Asianet Suvarna News Asianet Suvarna News

ಕೊಪ್ಪಳದಲ್ಲಿ ರಾಘವೇಂದ್ರ ಹಿಟ್ನಾಳ ವಿರುದ್ಧ ಅಖಾಡಕ್ಕೆ ಇಳಿಯೋರು ಯಾರು?

 ಜಿಲ್ಲಾ ಕೇಂದ್ರ ಸ್ಥಾನವಾಗಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್‌ ತನ್ನ ಹುರಿಯಾಳು ರಾಘವೇಂದ್ರ ಹಿಟ್ನಾಳ ಎಂದು ಘೋಷಣೆ ಮಾಡಿದೆ. ಬಿಜೆಪಿ ಟಿಕೆಟ್‌ ಕಿತ್ತಾಟದ ಮಧ್ಯೆ ರಾಘವೇಂದ್ರ ಹಿಟ್ನಾಳ ಹ್ಯಾಟ್ರಿಕ್‌ ಬಾರಿಸುವ ತವಕದಲ್ಲಿದ್ದಾರೆ. ಈಗಲೂ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು? ಎನ್ನುವುದೇ ಮಿಲಿಯನ್‌ ಡಾಲರ್‌ ಪ್ರಶ್ನೆ.

Karnataka assembly election Who will compete against Raghavendra Hitnal at koppal rav
Author
First Published Mar 31, 2023, 8:36 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ (ಮಾ.31) : ಜಿಲ್ಲಾ ಕೇಂದ್ರ ಸ್ಥಾನವಾಗಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್‌ ತನ್ನ ಹುರಿಯಾಳು ರಾಘವೇಂದ್ರ ಹಿಟ್ನಾಳ ಎಂದು ಘೋಷಣೆ ಮಾಡಿದೆ. ಬಿಜೆಪಿ ಟಿಕೆಟ್‌ ಕಿತ್ತಾಟದ ಮಧ್ಯೆ ರಾಘವೇಂದ್ರ ಹಿಟ್ನಾಳ ಹ್ಯಾಟ್ರಿಕ್‌ ಬಾರಿಸುವ ತವಕದಲ್ಲಿದ್ದಾರೆ. ಈಗಲೂ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು? ಎನ್ನುವುದೇ ಮಿಲಿಯನ್‌ ಡಾಲರ್‌ ಪ್ರಶ್ನೆ.

ಜೆಡಿಎಸ್‌(JDS) ಕೊಪ್ಪಳ ಅಭ್ಯರ್ಥಿಯನ್ನು ಘೋಷಣೆಗೆ ಕಾಯುತ್ತಿದೆ. ಬಿಜೆಪಿ ಟಿಕೆಟ್‌(BJP Ticket) ವಂಚಿತರಾದವರು ಯಾರಾದರೂ ಬರಬಹುದಾ? ಎಂಬ ನಿರೀಕ್ಷೆಯಲ್ಲಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರ(Kopal assembly constituency)ದ ಬಿಜೆಪಿ ಟಿಕೆಟ್‌ ಘೋಷಣೆ ಜಿಲ್ಲೆಯ ಇತರ ಕ್ಷೇತ್ರಗಳ ಫಲಿತಾಂಶದ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ.

