Asianet Suvarna News Asianet Suvarna News

ಬಿಜೆಪಿಗೆ ವಿರೋಧ ಪಕ್ಷ ಸ್ಥಾನ ಖಾಯಂ: ಡಿ.ಕೆ.ಶಿವಕುಮಾರ್‌

ಮುಂಬರುವ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಗೆ ವಿರೋಧ ಪಕ್ಷ ಸ್ಥಾನ ಖಾಯಂ. ಅಧಿಕಾರ ನಡೆಸಲು ಅವರು ಲಾಯಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. 

KPCC President DK Shivakumar Slams On BJP Govt gvd
Author
First Published Jan 26, 2023, 1:30 AM IST

ದೊಡ್ಡಬಳ್ಳಾಪುರ (ಜ.26): ಮುಂಬರುವ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಗೆ ವಿರೋಧ ಪಕ್ಷ ಸ್ಥಾನ ಖಾಯಂ. ಅಧಿಕಾರ ನಡೆಸಲು ಅವರು ಲಾಯಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಮುಳುಗಿರುವ ಜನಪರ ಕಾಳಜಿಯಿಲ್ಲದ ಈ ಸರ್ಕಾರವನ್ನು ತೆಗೆಯಲೇ ಬೇಕು ಎಂದು ರಾಜ್ಯದ ಜನ ನಿರ್ಧಾರ ಮಾಡಿದ್ದಾರೆ. ಬಿಜೆಪಿ ಕಳೆದ ಚುನಾವಣೆಯಲ್ಲಿ ಕೊಟ್ಟಿದ್ದ 600 ಭರವಸೆಗಳಲ್ಲಿ ಕೇವಲ 50 ಭರವಸೆಗಳನ್ನು ಮಾತ್ರ ಈಡೇರಿಸಿದೆ. ಈ ಮೂಲಕ ನುಡಿದಂತೆ ನಡೆಯದ ಕಳಂಕ ಹೊತ್ತಿದ್ದಾರೆ ಎಂದು ಟೀಕಿಸಿದರು.

200 ಯೂನಿಟ್‌ ಉಚಿತ: 2000 ರು. ಖಚಿತ: ಕಾಂಗ್ರೆಸ್‌ ಈಗಾಗಲೇ 2 ಮಹತ್ವದ ಭರವಸೆಗಳನ್ನು ಜನರ ಮುಂದೆ ಇಟ್ಟಿದೆ. 200 ಯೂನಿಟ್‌ವರೆಗೆ ವಿದ್ಯುತ್‌ ಉಚಿತ, ಮನೆ ಯಜಮಾನಿಗೆ 2 ಸಾವಿರ ರು. ಖಚಿತ ಎಂಬುದು ನುಡಿದಂತೆ ನಡೆಯುವ ಕಾಂಗ್ರೆಸ್‌ನ ಖಚಿತ ಭರವಸೆ. ಎಲ್ಲ ವರ್ಗಗಳ ಹಿತರಕ್ಷಣೆ ಕಾಂಗ್ರೆಸ್‌ನ ಮೊದಲ ಆದ್ಯತೆಯಾಗಿದೆ ಎಂದರು.

ಬೊಮ್ಮಾಯಿ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ, ಬಿಜೆಪಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲ್ಲ: ರಣದೀಪ್ ಸುರ್ಜೇವಾಲ

ದೇಶ, ಹೃದಯಗಳ ಬೆಸೆವ ಕಾಂಗ್ರೆಸ್‌: ದೇಶದಲ್ಲಿ ಒಡೆದು ಹೋಗಿರುವ ಹೃದಯಗಳು, ಭಾವನೆಗಳನ್ನು ಬೆಸೆಯುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಈ ದೇಶಕ್ಕೆ 10 ವರ್ಷಗಳ ಕಾಲ ಪ್ರಧಾನಿಯಾಗುವ ಅವಕಾಶ ಬಂದರೂ ಅಧಿಕಾರವನ್ನು ತ್ಯಾಗ ಮಾಡಿದ ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಅವರ ನಡೆ ಅನನ್ಯವಾದದ್ದು. ಭಾರತ್‌ ಜೋಡೋ ಯಾತ್ರೆ ಮೂಲಕ 3750 ಕಿಲೋ ಮೀಟರ್‌ ನಡೆದಿದ್ದಾರೆ. ಕರ್ನಾಟಕದಲ್ಲಿ 350 ಕಿ.ಮೀ ಪಾದಯಾತ್ರೆ ಯಶಸ್ವಿಯಾಗಿ ನಡೆದಿತ್ತು. ಮೇಕೇದಾಟು ಪಾದಯಾತ್ರೆ ಸಂದರ್ಭದಲ್ಲೂ ಜನತೆ ನೀಡಿದ ಸಹಕಾರ ಗಣನೀಯ. ದ್ವೇಷ, ಅಸಹಿಷ್ಣುತೆ, ಭ್ರಷ್ಟಾಚಾರವನ್ನು ತೊಡೆದುಹಾಕಲು ಜನತೆ ಈಗ ಕಾಂಗ್ರೆಸ್‌ನೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ ಎಂದರು.

