Asianet Suvarna News Asianet Suvarna News

ಬಿಜೆಪಿಗೆ ಸೆಡ್ಡು ಹೊಡೆದು ಜೆಡಿಎಸ್ ಸೇರಿದ್ದ ಸಿವಿ ಚಂದ್ರಶೇಖರ್: ಗೆಲುವಿಗಾಗಿ ಗವಿಶ್ರೀಗಳ ಮುಂದೆ ಕಣ್ಣೀರು!

ಬಿಜೆಪಿಗೆ ಸೆಡ್ಡು ಹೊಡೆದು ಹೊರ ಬಂದು ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿರುವ ಸಿ.ವಿ. ಚಂದ್ರಶೇಖರ ಗುರುವಾರ ಬೃಹತ್‌ ಮೆರವಣಿಗೆ ನಡೆಸಿ, ಶಕ್ತಿ ಪ್ರದರ್ಶನ ಮಾಡಿದರು. ಮೆರವಣಿಗೆಯಲ್ಲಿದ್ದ ಬೃಹತ್‌ ಜನಸ್ತೋಮವೇ ಅವರ ಜನಪ್ರಿಯತೆಗೆ ಸಾಕ್ಷಿಯಾಯಿತು.

Koppal jds candidate cv chandrasheka nomination campaing at koppal rav
Author
First Published Apr 21, 2023, 1:27 PM IST

ಕೊಪ್ಪಳ (ಏ.21) : ಬಿಜೆಪಿಗೆ ಸೆಡ್ಡು ಹೊಡೆದು ಹೊರ ಬಂದು ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿರುವ ಸಿ.ವಿ. ಚಂದ್ರಶೇಖರ ಗುರುವಾರ ಬೃಹತ್‌ ಮೆರವಣಿಗೆ ನಡೆಸಿ, ಶಕ್ತಿ ಪ್ರದರ್ಶನ ಮಾಡಿದರು. ಮೆರವಣಿಗೆಯಲ್ಲಿದ್ದ ಬೃಹತ್‌ ಜನಸ್ತೋಮವೇ ಅವರ ಜನಪ್ರಿಯತೆಗೆ ಸಾಕ್ಷಿಯಾಯಿತು.

ನಗರದ ಶ್ರೀ ಗವಿಸಿದ್ಧೇಶ್ವರಮಠ(Sri gavisiddeshwar)ದ ಆವರಣದಲ್ಲಿ ಜಮಾಯಿಸಿದ ಜನಸಮೂಹವನ್ನು ಕಂಡು ಸಿ.ವಿ. ಚಂದ್ರಶೇಖರ(CV Chandrashekhar) ಭಾವುಕರಾದರು. ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಈ ವೇಳೆ ಕಣ್ಣೀರು ಹಾಕಿದರು. ಶ್ರೀಗಳ ಆಶೀರ್ವಾದ ಪಡೆದ ಆನಂತರ ಮೆರವಣಿಗೆಗೆ ಚಾಲನೆ ನೀಡಿದರು. ದೊಡ್ಡ ವಾದ್ಯ, ನಂದಿಕೋಲು ಸೇರಿದಂತೆ ಹತ್ತಾರು ಬಗೆಯ ಮಜಲುಗಳು ಮೆರವಣಿಗೆಗೆ ಮೆರಗು ನೀಡಿದವು.

ಕೊಪ್ಪಳದಲ್ಲಿ ರಾಘವೇಂದ್ರ ಹಿಟ್ನಾಳ ವಿರುದ್ಧ ಅಖಾಡಕ್ಕೆ ಇಳಿಯೋರು ಯಾರು?

ಜೆಡಿಎಸ್‌ ಹಾಡು ಮತ್ತು ಕುಮಾರಸ್ವಾಮಿ(JDS HD Kumaraswamy) ಅವರು ಸಿಎಂ ಆಗಿದ್ದ ವೇಳೆಯಲ್ಲಿ ಮಾಡಿದ ಸಾಧನೆಯ ಹಾಡುಗಳು ಮೊಳಗಿದವು. ಬದಲಾವಣೆಗಾಗಿ ಸಿವಿಸಿ ಬೆಂಬಲಿಸಿ ಎನ್ನುವ ಘೋಷಣೆ ಮೊಳಗುತ್ತಿದ್ದವು. ಸಿ.ವಿ. ಚಂದ್ರಶೇಖರ ಪರವಾಗಿ ಘೋಷಣೆ ಕೂಗುತ್ತಾ ಸಾಗಿದ ಮೆರವಣಿಗೆಯಲ್ಲಿ ಅಪಾರ ಪ್ರಮಾಣದ ಜನರಿದ್ದರು. ಹೀಗಾಗಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಜವಾಹರ ರಸ್ತೆಯುದ್ದಕ್ಕೂ ಮೆರವಣಿಗೆ ಸಾಗಿದ್ದರಿಂದ ಅಕ್ಕಪಕ್ಕದ ರಸ್ತೆಯಲ್ಲಿ ಸಂಚಾರ ದಟ್ಟಣ ಅಧಿಕವಾಗಿತ್ತು.

