ಬೆಳಗಾವಿ(ಅ.18): ತಹಶೀಲ್ದಾರ್ ಖಾತೆಯಲ್ಲಿ ದುಡ್ಡಿದ್ರೆ ಕೆಲಸ ಆಗುತ್ತೆ ಇಲ್ಲವಾದರೆ ಆಗಲ್ಲ. ಕೆಲಸ ಆಗದೇ ಇದ್ದಾಗ ಸ್ಥಳೀಯ ಶಾಸಕರು ಗುರಿಯಾಗುತ್ತಾರೆ. ಆಡಳಿತ ಸರ್ಕಾರ ಪರಿಹಾರ ಕಾಮಗಾರಿಗೆ ದುಡ್ಡು ಕೊಡಬೇಕು. ಖಾಲಿ ಕೈಯಲ್ಲಿ ಹೋದಾಗ ನೇರವಾಗಿ ಜನ ಟಾರ್ಗೆಟ್ ಮಾಡೇ ಮಾಡುತ್ತಾರೆ. ತಹಶೀಲ್ದಾರ್ ಖಾತೆಯಲ್ಲಿ ದುಡ್ಡು ಇಲ್ಲದಿದ್ರೆ ಏನೂ ಪರಿಹಾರ ಕೊಡಕ್ಕಾಗುತ್ತೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಪ್ರಶ್ನಿಸಿದ್ದಾರೆ. 

ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಕಾಂಗ್ರೆಸ್‌ ಶಾಸಕ ಎಂ.ವೈ.ಪಾಟೀಲ್‌ಗೆ ತರಾಟೆಗೆ  ತೆಗೆದುಕೊಂಡ ವಿಚಾರದ ಬಗ್ಗೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್.ಆರ್.ನಗರ, ಶಿರಾದಲ್ಲಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸ ಇದೆ. ಇಡೀ ಪಕ್ಷ ಕೆಲಸ ಮಾಡುತ್ತಿದೆ. ಶಿರಾದಲ್ಲಿ ಕಳೆದ ಬಾರಿ ಗೆಲ್ಲಬೇಕಾಗಿತ್ತು. ಹಿಂದಿನ ಬಾರಿ ತಾಂತ್ರಿಕ ಕಾರಣಗಳಿಂದ ಶಿರಾ ಕ್ಷೇತ್ರದಲ್ಲಿ ಸೋತಿದ್ದೇವೆ. ಎಲ್ಲ ಪಕ್ಷದಲ್ಲೂ ಭಿನ್ನಾಭಿಪ್ರಾಯ ಇದೆ. ವೈಯಕ್ತಿಕ ಸಮಸ್ಯೆ ಅದು, ಪಕ್ಷದ್ದಲ್ಲ. ಈ ಬಾರಿ ಶಿರಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಉಪಚುನಾವಣೆಯಲ್ಲಿ ಗೆಲುವು ನಿಗದಿಯಾಗಿದೆ ಎಂಬ ಸಿಎಂ ಬಿಎಸ್‌ವೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸತೀಶ್‌ ಜಾರಕಿಹೊಳಿ, ಸೋಲು ನಿಗದಿ ಆಗಬೇಕು ಅಷ್ಟೇ, ಜನ ತಮ್ಮ ಸಿಟ್ಟು ತೋರಿಸುವ ಅವಕಾಶ ಇದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಸರ್ಕಾರ ರಚನೆಗೆ ಕೈ ಹಾಕುತ್ತಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ರಚನೆ ಮಾಡುವ ಪ್ರಶ್ನೆಯೇ ಇಲ್ಲ, ಹೋಗೋದಾದರೆ ಚುನಾವಣೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ. 

ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ಧ ವೈರಿಗಳು, ಈ ವೇಳೆ ಸಿದ್ದುಗೆ ಟಾಂಗ್ ಕೊಟ್ಟ ಈಶ್ವರಪ್ಪ

ಆರ್.ಆರ್.ನಗರದಲ್ಲಿ ಬಿಜೆಪಿ ಪರ ಸ್ಟಾರ್‌ ನಟರಾದ ಯಶ್, ದರ್ಶನ್ ಪ್ರಚಾರ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾರೇ ಸ್ಟಾರ್ ಪ್ರಚಾರಕ್ಕೆ ಬಂದರೂ ಅಂತಿಮವಾಗಿ ವೋಟ್ ಹಾಕೋರು ಜನರು. ನೋಡಲಿಕ್ಕೆ ಸೆಲೆಬ್ರಿಟಿ ಅಷ್ಟಕ್ಕೇ ಸೀಮಿತವಾಗಿರುತ್ತಾರೆ. ಅವರಿಂದ ವೋಟ್ ಬರುತ್ತೆ ಅಂತಾ ಹೇಳಕ್ಕಾಗಲ್ಲ. ಈ ಹಿಂದೆ ಪೂಜಾ ಗಾಂಧಿ ರಾಯಚೂರಲ್ಲಿ ಎಲೆಕ್ಷನ್‌ಗೆ ನಿಂತಾಗ ಎಷ್ಟು ವೋಟ್ ತಗೊಂಡ್ರು? ಸ್ಟಾರ್ ನೋಡಿ ವೋಟ್ ಹಾಕಲ್ಲ, ಅದೆಲ್ಲಾ ಸುಳ್ಳು, ಕಲ್ಪನೇ ಅಷ್ಟೇ, ಕಣ್ಣಿಗೆ ಚೆಂದ ಅಷ್ಟೇ, ಅದರಿಂದ ವೋಟ್ ಡೈವರ್ಟ್ ಆಗಲ್ಲ ಎಂದು ಹೇಳಿದ್ದಾರೆ. 

ಮತದಾರ ತನ್ನ ಸಮಸ್ಯೆಗಳ ಪರಿಹಾರ ಭವಿಷ್ಯಕ್ಕಾಗಿ ವೋಟ್ ಹಾಕಲು ನಿರ್ಧರಿಸುತ್ತಾನೆ. ಉಪಚುನಾವಣೆಯಲ್ಲಿ ಹಂಡ್ರೆಡ್ ಪರ್ಸೆಂಟ್ ನಾವೇ ಗೆಲ್ತೇವೆ, ಮುಂದಿನ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.