ನೀತಿ ಸಂಹಿತೆ ಹಿನ್ನೆಲೆ ತರಾತುರಿ ಉದ್ಘಾಟನೆ: ಶಾಸಕ ದಢೇಸೂಗೂರು ಜತೆ ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ಹಾಲಿ ಸಂಸದ ಸಂಗಣ್ಣ ಕರಡಿ(Sanganna karadi) ಅವರು ನಾನು ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧವಾಗಿದ್ದೇನೆ, ಪಕ್ಷ ಸೂಚಿಸಿದರೆ ಮಾತ್ರ ಅಖಾಡಕ್ಕೆ ಇಳಿಯುತ್ತೇನೆ ಎಂದು ಮೇಲ್ನೋಟಕ್ಕೆ ಹೇಳಿದರೂ ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಇಳಿಯಲು ತುದಿಗಾಲ ಮೇಲೆ ನಿಂತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಅಲ್ಲಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಆದರೆ ಅವರು ಹಾಲಿ ಸಂಸದರಾಗಿರುವುದರಿಂದ ದೊಡ್ಡ ಸಮಸ್ಯೆಯಾಗಿದೆ. ಬಿಜೆಪಿ ಹೈಕಮಾಂಡ್‌ ಮಾಹಿತಿಯ ಪ್ರಕಾರ ಹಾಲಿ ಸಂಸದರಿಗೆ ಟಿಕೆಟ್‌ ಕಷ್ಟಎಂದೇ ಹೇಳಲಾಗುತ್ತಿದೆ. ಹಾಗೊಂದು ವೇಳೆ ಬಿಜೆಪಿ ಹೈಕಮಾಂಡ್‌ ಸಂಸದರಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್‌ ಇಲ್ಲ ಎಂದು ಪಕ್ಕಾ ಹೇಳಿದರೆ ಪುತ್ರ ಗವಿಸಿದ್ದಪ್ಪ ಕರಡಿ ಅವರಿಗೆ ಟಿಕೆಟ್‌ ನೀಡುವಂತೆ ಕೇಳಲಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ ಅವರನ್ನು ಮುನ್ನೆಲೆಗೆ ತಂದಿದ್ದಾರೆ. ಪುತ್ರನಿಗೂ ಟಿಕೆಟ್‌ ನೀಡದಿದ್ದರೆ ತಮ್ಮ ಆಪ್ತನೋರ್ವರನ್ನು ಅಖಾಡಕ್ಕೆ ಇಳಿಸಲು ಸಂಸದ ಕರಡಿ ಪ್ಲಾನ್‌ ಮಾಡಿಕೊಂಡಿದ್ದಾರೆ. ಇದರಲ್ಲಿ ನಾಲ್ಕಾರು ಹೆಸರು ಇದ್ದು, ಅದರಲ್ಲಿ ಪ್ರಮುಖವಾಗಿ ತೀರಾ ಆತ್ಮೀಯರಾಗಿರುವ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್‌ ಹಾಗೂ ಬಸವರಾಜ ಪುರದ ಅವರ ಹೆಸರು ಮುಂಚೂಣಿಯಲ್ಲಿವೆ.

ವಿಶ್ವಾಸದಲ್ಲಿ ಬೀಗುತ್ತಿರುವ ಸಿವಿಸಿ:

ಕಳೆದ ಬಾರಿ ಟಿಕೆಟ್‌ ವಂಚಿತರಾಗಿದ್ದರೂ ತಾಳ್ಮೆ ಕಳೆದುಕೊಳ್ಳದೆ ಇರುವ ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ(CV Chandrashekhar) ಅವರು ಈ ಬಾರಿ ಟಿಕೆಟ್‌ ಸಿಗುವ ವಿಶ್ವಾಸದಲ್ಲಿ ಬೀಗುತ್ತಿದ್ದಾರೆ. ನನಗೆ ಪಕ್ಷ ಆದ್ಯತೆ ನೀಡಿಯೇ ನೀಡುತ್ತದೆ. ಪಕ್ಷಕ್ಕಾಗಿ ನಾನು ನಿಷ್ಠೆಯಿಂದ ಇದ್ದು, ಪಕ್ಷದ ಮೇಲೆ ವಿಶ್ವಾಸವಿದೆ ಎಂದು ಈಗಾಗಲೇ ಕ್ಷೇತ್ರದಾದ್ಯಂತ ಸುತ್ತಾಡಿದ್ದಾರೆ. ಬಿಜೆಪಿಗೆ ಮತ ಹಾಕಿ ಎಂದು ಸುತ್ತಾಡುತ್ತಲೇ ತಾವೇ ಅಭ್ಯರ್ಥಿ ಎನ್ನುವ ಸಂದೇಶ ರವಾನೆ ಮಾಡಿದ್ದಾರೆ.

ಕಳೆದ ಬಾರಿಯೇ ನನಗೆ ಟಿಕೆಟ್‌ ಘೋಷಣೆಯಾಗಿ, ಕೊನೆಯ ಗಳಿಗೆಯಲ್ಲಿ ಬದಲಾವಣೆಯಾಗಿದೆ. ಈ ಬಾರಿ ಯಾವುದೇ ಕಾರಣಕ್ಕೂ ಕೈ ತಪ್ಪುವ ಪ್ರಶ್ನೆಯೇ ಇಲ್ಲ. ಟಿಕೆಟ್‌ ಸಿಕ್ಕೇ ಸಿಗುತ್ತದೆ ಎಂದು ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ, ಕುತೂಹಲ ಮೂಡಿಸಿದೆ.

ಹೊಸಮುಖ ಚಿಂತನೆ:

ಈ ನಡುವೆ ಕ್ಷೇತ್ರದಲ್ಲಿ ಹೊಸಮುಖವನ್ನು ಆಯ್ಕೆ ಮಾಡಬೇಕು ಎನ್ನುವ ಚಿಂತನೆಯೊಂದಿಗೆ ಕೆಲವರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಇದು ಸಹ ಬಿಜೆಪಿ ಟಿಕೆಟ್‌ ಆಧಾರದ ಮೇಲೆ ನಿಂತುಕೊಂಡಿದೆ. ಬಿಜೆಪಿ ಟಿಕೆಟ್‌ ಯಾರಿಗೆ ಆಗುತ್ತದೆ ಎನ್ನುವುದರ ಆಧಾರದ ಮೇಲೆ ಈ ತಂಡ ಮುಂದಿನ ನಡೆಯನ್ನು ನಿರ್ಧರಿಸಲಿದೆ.

