Council Election Karnataka: ಮುಂದೆ ಸೂಕ್ತ ಹುದ್ದೆ : ಮುಖಂಡಗೆ ಡಿಕೆಶಿ ಭರವಸೆ
- ವಿಧಾನ ಪರಿಷತ್ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ
- ಎಸ್.ಆರ್.ಪಾಟೀಲ್ ಅವರನ್ನು ಶನಿವಾರ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಮಾಲೋಚನೆ
ಬೆಂಗಳೂರು (ಡಿ.05): ವಿಧಾನ ಪರಿಷತ್ ಟಿಕೆಟ್ (MLC Election ) ಸಿಗದೆ ಅಸಮಾಧಾನಗೊಂಡಿದ್ದ ಕಾಂಗ್ರೆಸ್(Congress) ಹಿರಿಯ ಮುಖಂಡ ಎಸ್.ಆರ್.ಪಾಟೀಲ್(SR patil) ಅವರನ್ನು ಶನಿವಾರ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರು ಸಮಾಲೋಚನೆ ನಡೆಸಿದರು. ನಗರದಲ್ಲಿರುವ ಪಾಟೀಲ್ ನಿವಾಸಕ್ಕೆ ತೆರಳಿದ ಶಿವಕುಮಾರ್, ‘ನೀವು ಹಿರಿಯರಾಗಿದ್ದು ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ. ಪಕ್ಷದಲ್ಲಿ ಸಕ್ರಿಯರಾಗಿರಿ’ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪಾಟೀಲ್ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ನ 25 ಸ್ಥಾನಗಳಿಗೆ ಡಿ.10 ರಂದು ಚುನಾವಣೆ (election) ನಡೆಯಲಿದೆ. ಪರಿಷತ್ ಪ್ರತಿಪಕ್ಷ ನಾಯಕರೂ ಆಗಿರುವ ಪಾಟೀಲ್ ಅವರು ವಿಜಯಪುರ (Vijayapura) ಜಿಲ್ಲೆಯಿಂದ ಚುನಾಯಿತರಾಗಿದ್ದು ಪುನರಾಯ್ಕೆ ಬಯಸಿದ್ದರೂ ಟಿಕೆಟ್ ನಿರಾಕರಿಸಲಾಗಿತ್ತು. ಕಳೆದ ವಾರವೂ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಶಿವಕುಮಾರ್ ಮಾತುಕತೆ ನಡೆಸಿದ್ದರು. ಇದೀಗ ಪುನಃ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ. ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.
ವಿಶ್ವಾಸವೇ ಕೈಕೊಟ್ಟಿತು :
ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಮುಂಚೂಣಿ ನಾಯಕರಾಗಿದ್ದ ಸದ್ಯ ಪ್ರತಿಪಕ್ಷದ ನಾಯಕರೂ ಆಗಿರುವ ಎಸ್.ಆರ್.ಪಾಟೀಲ(SR Patil) ಅವರಿಗೆ ಟಿಕೆಟ್ ಕೈತಪ್ಪಲು ಅವರು ಹೊಂದಿದ್ದ ಅತಿಯಾದ ಆತ್ಮವಿಶ್ವಾಸ ಹಿನ್ನಡೆಯಾಯಿತೆ? ಅಥವಾ ಬೆಂಗಳೂರು(Bengaluru) ಹಾಗೂ ದೆಹಲಿಯಲ್ಲಿದ್ದು(Delhi) ಲಾಬಿ ಮಾಡುವ ಬದಲು ಸ್ವಕ್ಷೇತ್ರದಲ್ಲಿಯೇ ಇದ್ದು ಟಿಕೆಟ್ ಪಡೆಯುವ ಅತಿಯಾದ ನಂಬಿಕೆ ಅವರಿಗೆ ಟಿಕೆಟ್ ಸಿಗದೆ ಇರಲು ಕಾರಣವಾಯಿತೆ? ಎಂಬ ಚರ್ಚೆ ಅವಳಿ ಜಿಲ್ಲೆಯಲ್ಲಿ ಆರಂಭಗೊಂಡಿದೆ.
