ಕೊಪ್ಪಳವನ್ನು ಶಿಕ್ಷಣ ಕಾಶಿಯನ್ನಾಗಿ ಮಾಡುವೆ: ಕರಡಿ ಸಂಗಣ್ಣ
ಬಿಜೆಪಿ ಸರ್ಕಾರ ಬಂದರೆ, ಕ್ಷೇತ್ರದಲ್ಲಿ ಹೈಟೆಕ್ ಶಾಲಾ- ಕಾಲೇಜು ನಿರ್ಮಾಣ ಮಾಡಲಾಗುವುದು. ಕೌಶಲ್ಯಾಧಾರಿತ ಕೋರ್ಸ್‌ಗಳನ್ನು ಅಳವಡಿಸಿ ಶಿಕ್ಷಣ ನೀಡಿ ಕ್ಷೇತ್ರವನ್ನು ಶಿಕ್ಷಣ ಕಾಶಿಯನ್ನಾಗಿ ಮಾಡುವುದು ನನ್ನ ಕನಸಾಗಿದೆ ಎಂದ ಕರಡಿ ಸಂಗಣ್ಣ
ಕೊಪ್ಪಳ(ಮೇ.03): ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಕೊಪ್ಪಳ ಕ್ಷೇತ್ರದಲ್ಲಿ ಸರ್ಕಾರಿ ಹೈಟೆಕ್ ಶಾಲಾ, ಕಾಲೇಜು ನಿರ್ಮಿಸಿ ಶಿಕ್ಷಣ ಕಾಶಿಯನ್ನಾಗಿ ಮಾಡಲಾಗುವುದು ಎಂದು ಸಂಸದ ಕರಡಿ ಸಂಗಣ್ಣ ಭರವಸೆ ನೀಡಿದರು. ವಿಧಾನಸಭಾ ಕ್ಷೇತ್ರದ ಹಲಗೇರಿ, ಹಂದ್ರಾಳ, ಹಣವಾಳ ಸೇರಿ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಪರ ಪ್ರಚಾರ ನಡೆಸಿ ಮಾತನಾಡಿದರು.
ಕೊಪ್ಪಳ ಕ್ಷೇತ್ರದಲ್ಲಿ ಸರ್ಕಾರಿ ಹೈಟೆಕ್ ಶಾಲಾ ಮತ್ತು ಕಾಲೇಜುಗಳ ಕೊರತೆ, ಗುಣಮಟ್ಟದ ಶಿಕ್ಷಣದ ಕೊರತೆ, ತಂತ್ರಜ್ಞಾನ ಆಧಾರಿತ ಶಿಕ್ಷಣ ಸಿಗದಿರುವ ಕಾರಣ ಮಕ್ಕಳು ಮಂಗಳೂರು, ಮೈಸೂರು, ಹುಬ್ಬಳ್ಳಿ,ಬೆಂಗಳೂರು ಮಹಾನಗರಗಳಿಗೆ ಹೋಗಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಇದರಿಂದ ಪೋಷಕರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಆದ್ದರಿಂದ ಬಿಜೆಪಿ ಸರ್ಕಾರ ಬಂದರೆ, ಕ್ಷೇತ್ರದಲ್ಲಿ ಹೈಟೆಕ್ ಶಾಲಾ- ಕಾಲೇಜು ನಿರ್ಮಾಣ ಮಾಡಲಾಗುವುದು. ಕೌಶಲ್ಯಾಧಾರಿತ ಕೋರ್ಸ್‌ಗಳನ್ನು ಅಳವಡಿಸಿ ಶಿಕ್ಷಣ ನೀಡಿ ಕ್ಷೇತ್ರವನ್ನು ಶಿಕ್ಷಣ ಕಾಶಿಯನ್ನಾಗಿ ಮಾಡುವುದು ನನ್ನ ಕನಸಾಗಿದೆ ಎಂದರು.
ಅಮಿತ್ ಶಾ ಹೇಳಿದಂತೆ ನಡೆಯಲು ಇದು ಯುಪಿಯಲ್ಲ: ಜಗದೀಶ್ ಶೆಟ್ಟರ್
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಶಿಕ್ಷಣಕ್ಕೆ ಆದ್ಯತೆ ನೀಡಿ ಬಜೆಟ್‌ನಲ್ಲಿ ಹೆಚ್ಚಿನ ಪಾಲು ಶಿಕ್ಷಣ ಇಲಾಖೆಗೆ ನೀಡಿದೆ.ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಶೌಚಾಲಯ ನಿರ್ಮಾಣ ಮಾಡುತ್ತಿದ್ದು, ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ.ಆದರೆ, ಕ್ಷೇತ್ರದ ಶಾಸಕರಿಗೆ ಇಚ್ಛಾಶಕ್ತಿ ಇಲ್ಲ.ಆದ್ದರಿಂದಲೇ ಶಾಲಾ-ಕಾಲೇಜುಗಳ ಸ್ಥಿತಿ ಶೋಚನೀಯವಾಗಿವೆ.ಈ ಬಾರಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿ, ಶಾಲಾ-ಕಾಲೇಜು ಅಭಿವೃದ್ಧಿಗೆ ಸಹಕರಿಸಿ ಎಂದರು.
ಈ ಸಂದರ್ಭದಲ್ಲಿ ಯುವಕರು, ಮಹಿಳೆಯರು, ಹಿರಿಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಕೊಪ್ಪಳದಲ್ಲೇ ವಿವಿ ಕಟ್ಟಡ ನಿರ್ಮಿಸುವೆ
ಬಿಜೆಪಿ ಸರ್ಕಾರ ಕಳೆದ ಬಜೆಟ್‌ನಲ್ಲಿ ಕೊಪ್ಪಳ ವಿಶ್ವವಿದ್ಯಾಲಯ ಘೋಷಿಸಿತ್ತು. ಕೊಪ್ಪಳ ನಗರದಲ್ಲಿ ಕಟ್ಟಡ ಇಲ್ಲದಿರುವ ಕಾರಣ ತಳಕಲ್‌ನಲ್ಲಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ವಿವಿ ಕಾರ್ಯಾರಂಭ ಮಾಡಿದೆ. ಕೊಪ್ಪಳ ವಿವಿ ಕೊಪ್ಪಳದಲ್ಲಿಯೇ ಇರಬೇಕು ಎಂಬುದು ಕ್ಷೇತ್ರದ ಜನತೆಯ ಅಭಿಮತವಾಗಿದೆ. ಆದ್ದರಿಂದ ಬಿಜೆಪಿ ಸರ್ಕಾರ ಬಂದ ಕೂಡಲೇ ಸುಮಾರು 200ಎಕರೆ ಪ್ರದೇಶದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ವಿವಿಧ ಕಚೇರಿಗಳ ಕಟ್ಟಡ ನಿರ್ಮಿಸಲಾಗುವುದು.ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಲ್ಯಾಬ್ ನಿರ್ಮಾಣ ಮಾಡಲಾಗುವುದು.ಕಾಗದ ರಹಿತ ವಿವಿ ಮಾಡುವುದು ನನ್ನ ಗುರಿಯಾಗಿದೆ.ಇದು ನನ್ನ ಭರವಸೆ ಮಾತ್ರವಲ್ಲ ನನ್ನ ಕರ್ತವ್ಯವಾಗಿದೆ ಎಂದು ಸಂಸದ ಕರಡಿ ಸಂಗಣ್ಣ ನುಡಿದರು.