ವಿಧಾನಸಭಾ ಚುನಾವಣೆ: ಕೊಪ್ಪಳ ಬಿಜೆಪಿ ಟಿಕೆಟ್‌ಗೆ ಸಿವಿಸಿ- ಕರಡಿ ಮೆಗಾ ಫೈಟ್‌!

  • ಬಿಜೆಪಿ ಟಿಕೆಟ್‌ಗೆ ಸಿವಿಸಿ- ಕರಡಿ ಮೆಗಾ ಫೈಟ್‌
  • ಅಖಾಡಕ್ಕೆ ಇಳಿಯಲು ಸಂಸದ ಸಂಗಣ್ಣ ಶಕ್ತಿಮೀರಿ ಯತ್ನ
  • ಕಳೆದ ಬಾರಿಯಂತೆ ಈ ಬಾರಿಯೂ ನಡೆಯುತ್ತಿದೆ ಹೈಡ್ರಾಮಾ
  • ಹೈಕಮಾಂಡ್‌ನ ಅಂಗಳಲ್ಲಿ ಕೊಪ್ಪಳ ಟಿಕೆಟ್‌ ಫೈಟ್‌
Karnataka assembly Elections: CVC- Karadi mega fight for Koppal BJP ticket at koppal rav

ಸೋಮರಡ್ಡಿ ಅಳವಂಡಿ

ಕೊಪ್ಪಳ (ಏ.3) : ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆ? ಇದು ಈಗ ಕ್ಷೇತ್ರದಾದ್ಯಂತ ಗಲ್ಲಿ, ಗಲ್ಲಿಯಲ್ಲೂ ಚರ್ಚೆಯಾಗುತ್ತಿದೆ. ಅಷ್ಟೇ ಯಾಕೆ, ಯಾರಿಗೆ ಟಿಕೆಟ್‌ ಸಿಗುತ್ತದೆ ಎಂದು ಬೆಟ್ಟಿಂಗ್‌ ಸಹ ಶುರುವಾಗಿದೆ. ಸಿವಿಸಿ (ಸಿ.ವಿ. ಚಂದ್ರಶೇಖರ), ಸಂಗಣ್ಣ ಕರಡಿ ನಡುವೆ ಯಾರಿಗೆ ಟಿಕೆಟ್‌? ಸಿಗುತ್ತದೆ ಎನ್ನುವುದಕ್ಕೂ ಬೆಟ್ಟಿಂಗ್‌ ಕಟ್ಟಲಾಗುತ್ತದೆ. ಕ್ಷೇತ್ರದಲ್ಲಿ ಚುನಾವಣೆಯ ಫಲಿತಾಂಶಕ್ಕಿಂತಲೂ ಬಿಜೆಪಿ ಟಿಕೆಟ್‌ ಕುತೂಹಲ ಹೆಚ್ಚಿದೆ.

ಟಿಕೆಟ್‌ ಯಾರಿಗೆ ಎನ್ನುವ ಕುರಿತು ಕ್ಷಣ ಕ್ಷಣಕ್ಕೂ ವದಂತಿಗಳು ಹರಡುತ್ತಲೇ ಇರುತ್ತವೆ. ಇದು ಬಿಜೆಪಿಯಲ್ಲಿಯೇ ನಾನಾ ಬೆಳವಣಿಗೆಗೆ ಕಾರಣವಾಗುತ್ತಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರ(Koppal assembly constituency)ದ ಟಿಕೆಟ್‌ ಕೇವಲ ಕೊಪ್ಪಳ ಕ್ಷೇತ್ರದ ಮೇಲೆ ಪರಿಣಾಮ ಬೀರುವುದಿಲ್ಲ. ಜಿಲ್ಲೆಯ ಐದು ಕ್ಷೇತ್ರಗಳ ಮೇಲೆ ಪರಿಣಾಮ ಬೀರುವಷ್ಟರ ಮಟ್ಟಿಗೆ ಚರ್ಚೆಯಾಗುತ್ತಿದೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಈ ಕುರಿತು ಒಂದು ಸಣ್ಣ ಬೆಳವಣಿಗೆಯಾದರೂ ಕೊಪ್ಪಳದಾದ್ಯಂತ ಹರಿದಾಡುತ್ತವೆ. ಆದರೆ, ಇದರಲ್ಲಿ ಎಷ್ಟುಸತ್ಯ? ಎಷ್ಟುಸುಳ್ಳು? ಎನ್ನುವುದೇ ದೊಡ್ಡ ಯಕ್ಷ ಪ್ರಶ್ನೆ.

