರು.

ಮುಂದಿನ ಅಹಿಂದ ನಾಯಕ ಈಗ ಅಪ್ರಸ್ತುತ

ಅಹಿಂದ ನಾಯಕತ್ವ ಸತೀಶ್‌ ಜಾರಕಿಹೊಳಿ ವಹಿಸಬಹುದು ಎಂದು ಬಿ.ಕೆ. ಹರಿಪ್ರಸಾದ್‌ ಅವರ ಅಭಿಪ್ರಾಯದ ಕುರಿತ ಪ್ರಶ್ನೆಗೆ ಉತ್ತರಿಸಿ, ಅಹಿಂದ ನಾಯಕತ್ವ ವಹಿಸಲು ಸತೀಶ್‌ ಜಾರಕಿಹೊಳಿ ಸೂಕ್ತ ಇರಬಹುದು. ಆದರೂ, ಅಹಿಂದ ನಾಯಕತ್ವದ ಬಗ್ಗೆ ತೀರ್ಮಾನಿಸುವುದೂ ಸಿದ್ದರಾಮಯ್ಯ ಅವರೇ. ಆದ್ದರಿಂದ ಸದ್ಯಕ್ಕೆ ಆ ಪ್ರಶ್ನೆ ಉದ್ಘವಿಸುವುದಿಲ್ಲ’ ಎಂದರು.