ನಾಲ್ಕು ದಶಕಗಳ ಕಾಲ ಕಾಂಗ್ರೆಸ್(Congress) ಪಕ್ಷದ ಕಾರ್ಯಕರ್ತರಾಗಿ, ನಾಯಕರಾಗಿ, ಪರಿಷತ್ ಸದಸ್ಯರಾಗಿ, ಸಚಿವರಾಗಿ, ಪಕ್ಷದ ಕಾರ್ಯಾಧ್ಯಕ್ಷರಾಗಿ, ಪ್ರತಿಪಕ್ಷದ ನಾಯಕರಾಗಿದ್ದ ಎಸ್.ಆರ್. ಪಾಟೀಲ ಅವರಿಗೆ ಸದ್ಯ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿಕೆಟ್ ತಪ್ಪಿರುವುದು ಬಾಗಲಕೋಟೆ(Bagalkot) ಹಾಗೂ ವಿಜಯಪುರ(Vijayapura) ಜಿಲ್ಲೆಯಲ್ಲಿನ ಕಾಂಗ್ರೆಸ್ ವಲಯದಲ್ಲಿ ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
Bitcoin Scam| ಸಿಎಂ ಬೊಮ್ಮಾಯಿ ಬಿಜೆಪಿ ನಾಯಕರ ಹೆಸರು ಹೇಳಲಿ: ಸಿದ್ದರಾಮಯ್ಯ
1987ರಿಂದಲೇ ಜಿಲ್ಲಾ ಪಂಚಾಯ್ತಿ ರಾಜಕಾರಣದಿಂದ(Politics) ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಅಖಂಡ ವಿಜಯಪುರ ಜಿಲ್ಲೆಯ ಜಿಲ್ಲಾ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿ ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಎಸ್.ಆರ್.ಪಾಟೀಲ ಬಾಗಲಕೋಟೆ ಪಟ್ಟಣ ಪ್ರಾಧಿಕಾರದ ಅಧ್ಯಕ್ಷರಾಗಿ 1994ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರದ ಬೆಳವಣಿಗೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಧಾನ ಪರಿಷತ್ತನ್ನು(Vidhan Parishat) ಪ್ರವೇಶಿಸಿದ ಎಸ್.ಆರ್.ಪಾಟೀಲ ಕಳೆದ 24 ವರ್ಷಗಳಿಂದ ಹಿಂದಿರುಗಿ ನೋಡಿರಲಿಲ್ಲ. ರಾಜಕಾರಣದಲ್ಲಿನ ವಿದ್ಯಮಾನಗಳನ್ನು ಮಾತ್ರ ಅವಲೋಕಿಸುತ್ತಿದ್ದ ಎಸ್.ಆರ್.ಪಾಟೀಲ ಒಳಸುಳಿವುಗಳನ್ನು ಅರ್ಥೈಸಿಕೊಂಡು ರಾಜಕಾರಣ ಮಾಡಲಾರದೆ ಇರುವುದು ಸಹ ಹಲವು ಬಾರಿ ಅವರ ಅಧಿಕಾರಯುತ ರಾಜಕಾರಣಕ್ಕೆ ಹಿನ್ನಡೆಗಳು ಆಗಿದ್ದವು
ಕೈಕೊಟ್ಟ ಅತಿಯಾದ ವಿಶ್ವಾಸ:
ನಾಲ್ಕು ಬಾರಿ ಪರಿಷತ್ತಿನ ಸದಸ್ಯರಾಗಿದ್ದ ಎಸ್.ಆರ್.ಪಾಟೀಲ ಸದ್ಯ ಪ್ರತಿಪಕ್ಷದ ನಾಯಕರು ಆಗಿದ್ದರಿಂದ ಯಾವುದೇ ಕಾರಣಕ್ಕೆ ಟಿಕೆಟ್ ಕೈ ತಪ್ಪುವುದಿಲ್ಲ ಎಂಬ ನಂಬಿಕೆ ಅವರ ಟಿಕೆಟ್ ಕೈತಪ್ಪಲು ಕಾರಣವಾಯಿತೆ ಎಂಬ ಪ್ರಶ್ನೆ ಕೂಡ ಮೂಡಲಾರಂಭಿಸಿದೆ. ಲಾಬಿ ರಾಜಕಾರಣವನ್ನು ಮಾಡದೇ ಇರುವುದು, ಟಿಕೆಟ್ ಹಂಚಿಕೆಯಂತಹ ಸಂದರ್ಭಗಳಲ್ಲಿ ಅದರಲ್ಲೂ ಕೊನೆ ಹಂತದ ಸಮಯದಲ್ಲಿ ಯಾವುದೇ ಲಾಬಿ ಮಾಡದೆ ದೆಹಲಿಗೂ ತೆರಳದೇ ಮೌನಕ್ಕೆ ಶರಣಾಗಿರುವುದು ಟಿಕೆಟ್ ಕೈತಪ್ಪಿದೆ ಎಂಬ ಮಾತೂ ಕೇಳಿಬಂದಿದೆ. ಹೀಗಾಗಿ ವಿಜಯಪುರದ ಪ್ರಭಾವಿ ನಾಯಕ ಎಂ.ಬಿ.ಪಾಟೀಲ ತಮ್ಮ ಸಹೋದರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ಕು ದಶಕಗಳ ರಾಜಕಾರಣದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಕಾಯ್ದುಕೊಂಡಿರುವ ಎಸ್.ಆರ್.ಪಾಟೀಲ ಪಕ್ಷದ ವಲಯದಲ್ಲಿ ನೇರ ಮಾತುಗಳನ್ನಾಡುವುದು ಸಹ ಹಲವರಿಗೆ ಕಹಿಯಾಗಿತ್ತು. ಜೊತೆಗೆ ಉತ್ತರ ಕರ್ನಾಟಕದ(North Karnataka) ಹಲವು ಜಿಲ್ಲೆಗಳಲ್ಲಿ ಚಿರಪರಿಚಿತರಾಗಿದ್ದ ಎಸ್.ಆರ್.ಪಾಟೀಲ ಅವರ ಮುಂದಿನ ರಾಜಕೀಯ ಮತ್ತಷ್ಟು ವಿಸ್ತರಿಸಬಾರದು ಎಂಬ ಒಂದು ಗುಂಪು ವ್ಯವಸ್ಥಿತವಾಗಿ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿರಬಹುದು ಎಂದು ಕಾಂಗ್ರೆಸ್ ವಲಯದಲ್ಲಿಯೇ ಕೇಳಿಬರುತ್ತಿರುವ ಮಾತಾಗಿದೆ.