ಸಿವಿಸಿ ದಂಪತಿ ಕಣ್ಣೀರು, ಗವಿಶ್ರೀಗಳ ಸಾಂತ್ವನ

ನಾಮಪತ್ರ ಸಲ್ಲಿಸುವ ಮೊದಲು ಸಿವಿಸಿ ಕುಟುಂಬದವರು ಗವಿಮಠಕ್ಕೆ ಭೇಟಿ ನೀಡಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಗವಿಸಿದ್ದೇಶ್ವರ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಗವಿಶ್ರೀಯವರಿಂದ ಕಲ್ಲುಸಕ್ಕರೆ ಪಡೆದ ಆನಂತರ ಸಿವಿಸಿ ಗಳಗಳನೆ ಅಳತೊಡಗಿದರು. ಅವರನ್ನು ಸಮಾಧಾನಪಡಿಸುವ ಭರದಲ್ಲಿ ಅವರ ಧರ್ಮಪತ್ನಿ ಲಕ್ಷ್ಮೇದೇವಿ ಸಹ ಕಣ್ಣೀರು ಹಾಕಿದರು. ಒಂದು ಕ್ಷಣ ಮೌನಕ್ಕೆ ಶರಣಾದ ಆನಂತರ ಶ್ರೀಗಳು ಅವರಿಗೆ ಸಾಂತ್ವನ ಹೇಳಿ, ಎಲ್ಲದೂ ಒಳ್ಳೆಯದಾಗಲಿದೆ ಎಂದು ಹರಸಿ ಕಳುಹಿಸಿಕೊಟ್ಟರು.

ವಿಧಾನಸಭಾ ಚುನಾವಣೆ: ಕೊಪ್ಪಳ ಬಿಜೆಪಿ ಟಿಕೆಟ್‌ಗೆ ಸಿವಿಸಿ- ಕರಡಿ ಮೆಗಾ ಫೈಟ್‌!

ಮೆಚ್ಚುಗೆಗೆ ಪಾತ್ರವಾದ ಸ್ವಚ್ಛತಾ ಕಾರ್ಯ

ಸಿ.ವಿ. ಚಂದ್ರಶೇಖರ ನಾಮಪತ್ರ ಸಲ್ಲಿಕೆಯ ಮೆರವಣಿಗೆ ಗವಿಮಠದಿಂದ ಗಡಿಯಾರ ಕಂಬದತ್ತ ತೆರಳಿದ ತಕ್ಷಣ ಮಠದ ಆವರಣದಲ್ಲಿ ರಾಶಿ ರಾಶಿ ಕಸ ಕಂಡು ಬಂದಿತು. ನೀರು ಹಾಗೂ ಮಜ್ಜಿಗೆ ಪ್ಯಾಕೆಟ್‌ಗಳು, ಬಾಟಲ್‌ಗಳು, ಹೂವಿನ ಎಸಳುಗಳು, ಎಲೆಗಳು ಹಾಗೂ ಪ್ಲಾಸ್ಟಿಕ್‌ ಕಸ ಅಲ್ಲಲ್ಲಿ ಬಿದ್ದಿತ್ತು. ಐವತ್ತು ಮಹಿಳೆಯರ ತಂಡ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದವು. ಆನಂತರ ಆ ಚೀಲಗಳನ್ನು ಕಸ ವಿಲೇವಾರಿಗಾಗಿ ತರಿಸಿದ್ದ ಟ್ರ್ಯಾಕ್ಟರಗಳಿಗೆ ತುಂಬಿದರು. ಮೆರವಣಿಗೆ ಹಿಂಬಾಲಿಸಿದ ಆ ಮಹಿಳೆಯರು ಶಾರದಾ ಟಾಕೀಸ್‌ ರಸ್ತೆ, ಗಡಿಯಾರ ಕಂಬದ ವೃತ್ತ, ಆಝಾದ್‌ ವೃತ್ತ, ಹಿರೆಮಸೂತಿ ಹಾಗೂ ದುರ್ಗಾದೇವಿ ಗುಡಿ ಹತ್ತಿರ ಬಿದ್ದಿದ್ದ ಕಸವನ್ನೂ ಸುಡು ಬಿಸಿಲು ಲೆಕ್ಕಿಸದೇ ವಿಲೇವಾರಿ ಮಾಡಿದರು. ಇದು ಸುತ್ತಲೂ ನೆರೆದಿದ್ದ ಜನರ ಗಮನ ಸೆಳೆಯಿತು. ಸ್ವಚ್ಛತಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Follow Us:
Download App:
  • android
  • ios