ರಾಜ್ಯ 'ಕೈ' ಸರ್ಕಾರ ಬೀಳಿಸಲು ಬಿಜೆಪಿಗೆ ನೆರವಾಗಿ: ಜೆಡಿಎಸ್ ಕಾರ್ಯಕರ್ತರಿಗೆ ಹೆಚ್‌ಡಿಕೆ ಕರೆ
ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿಗೆ ಸಹಕಾರ ನೀಡುವಂತೆ ಹೆಚ್‌ಡಿಕೆ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಪಕ್ಷವನ್ನು ಬಲಪಡಿಸಲು ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಆರಂಭಿಸುವಂತೆಯೂ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ
ರಾಮನಗರ: ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಕೆಡವಲು ನಾವು ಬಿಜೆಪಿಗೆ ಸಹಕಾರ ನೀಡಬೇಕೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರ ಸ್ವಾಮಿ ಜೆಡಿಎಸ್ ಪಕ್ಷದ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು. ಬಿಡದಿ ಬಳಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ನಡೆದ ಜೆಡಿಎಸ್ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಬಲವರ್ಧನೆ ಮತ್ತು ಸಂಘಟನೆಯ ದೃಷ್ಟಿಯಿಂದ ರಾಜ್ಯಾದ್ಯಂತ ಮತ್ತೆ ಸದಸ್ಯತ್ವ ನೊಂದಣಿ ಪುನಾರಂಭವಾಗಬೇಕು. ನೀವು ಪಟ್ಟ ಶ್ರಮದಿಂದ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಇದು ಮುಂದಿನ ಸವಾಲುಗಳಿಗೆ ತಯಾರಾಗಲು ಸೂಚನೆ ಎಂದರು.
2018ರಲ್ಲಿ 2013ರಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ 75 ಸ್ಥಾನಗಳಿಗೆ ಕುಸಿಯಿತು. ಸಾಮಾನ್ಯ ಚುನಾವಣೆಯ ಚಿತ್ರಣವೇ ಬೇರೆ, ಉಪಚುನಾವಣೆ ಚಿತ್ರಣವೇ ಬೇರೆಯಾಗಿದೆ. ಸ್ವತಃ ಅವರ ಪಕ್ಷದ ಶಾಸಕರೇ ಅಭಿವೃದ್ಧಿಗೆ ಹಣವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಈ ಸರ್ಕಾರವನ್ನು ಕೆಡವಲು ನಾವು ಬಿಜೆಪಿಯೊಂದಿಗೆ ನಿಲ್ಲಬೇಕಿದೆ ಎಂದು ತಿಳಿಸಿದರು.
ಜೆಡಿಎಸ್ ಎಂದಿಗೂ ಹಿಂದಕ್ಕೆ ಬಿದ್ದಿಲ್ಲ:
ಜೆಡಿಎಸ್ ಪಕ್ಷ ಎಂದಿಗೂ ಹಿಂದೆ ಬಿದ್ದಿಲ್ಲ. ದೇವೇಗೌಡರು ಮುಖ್ಯಮಂತ್ರಿ ಆದರು, ಬಳಿಕ ಪ್ರಧಾನಿ ಆದರು. ಈಗ 2023ರ ಚುನಾವಣೆಯಲ್ಲಿ ಕೇವಲ 18 ಸ್ಥಾನ ಗೆದ್ದಿದ್ದರೂ ನಾನು ಕೇಂದ್ರ ಸಚಿವನಾಗಿದ್ದೇನೆ ಎಂದು ಹೇಳಿದರು.
ನಿಖಿಲ್ ಭವಿಷ್ಯದ ನಾಯಕ: ಜೆಡಿಎಸ್ ಬಲವರ್ಧನೆ ದೃಷ್ಟಿಯಿಂದ ಪಕ್ಷ ಸಂಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ನಾನು ನಿಖಿಲ್ ಕುಮಾರಸ್ವಾಮಿ ಹೆಗಲಿಗೆ ವಹಿಸುತ್ತಿದ್ದೇನೆ. ನಿಖಿಲ್ ನನ್ನ ಮಗ ಆಗಿರುವುದರಿಂದ ನಾನು ಈ ಮಾತನಾಡುತ್ತಿಲ್ಲ. ಅವರಿಗಿರುವ ಗುಣದ ಬಗ್ಗೆ ಮಾತಾಡುತ್ತಿದ್ದೇನೆ. ಅವರಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಕಾರ್ಯಕರ್ತರಿಗೆ ಹೇಳಿದರು.