ಕೊಪ್ಪಳದಲ್ಲಿ ರಾಘವೇಂದ್ರ ಹಿಟ್ನಾಳ ವಿರುದ್ಧ ಅಖಾಡಕ್ಕೆ ಇಳಿಯೋರು ಯಾರು?

ಪಟ್ಟುಬಿಡದ ಕರಡಿ, ಅಡ್ಡಿಯಾದ ಎಂಪಿ:

ಸಂಸದ ಸಂಗಣ್ಣ ಕರಡಿ(MP Sanganna karadi) ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಕುರಿತು ಗಂಭೀರವಾಗಿ ಪರಿಗಣಿಸಿದ್ದಾರೆ. ಈಗಾಗಲೇ ಅವರು ಅಖಾಡಕ್ಕೆ ಇಳಿಯುವ ದಿಸೆಯಲ್ಲಿ ತಯಾರಿ ನಡೆಸಿದ್ದಾರೆ. ಅವರ ಆತ್ಮೀಯರು ಸಹ ಬಿಜೆಪಿ ಹೈಕಮಾಂಡ್‌ನಲ್ಲಿ ಇವರ ಪರವಾಗಿ ಬ್ಯಾಟಿಂಗ್‌ ನಡೆಸಿದ್ದಾರೆ. ಆದರೆ, ಇವರಿಗೆ ಅಡ್ಡಿಯಾಗಿರುವುದೇ ಸಂಸದರ ಹುದ್ದೆ. ರಾಜ್ಯಾದ್ಯಂತ ಸಂಸದರಿಗೆ ಟಿಕೆಟ್‌ ಇಲ್ಲ ಎನ್ನುವ ನಿರ್ಣಯವಾಗುವ ಸಾಧ್ಯತೆ ಇರುವುದರಿಂದ ಇವರಿಗೆ ನುಂಗಲಾರದ ತುತ್ತಾಗಿದೆ.

ವಿಧಾನಸಭಾ ಚುನಾವಣೆ(Karnataka assembly election)ಯಲ್ಲಿ ಸೋತಾಗ ಕೈ ಹಿಡಿದ ಲೋಕಸಭಾ ಚುನಾವಣೆ ಮತ್ತು ಗೆದ್ದ ಸಂಸದ ಸ್ಥಾನವೇ ಇವರಿಗೆ ಏನು ಮಾಡಬೇಕು ಎನ್ನುವುದನ್ನು ತಿಳಿಯದಂತೆ ಮಾಡಿದೆ.

ಈ ನಡುವೆ ಸಿ.ವಿ. ಚಂದ್ರಶೇಖರ(CV Chandrashekhar) ಕಳೆದ ಬಾರಿಯೇ ನನಗೆ ಟಿಕೆಟ್‌ ಘೋಷಣೆ ಮಾಡಿ ಕೈ ತಪ್ಪಿಸಲಾಗಿದೆ. ಆದರೂ ನಾನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಹೀಗಾಗಿ, ನನಗೆ ಟಿಕೆಟ್‌ ಕೊಡಿ ಎಂದು ಕೇಳುತ್ತಿದ್ದಾರೆ. ತಮ್ಮ ಹೈಕಮಾಂಡ್‌ ಮಟ್ಟದಲ್ಲಿ ಇರುವ ಸಂಪರ್ಕದ ಮೂಲಕ ತಮ್ಮ ಪ್ರಯತ್ನ ನಡೆಸಿದ್ದು, ಟಿಕೆಟ್‌ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ.