ಸಿ.ವಿ. ಚಂದ್ರಶೇಖರ ಅವರಿಗೆ ಟಿಕೆಟ್‌ ಸಿಗದಿದ್ದರೆ ಅವರ ಬೀಗರಾದ ಸುರೇಶ ಭೂಮರಡ್ಡಿ ಅಖಾಡಕ್ಕೆ ಇಳಿಯುತ್ತಾರೆ. ಈಗಾಗಲೇ ಅವರು ಸಹ ಕ್ಷೇತ್ರದಲ್ಲಿ ಭರ್ಜರಿ ಸುತ್ತಾಡುತ್ತಿದ್ದಾರೆ. ಶಾಸಕ ರಾಘವೇಂದ್ರ ಹಿಟ್ನಾಳ ಅವರ ಪರಮಾಪ್ತರಾಗಿದ್ದ ಅವರು ಇದ್ದಕ್ಕಿದ್ದಂತೆ ಅವರ ವಿರುದ್ಧ ಕ್ಷೇತ್ರದಾದ್ಯಂತ ಸಂಘಟನೆ ಮಾಡುತ್ತಿದ್ದಾರೆ.

ನಾಲ್ಕಾರು ಅಭ್ಯರ್ಥಿಗಳು:

ಈಗ ಇರುವ ಬೆಳವಣಿಗೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕಾರು ಪ್ರಮುಖ ಅಭ್ಯರ್ಥಿಗಳು ಅಖಾಡಕ್ಕೆ ಇಳಿಯುವುದು ಪಕ್ಕಾ ಆಗಿದೆ. ಜೆಡಿಎಸ್‌ ನಿಯೋಜಿತ ಅಭ್ಯರ್ಥಿ ವೀರೇಶ ಮಹಾಂತಯ್ಯನಮಠ, ಡಾ. ಮಹೇಶ ಗೋವನಕೊಪ್ಪ ಅವರು ಅಖಾಡಕ್ಕೆ ಇಳಿಯುವ ತಯಾರಿ ನಡೆಸಿದ್ದಾರೆ. ಕೆಆರ್‌ಪಿ ಪಕ್ಷದಿಂದ ಇಲ್ಲವೇ ಮತ್ಯಾವುದೋ ಪಕ್ಷದಿಂದಲಾದರೂ ಅಖಾಡಕ್ಕೆ ಇಳಿಯುತ್ತಾರೆ ಎನ್ನಲಾಗುತ್ತಿದೆ. ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅವರ ಹೆಸರು ಕೇಳಿಬರುತ್ತಿದೆ. ಅವರು ಈಗಾಗಲೇ ಸ್ಪರ್ಧೆ ಮಾಡುವ ಘೋಷಣೆ ಮಾಡಿದ್ದಾರೆ.

ಹಾಲಪ್ಪ ಆಚಾರ್‌ಗೆ ಮತ್ತೊಮ್ಮೆ ಟಿಕೆಟ್: ಅಶೀರ್ವಾದ ಮಾಡುವಂತೆ ಮತದಾರರಿಗೆ ಮನವಿ ಮಾಡಿದ ಕಾರಜೋಳ

ಗುಪ್ತಗಾಮಿನಿ:

ಇದಲ್ಲದೆ ಬಿಜೆಪಿಯಿಂದ ನಾನಾ ಹೆಸರು ಅತ್ಯಂತ ಗುಪ್ತವಾಗಿ ಹರಿದಾಡುತ್ತಿವೆ. ಇದು ಬಿಜೆಪಿ ಹೈಕಮಾಂಡ್‌ ಮತ್ತು ಆರ್‌ಎಸ್‌ಎಸ್‌ ನಂಟು ಹೊಂದಿರುವ ವ್ಯಕ್ತಿಯೋರ್ವರು ಅಖಾಡಕ್ಕೆ ಇಳಿಯಲಿದ್ದಾರೆ. ಈ ದಿಸೆಯಲ್ಲಿಯೂ ಬಿಜೆಪಿ ಚಿಂತನೆ ನಡೆಸಿದೆ. ಕೊಪ್ಪಳ ತಾಲೂಕಿನವರೇ ಆಗಿದ್ದರೂ ಬೆಂಗಳೂರಿನಲ್ಲಿಯೇ ಬಹುತೇಕ ವಾಸ ಮಾಡುವ ಇವರು ಅನೇಕ ಗುತ್ತಿಗೆ ಕಂಪನಿಗಳು ಹೊಂದಿದ್ದು, ಅವರು ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ.

Follow Us:
Download App:
  • android
  • ios