Asianet Suvarna News Asianet Suvarna News

ರಾಹುಲ್‌ ಗಾಂಧಿ ಮುಂದೆ ಅಪ್ಪನ ಕಳೆದುಕೊಂಡ ಪುಟಾಣಿ ಕಣ್ಣೀರು!

ಅಪ್ಪ ಇದ್ದಾಗ ಏನು ಕೇಳಿದರೂ ಇಲ್ಲ ಎನ್ನುತ್ತಿರಲಿಲ್ಲ. ಆದರೆ, ಅಪ್ಪ ಆಕ್ಸಿಜನ್‌ ದುರಂತದಲ್ಲಿ ತೀರಿ ಹೋದರು. ಅಮ್ಮನಿಗೆ ಈಗ ಒಂದು ಪೆನ್ಸಿಲ್‌ ಕೊಡಿಸಲು ಕಷ್ಟವಾಗುತ್ತಿದೆ. ಅಮ್ಮನಿಗೊಂದು ಸರ್ಕಾರಿ ಕೆಲಸ ಕೊಟ್ಟರೆ ನನ್ನ ಓದಿಗೆ ಸಹಾಯವಾಗುತ್ತೆ. 

cried of a girl who lost her father in front of rahul gandhi in gundlupet gvd
Author
First Published Oct 1, 2022, 11:27 AM IST

ಗುಂಡ್ಲುಪೇಟೆ (ಅ.01): ‘ಅಪ್ಪ ಇದ್ದಾಗ ಏನು ಕೇಳಿದರೂ ಇಲ್ಲ ಎನ್ನುತ್ತಿರಲಿಲ್ಲ. ಆದರೆ, ಅಪ್ಪ ಆಕ್ಸಿಜನ್‌ ದುರಂತದಲ್ಲಿ ತೀರಿ ಹೋದರು. ಅಮ್ಮನಿಗೆ ಈಗ ಒಂದು ಪೆನ್ಸಿಲ್‌ ಕೊಡಿಸಲು ಕಷ್ಟವಾಗುತ್ತಿದೆ. ಅಮ್ಮನಿಗೊಂದು ಸರ್ಕಾರಿ ಕೆಲಸ ಕೊಟ್ಟರೆ ನನ್ನ ಓದಿಗೆ ಸಹಾಯವಾಗುತ್ತೆ. ನಾನು ಓದಿ ವೈದ್ಯಳಾಗುತ್ತೇನೆ. ಇಂತಹ ದುರಂತಗಳಾಗದಂತೆ ನೋಡಿಕೊಳ್ಳುತ್ತೇನೆ..’ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್‌ ದುರಂತದಲ್ಲಿ ತನ್ನ ತಂದೆಯನ್ನು ಕಳೆದುಕೊಂಡು ನಾಲ್ಕು ವರ್ಷದ ಪುಟಾಣಿ ಅಳಲು. 

ಆಕ್ಸಿಜನ್‌ ದುರಂತದಲ್ಲಿ ಮೃತರ ಕುಟುಂಬದವರೊಂದಿಗಿನ ರಾಹುಲ್‌ ಸಂವಾದದ ವೇಳೆ ವೇದಿಕೆಗೆ ಆಗಮಿಸಿದ ಈ ಪುಟಾಣಿ ಉಮ್ಮಳಿಸುತ್ತಾ ಈ ಹೇಳಿದ ಈ ಮಾತುಗಳು ಸ್ಥಳದಲ್ಲಿದ್ದ ಎಲ್ಲರ ಕಣ್ಣು ತೇವಗೊಳಿಸಿತು. ಮಗು ಹೇಳಿಕೆಯನ್ನು ಭಾಷಾಂತರ ಮಾಡುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭಾವನೆ ತಡೆಗಟ್ಟಲಾಗದೇ ಕಣ್ಣೀರಾದರು. ಆ ಬಾಲಕಿ ಮಾತ್ರವಲ್ಲ ಆಕ್ಸಿಜನ್‌ ದುರಂತ ಹಾಗೂ ಕೋವಿಡ್‌ನಿಂದ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡ 40 ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ತಮ್ಮ ನೋವನ್ನು ಯುವರಾಜನ ಮುಂದೆ ತೆರೆದಿಟ್ಟು ಗದ್ಗದಿಸಿದರು. ಹೆಣ್ಣು ಮಕ್ಕಳಂತೂ ಕಣ್ಣೀರಲ್ಲೇ ತೋಯ್ದು ಹೋದರು.

Bharat Jodo Yatra: ರಾಹುಲ್‌ ಸ್ವಾಗತಕ್ಕೆ ರಾಜ್ಯದ ಗಡೀಲಿ ಕಾಂಗ್ರೆಸ್ ನಾಯಕರೇ ಇರಲಿಲ್ಲ!

