ಕಾಂಗ್ರೆಸ್‌ನವರು ಕೃಷ್ಣರಾಜ ಸಾಗರವನ್ನು ಟಿಪ್ಪು ಸುಲ್ತಾನ್ ಸಾಗರ ಎಂದು ಮರು ನಾಮಕರಣ ಮಾಡುವುದಕ್ಕೆ ಹುನ್ನಾರ ನಡೆಸಿದ್ದಾರೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಮಂಡ್ಯ (ಆ.05): ಕಾಂಗ್ರೆಸ್‌ನವರು ಕೃಷ್ಣರಾಜ ಸಾಗರವನ್ನು ಟಿಪ್ಪು ಸುಲ್ತಾನ್ ಸಾಗರ ಎಂದು ಮರು ನಾಮಕರಣ ಮಾಡುವುದಕ್ಕೆ ಹುನ್ನಾರ ನಡೆಸಿದ್ದಾರೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ನಾಲ್ವಡಿ ಅವರ ಹೆಸರಿಗೆ ಕಾಂಗ್ರೆಸ್‌ನಿಂದ ಪದೇ ಪದೇ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಟಿಪ್ಪು ಕನ್ನಡಿಗನಲ್ಲ. ಅವನು ಪರ್ಷಿಯಾ ದೇಶದವನು. ಮತಾಂಧ, ನಾಡದ್ರೋಹಿ.

ಅವನು ಸತ್ತಿದ್ದು 1799ರಲ್ಲಿ. ಕೃಷ್ಣರಾಜಸಾಗರ ನಿರ್ಮಾಣಕ್ಕೆ ಚಾಲನೆ ನೀಡಿದ್ದು 1911ರಲ್ಲಿ. ಕಾಂಗ್ರೆಸ್‌ನವರಿಗೆ ಟಿಪ್ಪು ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಅವರ ಮನೆ-ಮಕ್ಕಳಿಗೆಲ್ಲಾ ಟಿಪ್ಪು ಹೆಸರಿಡಲಿ. ಕಾಂಗ್ರೆಸ್‌ ಕಚೇರಿಗೆ ಟಿಪ್ಪು ಸುಲ್ತಾನ್‌ ಕಾಂಗ್ರೆಸ್‌ ಸಮಿತಿ ಎಂದು ಹೆಸರಿಡಲಿ. ಅದನ್ನು ಬಿಟ್ಟು ನಾಲ್ವಡಿ ಅವರ ಹೆಸರಿಗೆ ಚ್ಯುತಿ ತರುವ ಕೆಲಸ ಮಾಡಬಾರದು ಎಂದರು.

ಟಿಪ್ಪು ಸತ್ತಿದ್ದಕ್ಕೂ ಕೆಆರ್‌ಎಸ್ ನಿರ್ಮಾಣಗೊಂಡಿದ್ದಕ್ಕೂ 112 ವರ್ಷಗಳ ಅಂತರವಿದೆ. ಅಲ್ಲಿಯವರೆಗೆ ಆ ಅಡಿಗಲ್ಲು ಎಲ್ಲಿತ್ತು. ಅಲ್ಲಿಯವರೆಗೆ ಕಾಣೆಯಾಗಿದ್ದು ದಿಢೀರ್ ಪ್ರತ್ಯಕ್ಷವಾಗಿದ್ದು ಎಲ್ಲಿಂದ. ಅಡಿಗಲ್ಲಿನಲ್ಲಿರುವ ಪರ್ಷಿಯನ್ ಭಾಷೆಯನ್ನು ತರ್ಜುಮೆ ಮಾಡಲಿ.1799ರಲ್ಲಿದ್ದದ್ದು ಹಳೆಗನ್ನಡ. ಅಡಿಗಲ್ಲು ಎನ್ನುತ್ತಿರುವ ಕಲ್ಲಿನ ಮೇಲಿರುವುದು ಹೊಸಗನ್ನಡ. ಇದೆಲ್ಲವನ್ನೂ ನೋಡಿದರೆ ಇದರ ಹಿಂದೆ ಯಾರದ್ದೋ ಕೈವಾಡವಿದೆ. ಒಳಸಂಚಿದೆ ಎನ್ನುವುದು ಅರಿವಾಗುತ್ತದೆ ಎಂದು ಅಶೋಕ್‌ ಶಂಕೆ ವ್ಯಕ್ತಪಡಿಸಿದರು.

ಟಿಪ್ಪು ಸುಲ್ತಾನ್ ಕೆ.ಆರ್.ಎಸ್.ಗೆ ಅಡಿಗಲ್ಲು ಇಟ್ಟಿದ್ದರೆ ಯಾರೋ ಮುಲ್ಲಾನೋ, ಮೌಲ್ವಿನೋ ಡಿ.ಪಿ.ಆರ್ ಮಾಡಿರಬೇಕು ತಾನೇ? ಅವರು ಯಾರು ಅಂತಾ ಹೇಳಿ? ಟಿಪ್ಪು ಅಳ್ವಿಕೆ ಇದ್ದ ವೇಳೆ ವಿಶ್ವೇಶ್ವರಯ್ಯ ಅವರೇ ಹುಟ್ಟಿರಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಇರದಿದ್ದರೆ ಕೆ.ಆರ್.ಎಸ್ ಜಲಾಶಯವೇ ನಿರ್ಮಾಣ ಆಗುತ್ತಿರಲಿಲ್ಲ.
-ಪ್ರತಾಪ ಸಿಂಹ, ಮಾಜಿ ಸಂಸದ.