ಟೀಕೆ ಸಾಯುತ್ತೆ; ಕೆಲಸ ಉಳಿಯುತ್ತೆ: ಕಾಂಗ್ರೆಸ್‌ ಬಗ್ಗೆ ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರು ಭ್ರಮೆಯಲ್ಲಿದ್ದಾರೆ. ಆದರೆ ಟೀಕೆ ಸಾಯುತ್ತೆ; ಸತ್ಯ ಮತ್ತು ಕೆಲಸ ಉಳಿಯುತ್ತೆ. ಕುವೆಂಪು ಅವರು ಕಂಡ ಸಾಮರಸ್ಯದ ನೆಲ ನಮ್ಮದು. ಕಾಂಗ್ರೆಸ್‌ ಹಲವು ಭಾಗ್ಯಗಳ ಮೂಲಕ ಜನರಿಗೆ ಭದ್ರತೆಯ ಬದುಕು ನೀಡಿತ್ತು. ಬಿಜೆಪಿಯವರು 1 ಸೈಕಲ್‌, 1 ಸೀರೆ ಕೊಟ್ಟಿದ್ದು ಬಿಟ್ಟರೆ ಜನರ ಬದುಕನ್ನು ಹಸನು ಮಾಡುವ ಯಾವುದೇ ಯೋಜನೆ ಕೊಡಲಿಲ್ಲ ಎಂದರು.

4ಕ್ಕೆ 4 ಸ್ಥಾನ ಗೆಲ್ಲಿಸಿ: ಬೆಂ.ಗ್ರಾ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲೂ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ದೊಡ್ಡಬಳ್ಳಾಪುರ ಸೇರಿದಂತೆ ಎಲ್ಲೆಡೆ ಎಲ್ಲ ನಾಯಕರು, ಕಾರ‍್ಯಕರ್ತರನ್ನು ಒಟ್ಟಿಗೆ ಸೇರಿಸಿಕೊಂಡು ಹೋಗುವ ಕೆಲಸ ಮಾಡಬೇಕು. ನೆಲಮಂಗಲ ಮತ್ತು ದೇವನಹಳ್ಳಿಯಲ್ಲಿ ಯಾರೇ ಅಭ್ಯರ್ಥಿಯಾದರೂ ಜನತೆ ಕಾಂಗ್ರೆಸ್‌ ಪಕ್ಷ, ಸಿದ್ದರಾಮಯ್ಯ, ಶಿವಕುಮಾರ್‌ ಅವರೇ ಅಭ್ಯರ್ಥಿ ಎಂಬ ಭಾವನೆಯಲ್ಲಿ ಸಂಘಟಿತ ಪ್ರಯತ್ನ ಮಾಡಿ ಗೆಲ್ಲುವುದನ್ನೇ ಗುರಿಯಾಗಿಸಿಕೊಳ್ಳಬೇಕು ಎಂದರು.

ಬೆಲೆ ಏರಿಕೆ ಬಿಜೆಪಿ ಸಾಧನೆ: ಬಡ ಮತ್ತು ಮಧ್ಯಮವರ್ಗದ ಜನರ ಬದುಕನ್ನು ಕಸಿದುಕೊಂಡಿದ್ದು, ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಬಿಜೆಪಿ ಸಾಧನೆ ಎಂದು ಟೀಕಿಸಿದ ಅವರು, ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌, ದಿನಬಳಕೆ ವಸ್ತುಗಳು, ಅಡುಗೆ ಎಣ್ಣೆ ಇತ್ಯಾದಿ ಸೇರಿದಂತೆ ಎಲ್ಲ ಬೆಲೆಗಳು ಗಗನಮುಖಿಯಾಗಿವೆ. ಇದನ್ನು ನಿಯಂತ್ರಿಸದೆ ಕ್ಷುಲ್ಲಕ ವಿಚಾರಗಳ ರಾಜಕಾರಣ ಮಾಡುತ್ತಿರುವ ಬಿಜೆಪಿ ನಡೆ ಅಕ್ಷಮ್ಯ ಎಂದರು. ರೈತರಿಗೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 7 ಗಂಟೆ ಕಾಲ ತ್ರೀಫೇಸ್‌ ವಿದ್ಯುತ್‌ ನೀಡಲಾಗುತ್ತಿತ್ತು. ಮುಂದೆ ಅಧಿಕಾರಕ್ಕೆ ಬಂದರೆ 10 ಗಂಟೆ ಕಾಲ ಕೃಷಿ ಚಟುವಟಿಕೆಗಳಿಗೆ ತ್ರೀಫೇಸ್‌ ವಿದ್ಯುತ್‌ ನೀಡಲಾಗುವುದು. ಈ ಹಂತದಲ್ಲಿ ಬಿಜೆಪಿ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದರು.

ಬಿಜೆಪಿಗರು ಬೊಮ್ಮಾಯಿ ಬಿಟ್ಟು ಮೋದಿ ಮುಖ ತೋರಿಸ್ತಿದ್ದಾರೆ: ಡಿ.ಕೆ.ಶಿವಕುಮಾರ್‌

ಕಾರ‍್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ, ಎಂ.ವೀರಪ್ಪ ಮೊಯ್ಲಿ, ಮುಖಂಡರಾದ ರಾಮಲಿಂಗಾರೆಡ್ಡಿ, ಎಲ್‌.ಹನುಮಂತಯ್ಯ, ಟಿ.ಬಿ.ಜಯಚಂದ್ರ, ಕೃಷ್ಣ ಬೈರೇಗೌಡ, ಎಸ್‌.ರವಿ, ಶಾಸಕ ಟಿ.ವೆಂಕಟರಮಣಯ್ಯ, ಶರತ್‌ ಬಚ್ಚೇಗೌಡ, ಮಾಜಿ ಶಾಸಕರಾದ ಆರ್‌.ಜಿ.ವೆಂಕಟಾಚಲಯ್ಯ, ಆಂಜನಮೂರ್ತಿ ಮತ್ತಿತರರು ಹಾಜರಿದ್ದರು.

Follow Us:
Download App:
  • android
  • ios