ಬೆಂಗಳೂರು(ಆ.02): ಬಿಜೆಪಿಯಿಂದ ಲೀಗಲ್ ನೋಟಿಸ್ ನೀಡುವ ವಿಚಾರ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.  

ಇಂದು(ಭಾನುವಾರ) ಡಿ.ಕೆ.ಶಿವಕುಮಾರ್‌ ಭೇಟಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಬಿಜೆಪಿಯಿಂದ ನೋಟಿಸ್ ನೀಡೋಕೆ ಬರಲ್ಲ. ಯಾವ ಆಧಾರದ ಮೇಲೆ ಕೊಡುತ್ತಾರೋ ಗೊತ್ತಿಲ್ಲ. ಪ್ರತಿನಿತ್ಯ ಆರೋಪ ಪ್ರತ್ಯಾರೋಪಗಳನ್ನ ಮಾಡುತ್ತವೇ ಇರುತ್ತೇವೆ. ‌ಹಾಗೆ ಒಂದು ವೇಳೆ ಕೇಳುವುದದಾದ್ರೇ ಸರ್ಕಾರ ‌ಕೇಳಬೇಕು ವಿನಃ ಬಿಜೆಪಿ ಕೇಳಲು ಬರೋದಿಲ್ಲ. ಈ ವಿಷಯದ ಬಗ್ಗೆ ನಾವು ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. 

ಮಂತ್ರಿಗಿರಿ ಉಳಿಸಿಕೊಳ್ಳಲು ಸರ್ಕಸ್‌: ಜಾರಕಿಹೊಳಿ ಭೇಟಿಯಾದ ಶಶಿಕಲಾ ಜೊಲ್ಲೆ

ಇದರ ಜೊತೆಗೆ ಕಾನೂನಿನಲ್ಲಿ ಯಾವ ರೀತಿ ಅವಕಾಶ ಇದೆಯೋ ಆ ರೀತಿ ಹೋರಾಟ ಮಾಡುತ್ತೇವೆ. ಪ್ರತಿದಿನ ಸಾವಿರಾರು ಜನ ಆರೋಪಗಳನ್ನ ಮಾಡುತ್ತಾರೆ. ಎಲ್ಲರಿಗೂ ನೋಟಿಸ್ ಕೊಡುವುದಕ್ಕೆ ಬರೋದಿಲ್ಲ. ನಮಗೆ ಎಲ್ಲಾ ರೀತಿಯ ಅವಕಾಶ ಇದೆ. ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದಲೇ ಹೋಗಿ ಕೋವಿಡ್ ಪರೀಕ್ಷೆ ಮಾಡುತ್ತೇವೆ. ಇದೆಲ್ಲ ಮುಗಿದಮೇಲೆ ಬೂತ್ ಮಟ್ಟದಲ್ಲಿ ಲೆಕ್ಕ ಕೇಳುತ್ತೇವೆ ಎಂದು ತಿಳಿಸಿದ್ದಾರೆ.

ಸತೀಶ್ ಜಾರಕಿಹೊಳಿ ಕಾರ್ಯಾಧ್ಯಕ್ಷರಾಗಿ ಉತ್ಸಾಹದಿಂದ ಕೆಲಸ ಮಾಡುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ಒಂದೊಂದು‌ ಜವಾಬ್ದಾರಿ ಕೊಟ್ಟಿದ್ದಾರೆ. ನಮ್ಮ ಕೆಲಸ‌ವನ್ನ ನಾವು ಮಾಡುತ್ತಿದ್ದೇವೆ. ಐದು‌ ಬೆರಳು ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಲೀಗಲ್ ನೋಟಿಸ್ ಕೊಡ್ಲಿ ಅಂತ ಕಾಯ್ತಿದ್ದೆ: ಅಚ್ಚರಿಗೆ ಕಾರಣವಾಯ್ತು ಸಿದ್ದರಾಮಯ್ಯ ಮಾತು..!

ಬಿಜೆಪಿ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಸತೀಶ್‌ ಜಾರಕಿಹೊಳಿ ಅವರು, ಯಡಿಯೂರಪ್ಪರನ್ನ ಮುಂದುವರೆಸೋದು, ಬಿಡೋದು ಅವರ ಪಕ್ಷದ ಆಂತರಿಕ ವಿಚಾರವಾಗಿದೆ. ನಾವು ನಮ್ಮ ಪಕ್ಷ ಸಂಘಟನೆ ಕೆಲಸ‌ ಮಾಡುತ್ತಿದ್ದೇವೆ. ಅವರಿಂದ ಯಾವುದೇ ಲಾಭ‌, ನಷ್ಟ‌ ನಮಗಿಲ್ಲ. ಬಿಜೆಪಿಯವರು ಎಷ್ಟು ದಿನ ಅಧಿಕಾರ ‌ನಡೆಸ್ತಾರೋ ಅಷ್ಟೇ ಲಾಭ ಕಾಂಗ್ರೆಸ್‌ಗೆ ಇದೆ ಎಂದು ಹೇಳಿದ್ದಾರೆ.

ಯಡಿಯೂರಪ್ಪರಿಗೆ ಕೇವಲ 6 ತಿಂಗಳಷ್ಟೇ ಅಂತ ಅವರ ಪಕ್ಷದವರೇ ಹೇಳುತ್ತಿದ್ದರು. ಯಡಿಯೂರಪ್ಪಗೆ ಕೌಂಟರ್ ಕೊಡೋಕೆ ಕೆಲವರನ್ನ ಮಂತ್ರಿ ಹಾಗೂ ಡಿಸಿಎಂಗಳನ್ನ ಮಾಡಿದ್ದಾರೆ. ಒಂದು ಗುಂಪನ್ನ‌ ಬಿಎಸ್‌ವೈ ಬಿರುದ್ಧ ಎತ್ತಿ ಕಟ್ಟುವ ಕೆಲಸ ಆಗುತ್ತಿದೆ. ಇದನ್ನ ಬಿಎಸ್‌ವೈ ಯಾವ ರೀತಿ‌ ನಿಭಾಯಿಸ್ತಾರೆ, ಗೋಲ್‌ನ್ನ ಯಾವ ರೀತಿ ಹೊಡಿತಾರೆ ಅನ್ನೋದನ್ನ ಕಾದು ನೋಡಬೇಕಿದೆ. ಒಂದು ವೇಳೆ ಹೆಚ್ಚುಕ್ಕಮ್ಮಿ ಆದ್ರೆ ಸರ್ಕಾರ ಮಾಡಲಿಕ್ಕೆ ಕಾಂಗ್ರೆಸ್ ಹೋಗಲ್ಲ. ನೂರಕ್ಕೆ ನೂರರಷ್ಟು ಚುನಾವಣೆಗೆ ಹೋಗುತ್ತೇವೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.