Asianet Suvarna News Asianet Suvarna News

'ಯಡಿಯೂರಪ್ಪ, ಜನಾರ್ದನ ರೆಡ್ಡಿ ಜೈಲಿನಿಂದ ವಿಕ್ಟರಿ ಸನ್ನೆ ಮಾಡುತ್ತಾ ಹೊರ ಬರಲಿಲ್ಲವೇ?'

* ಬಿಜೆಪಿ ಸರ್ಕಾರದ ವಿರುದ್ಧ  ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ  ವಾಗ್ದಾಳಿ
* ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ವಿರುದ್ಧ ದೂರು ದಾಖಲಿಸಿದ್ದಕ್ಕೆ ಗರಂ
* ಪೊಲೀಸ್ ಹಾಗೂ ಸರ್ಕಾರದ ನಡೆಯನ್ನು ಪ್ರಶ್ನಿಸಿದ  ರಾಮಲಿಂಗಾರೆಡ್ಡಿ

KPCC Working President ramalinga reddy Hits back at BJP Leaders rbj
Author
Bengaluru, First Published Aug 23, 2021, 6:43 PM IST

ಬೆಂಗಳೂರು, (ಆ. 23): ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಅವರ 300 ಬೆಂಬಲಿಗರ ವಿರುದ್ಧ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಪ್ರಕರಣ ದಾಖಲಿಸಿರುವುದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು (ಆ.23) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವರು ಕಾನೂನಿಗಿಂತ ದೊಡ್ಡವರೆ? ಕೋವಿಡ್ ಮಾರ್ಗಸೂಚಿ ಇವರಿಗೆ ಅನ್ವಯವಾಗುವುದಿಲ್ಲವೇ? ಬಿಜೆಪಿಯವರಿಗೊಂದು ಕಾನೂನು, ಜನಸಾಮಾನ್ಯರು ಮತ್ತು ವಿರೋಧ ಪಕ್ಷದವರಿಗೊಂದು ಕಾನೂನು ಇದೆಯೇ?' ಎಂದು ಪ್ರಶ್ನಿಸಿದರು. 

ಜೈಲಿನಿಂದ ಹೊರಬರುತ್ತಿದ್ದಂತೆ ಕುಲಕರ್ಣಿ ವಿರುದ್ಧ ಮತ್ತೆರಡು ಕೇಸ್‌ ದಾಖಲು

ಬಿಜೆಪಿ ಸರ್ಕಾರದ ಈ ನಡೆ ನೋಡಿದರೆ, ರಾಜ್ಯದಲ್ಲಿ ಕಾನೂನು ಇದೆಯೋ, ಇಲ್ಲವೋ ಎಂಬ ಪ್ರಶ್ನೆ ಮೂಡುತ್ತಿದೆ. ವಿನಯ್ ಕುಲಕರ್ಣಿ ಅವರ ಮೇಲೆ ಪ್ರಕರಣ ದಾಖಲಿಸಿರುವುದು ತಪ್ಪು ಎಂದು ಹೇಳುತ್ತಿಲ್ಲ. ಕಾನೂನು ಉಲ್ಲಂಘನೆ ಮಾಡಿದರೆ ಯಾರೇ ಆಗಲಿ, ನಾವಾದರೂ ನಮ್ಮ ಮೇಲೆ ಕೇಸ್ ಹಾಕಲಿ. ಆದರೆ, ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಯಾಕೆ ಪ್ರಕರಣ ದಾಖಲಿಸುತ್ತಿಲ್ಲ? ವಿನಯ್ ಕುಲಕರ್ಣಿ ಅವರನ್ನು ಸ್ವಾಗತ ಮಾಡಿರುವುದರ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಅವರ ನಾಯಕರಾದ ಬಿ.ಎಸ್ ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರು ಜೈಲಿನಿಂದ ಬಿಡುಗಡೆಯಾದ ಮೇಲೆ ಎರಡು ಕೈಗಳಲ್ಲಿ ವಿಕ್ಟರಿ ಸನ್ನೆ ಮಾಡುತ್ತಾ ಹೊರಬರಲಿಲ್ಲವೇ? ಟಾಂಗ್ ಕೊಟ್ಟರು.

 ರಾಜ್ಯದಿಂದ ಆಯ್ಕೆಯಾಗಿರುವ ನಾಲ್ವರು ನೂತನ ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ. ಅವರು ಮಾಡಲಿ ಆದರೆ, ಕೋವಿಡ್ ಪಿಡುಗು ನಿಯಂತ್ರಣಕ್ಕೆ ವಿಧಿಸಿರುವ ಮಾರ್ಗಸೂಚಿ ಅನ್ವಯವಾಗುವುದಿಲ್ಲವೇ? ಕೇಂದ್ರ ಸಚಿವ ಖೂಬಾ ಅವರಿಂದ ಹಿಡಿದು, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ ಅವರೆಲ್ಲರೂ 700, 800 ಕಿ.ಮೀ ದೂರ ಜನಾಶೀರ್ವಾದ ಯಾತ್ರೆ ಮಾಡಿದ್ದಾರೆ. ಇವರು ಹೋದಲ್ಲೆಲ್ಲಾ ಸಾವಿರಾರು ಜನರನ್ನು ಸೇರಿಸಿಕೊಂಡು ಸಭೆ ಸಮಾರಂಭ ಮಾಡಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ. ಇವರ ವಿರುದ್ಧ ಪೊಲೀಸರು ಯಾವ ಪ್ರಕರಣವನ್ನು ದಾಖಲಿಸಿಲ್ಲ ಯಾಕೆ?' ಎಂದು ಪ್ರಶ್ನಿಸಿದರು.

ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಜನ ಜಾತ್ರೆ: ಇವರಿಗೆ ಕೊರೋನಾ ರೂಲ್ಸ್ ಅನ್ವಯಿಸಲ್ವಾ?

ಇತ್ತೀಚೆಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮ ಆಚರಿಸಲು ಸರ್ಕಾರ ಅನುಮತಿ ನಿರಾಕರಿಸಿತ್ತು. ಇನ್ನು ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಅವರ 300 ಬೆಂಬಲಿಗರ ವಿರುದ್ಧ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಆ ಮೂಲಕ ಬಿಜೆಪಿ ನಾಯಕರು ಕಾನೂನಿಗಿಂತ ದೊಡ್ಡವರು ಎಂಬಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಪೊಲೀಸ್ ಅಧಿಕಾರಿಗಳು ಕೂಡ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹಬ್ಬ, ಜಾತ್ರೆ, ಜಾಥಾಗಳಿಗೆ ನಿರ್ಬಂಧ ಹೇರಿರುವ ಸಂದರ್ಭದಲ್ಲಿ ಜನಾಶೀರ್ವಾದ ಯಾತ್ರೆ ನಡೆಸುವುದಕ್ಕೆ ಅನುಮತಿ ನೀಡಲಾಗಿದೆಯೇ? ಅಭಿವೃದ್ಧಿ ಬಗ್ಗೆ ಗಮನಹರಿಸಬೇಕಾದ ಕೇಂದ್ರ ಸಚಿವರು ಯಾವುದೇ ಕೆಲಸ ಮಾಡದೇ ಜನರ ಆಶೀರ್ವಾದ ಪಡೆಯಲು ಮುಂದಾಗಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow Us:
Download App:
  • android
  • ios