ರಾಜ್ಯದ ಜನರಿಗೆ ಕೃತಜ್ಞತೆ ಹೇಳಲು ಹಾಸನದಲ್ಲಿ ಸಮಾವೇಶ: ಸಿಎಂ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ಭಾಗಿ
ಬೆಂಗಳೂರು: ರಾಜ್ಯದ ಜನರಿಗೆ ಕೃತಜ್ಞತೆ ತಿಳಿಸಲು ಸ್ವಾಭಿಮಾನಿಗಳ ಒಕ್ಕೂಟ ಮತ್ತು ಕಾಂಗ್ರೆಸ್ ಪಕ್ಷದಿಂದ ಹಾಸನದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೆಂಗಲ್ ಹನುಮಂತಯ್ಯ ಅವರ ಪುಣ್ಯ ಸ್ಮರಣೆ ಅಂಗವಾಗಿ ಭಾನುವಾರ ವಿಧಾನಸೌಧ ಆವರಣದಲ್ಲಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದರು.
ಜೆಡಿಎಸ್ ಪಕ್ಷ ಬಿಡುವಾಗ ನಾಟಕ ಮಾಡಿದಂತೆ ಸಿದ್ದರಾಮಯ್ಯ ಈಗ ನಾಟಕ ಆರಂಭಿಸಿದ್ದಾರೆ ಎಂದು ಹಾಸನ ಸಮಾವೇಶದ ಕುರಿತು ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ನಾನು ಪಕ್ಷ ಬಿಡಲಿಲ್ಲ. ಬದಲಾಗಿ ದೇವೇಗೌಡರೇ ಹೊರ ಹಾಕಿದರು. ಆಗ ಬೇರೆ ದಾರಿ ಇಲ್ಲದೆ ಅಹಿಂದ ಸಂಘಟನೆ, ಸಮಾವೇಶ ಆರಂಭಿಸಿದೆ ಎಂದರು.
ಪಕ್ಷ ಜಾತ್ಯಾತೀತವಾಗಿರಬೇಕು ಎಂದು ಜೆಡಿಎಸ್‌ಗೆ ಜಾತ್ಯತೀತ ಪದ ಸೇರಿಸಲಾಯಿತು. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಇರಲೇ ಇಲ್ಲ. ಇಂದು ಜೆಡಿಎಸ್ ಜಾತ್ಯತೀತವಾಗಿ ಉಳಿದಿದೆಯೇ? ಕುಮಾರಸ್ವಾಮಿಯವರಿಗೆ ಜೆಡಿಎಸ್ ಪಕ್ಷ ಯಾವ ಹಿನ್ನೆಲೆ ಹೊಂದಿದೆ ಎನ್ನುವುದು ಕೂಡ ಗೊತ್ತಿಲ್ಲ ಎಂದರು. ರಾಜ್ಯದ ಜನರಿಗೆ ಕೃತಜ್ಞತೆ ಹೇಳಲು ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿಗಳು ಸೇರಿ ಸಮಾವೇಶ ಮಾಡಲಾಗುತ್ತಿದೆ. ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಮಲ್ಲಿಕಾರ್ಜುನ ಖರ್ಗೆ ಭಾಗವಹಿಸುತ್ತಾರೆ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ:ಪೇಪರ್ ಸಿಂಹಗೆ ಟಿಕೆಟ್ ಕೊಡದೆ ಕೊಚ್ಚೆಯಲ್ಲಿ ಎಸೆದಿದ್ದಾರೆ: ಪ್ರತಾಪ್ ಸಿಂಹ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಇದನ್ನೂ ಓದಿ: ಒಳ ಒಪ್ಪಂದದ ದಾಖಲೆ ಇದ್ರೆ ಬಿಡುಗಡೆ ಮಾಡಿ: ಯತ್ನಾಳ್ ವಿರುದ್ಧ ವಿಜಯೇಂದ್ರ ಆಕ್ರೋಶ