ಇವರಿಬ್ಬರ ನಡುವೆ ಟಿಕೆಟ್‌ಗಾಗಿ ಫೈಟ್‌ ನಡೆದಿರುವ ಬೆನ್ನಲ್ಲೇ ಅನೇಕ ಹೆಸರು ತೇಲಾಡುತ್ತಿವೆ. ಇದರಲ್ಲಿ ಯಾರಿಗಾದರೂ ಟಿಕೆಟ್‌ ಸಿಗಬಹುದೇ ಎನ್ನುವ ಚರ್ಚೆಯೂ ನಡೆಯುತ್ತಿದೆ. ಸಂಸದರ ಪುತ್ರ ಗವಿಸಿದ್ಧಪ್ಪ ಕರಡಿ ಹೆಸರು ಚರ್ಚೆಯಲ್ಲಿದೆ. ಆದರೆ, ಕಳೆದ ಬಾರಿ ಪರಾಭವಗೊಂಡಿರುವ ಅಮರೇಶ ಕರಡಿ ಈ ಬಾರಿ ಮುನ್ನೆಲೆಗೆ ಬರುತ್ತಿಲ್ಲ.

ಕಳೆದ ಸಲದ ಝಲಕ್‌

ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆಯಲ್ಲೂ ಹೈಡ್ರಾಮ ನಡೆಯುವಂತಾಗಿತ್ತು. ಸಿ.ವಿ. ಚಂದ್ರಶೇಖರ ಅವರಿಗೆ ಬಿಜೆಪಿಯಿಂದ ಟಿಕೆಟ್‌ ಘೋಷಣೆಯಾಯಿತು. ಇನ್ನೇನು ನಾಮಪತ್ರ ಸಲ್ಲಿಕೆ ಮಾಡುತ್ತಾರೆ ಎನ್ನುವಾಗಲೇ ನಾನಾ ರಾಜಕೀಯ ಮಜಲುಗಳು ನಡೆದವು. ಸಂಸದ ಸಂಗಣ್ಣ ಕರಡಿ ಅವರ ನಿವಾಸದ ಬಳಿ ನಾನಾ ಸಭೆಗಳು ನಡೆದವು.

ಮೊದ ಮೊದಲು ಸಂಸದ ಸಂಗಣ್ಣ ಕರಡಿ ಅವರೇ ಯಾರಿಗೆ ಟಿಕೆಟ್‌ ಸಿಕ್ಕರೂ ಗೆಲುವಿಗಾಗಿ ಶ್ರಮಿಸೋಣ ಎಂದಿದ್ದರು. ಅದರಲ್ಲೂ ಸಿ.ವಿ. ಚಂದ್ರಶೇಖರ ಅವರಿಗೆ ಸಿಕ್ಕರೂ ಬೇರೆಯಲ್ಲ ಎಂದಿದ್ದರು. ಆದರೆ, ಟಿಕೆಟ್‌ ಘೋಷಣೆಯಾದ ಮೇಲೆ ಇವರು ಟಿಕೆಟ್‌ಗಾಗಿ ಪಟ್ಟು ಹಿಡಿದರು. ಕೊಪ್ಪಳದಿಂದ ಬೆಂಗಳೂರು ವರೆಗೂ ಹೈಡ್ರಾಮಾ ನಡೆದು, ಕೊನೆಗೆ ಸಂಸದರ ಪುತ್ರ ಅಮರೇಶ ಕರಡಿ ಹೆಸರಿನಲ್ಲಿ ಬಿ ಫಾಮ್‌ರ್‍ ಲಭ್ಯವಾಗಿ, ನಾಮಪತ್ರ ಸಲ್ಲಿಸಿದರು.

ನೀತಿ ಸಂಹಿತೆ ಹಿನ್ನೆಲೆ ತರಾತುರಿ ಉದ್ಘಾಟನೆ: ಶಾಸಕ ದಢೇಸೂಗೂರು ಜತೆ ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ಕೊನೆ ಗಳಿಗೆಯಲ್ಲಿ ಚುನಾವಣೆಯ ಅಖಾಡಕ್ಕೆ ಇಳಿದಿದ್ದರಿಂದ ಆ ವೇಳೆಗಾಗಲೇ ಕಾಂಗ್ರೆಸ್‌ ಕುದುರೆ ಬಹುದೂರ ಹೋಗಿದ್ದರಿಂದ ಬಿಜೆಪಿ ಅಭ್ಯರ್ಥಿ ಪರಾಭವಗೊಳ್ಳುವಂತೆ ಆಯಿತು.

Latest Videos
Follow Us:
Download App:
  • android
  • ios