ಅಪ್ಪನನ್ನು ಕಳೆದುಕೊಂಡ ಪುಟಾಣಿ ಬಾಲಕಿ, ಅಪ್ಪ ಸತ್ತ ಮೇಲೆ ಅಮ್ಮನ ಕೈಯಲ್ಲಿ ಒಂದು ಪೆನ್ಸಿಲ್‌ ಕೂಡ ತಂದುಕೊಡಲಾಗುತ್ತಿಲ್ಲ. ನನ್ನ ಅಪ್ಪನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಆದರೂ ನಾನು ಓದಿ ವೈದ್ಯಳಾಗುತ್ತೇನೆ. ಇಂತಹ ದುರ್ಘಟನೆಗಳು ಆಗದಂತೆ ನೋಡಿಕೊಳ್ಳುತ್ತೇನೆ. ಜನರ ಸೇವೆ ಮಾಡುತ್ತೇನೆ. ಇದು ಸಾಧ್ಯವಾಗಬೇಕಾದರೆ ನನ್ನ ತಾಯಿಗೊಂದು ಸರ್ಕಾರಿ ಉದ್ಯೋಗ ಕೊಡಿಸಿ ಎಂದು ಅಳುತ್ತಲೇ ಮನವಿ ಮಾಡಿದಳು. ರಾಹುಲ್‌ ಮತ್ತು ಪಕ್ಕದಲ್ಲಿದ್ದ ಸಿದ್ದರಾಮಯ್ಯ ಅವರು ಆ ಪುಟಾಣಿಯನ್ನು ಸಮಾಧಾನ ಪಡಿಸಿದರು.

ನ್ಯಾಯ ಸಿಕ್ಕಿಲ್ಲ: ಆಕ್ಸಿಜನ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಅನೇಕ ಸದಸ್ಯರು ಮಾತನಾಡಿ, ಘಟನೆ ನಡೆದು ವರ್ಷವೇ ಕಳೆಯಿತು. ಆದರೂ ನಮಗೆ ನ್ಯಾಯ ಸಿಕ್ಕಿಲ್ಲ. ಘಟನೆಯ ಬಗ್ಗೆ ಸರ್ಕಾರ ಸಮರ್ಪಕ ತನಿಖೆ ನಡೆಸಿ ತಪ್ಪುತಸ್ಥರಿಗೆ ಶಿಕ್ಷೆ ನೀಡುವ ಕೆಲಸವನ್ನೂ ಮಾಡಿಲ್ಲ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನೂ ಒದಗಿಸಿಲ್ಲ. ಅಲ್ಪ ಸ್ವಲ್ಪ ಪರಿಹಾರ ನೀಡಿ ಕೈತೊಳೆದುಕೊಂಡಿದೆ. ಇದರಿಂದ ನಮ್ಮ ಕುಟುಂಬಗಳ ಗೋಳು ಕೇಳುವವರಿಲ್ಲದಾಗಿದೆ ಎಂದು ರಾಹುಲ್‌ ಮುಂದೆ ಅಳಲು ತೋಡಿಕೊಂಡರು. ಇದೆ ವೇಳೆ, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳ ಸದಸ್ಯರು ಕೂಡ ಸಂವಾದದಲ್ಲಿ ಪಾಲ್ಗೊಂಡು ಕೋವಿಡ್‌ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಸರಿಯಾಗಿ ಹಾಸಿಗೆ ಸಿಗದೆ, ಚಿಕಿತ್ಸೆ, ಔಷಧಗಳು ಸಿಗದೆ ಅನುಭವಿಸಿದ ನೋವನ್ನು ತೆರೆದಿಟ್ಟರು.

ಜನರ ನೋವು ಆಲಿಸಲು ಭಾರತ ಐಕ್ಯತಾ ಯಾತ್ರೆ: ರಾಹುಲ್‌ ಗಾಂಧಿ

ರಾಹುಲ್‌ ಅಭಯ ಹಸ್ತ!: ತಮ್ಮ ಮುಂದೆ ನೋವು ತೋಡಿಕೊಂಡ ಜನರಿಗೆ ಸಾಂತ್ವನ ಹೇಳಿದ ರಾಹುಲ್‌ ಗಾಂಧಿ ಅವರು ಸಂಕಷ್ಟದಲ್ಲಿರುವ ನಿಮ್ಮ ಕುಟುಂಬಗಳಿಗೆ ಈಗ ಎಷ್ಟು ಸಾಧ್ಯವೋ ಅಷ್ಟು ಪರಿಹಾರ ಕಲ್ಪಿಸುವ ಕೆಲಸವನ್ನ ನಮ್ಮ ಪಕ್ಷದಿಂದ ಮಾಡುತ್ತೇವೆ. ಮುಂದೆ ನಮ್ಮ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಆಗ ಈ ದುರಂತದ ಪರಿಶೀಲನೆ ನಡೆಸಿ ನ್ಯಾಯಯುತವಾದ ಪರಿಹಾರ ಕೊಡಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಮುಂದೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ. ಆಗ ಇಡೀ ಘಟನೆ ಬಗ್ಗೆ ಮರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಹೇಳಿದರು. ದುಃಖತಪ್ತ ಕುಟುಂಬಗಳ ಜೊತೆ ಕಾಂಗ್ರೆಸ್‌ ಸದಾ ಇರುತ್ತದೆ. ನಿಮ್ಮ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತದೆ ಎಂದು ಭರವಸೆ ನೀಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡ ಜನರು ಚಿಕಿತ್ಸೆಗೆ ಬರುವ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಲಕ್ಷಿಸುತ್ತಿದೆ. ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಿಲ್ಲ. ಈ ಬಗ್ಗೆ ದನಿ ಕಾಂಗ್ರೆಸ್‌ ದನಿ ಎತ್ತಲಿದೆ ಎಂದರು.

Follow Us:
Download App:
  • android
  • ios