ಮುಸ್ಲಿಮರು ಈದ್ಗಾ ಮೈದಾನ ತುಂಬಿ ರಸ್ತೆಯಲ್ಲಿ ನಮಾಜು ಮಾಡುತ್ತಾರೆ. ಅವರೆಲ್ಲಾ ಅನುಮತಿ ಪಡೆದುಕೊಂಡೆ ನಮಾಜ್ ಮಾಡುತ್ತಾರಾ? ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ತುಮಕೂರು (ಅ.19): ಮುಸ್ಲಿಮರು ಈದ್ಗಾ ಮೈದಾನ ತುಂಬಿ ರಸ್ತೆಯಲ್ಲಿ ನಮಾಜು ಮಾಡುತ್ತಾರೆ. ಅವರೆಲ್ಲಾ ಅನುಮತಿ ಪಡೆದುಕೊಂಡೆ ನಮಾಜ್ ಮಾಡುತ್ತಾರಾ? ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರ್ಮಿಷನ್ ಕೊಡಿ ಅಂತಾ ಮುಸ್ಲಿಮರು ಬರುವುದಿಲ್ಲ ಅಥವಾ ಪರ್ಮಿಷನ್ ತೆಗೆದುಕೊಳ್ಳಿ ಅಂತ ನಾವು ಕೇಳುವುದಿಲ್ಲ. ಹಾಗಾಗಿ ಸರ್ಕಾರ ಜಾರಿ ಮಾಡಲು ಸಾಧ್ಯವಾಗುವಂತಹ ಕಾನೂನನ್ನು ಮಾತ್ರ ತರಬೇಕು. ಅದನ್ನು ಬಿಟ್ಟು ಜಾರಿ ಮಾಡಲಾಗದ ಕಾನೂನು ತಂದರೆ ಪುಸ್ತಕದಲ್ಲಿ ಇರಬೇಕಷ್ಟೆ ಎಂದು ವ್ಯಂಗ್ಯವಾಡಿದರು. ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಆಗಲಿ ಅಥವಾ ಬೇರೆ ಯಾವುದೇ ಸಂಘಟನೆಯಾಗಲಿ ಅನುಮತಿ ಪಡೆದು ಕಾರ್ಯಕ್ರಮ ಮಾಡಿ ಅಂತಾ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿದೆ. ಅದು ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ ಅನ್ನುವುದನ್ನು ನೋಡೋಣ ಎಂದರು.
ಬಿಹಾರ ಚುನಾವಣೆ ಬಳಿಕ ಸ್ಥಿತ್ಯಂತ್ರ: ಯಾವುದೇ ರಾಜಕೀಯ ಸ್ಥಿತ್ಯಂತ್ರ ಬಿಹಾರ ಚುನಾವಣೆ ಬಳಿಕ ಆಗಬಹುದು. ಅದಕ್ಕಿಂತ ಮುಂಚೆ ಏನಾದರೂ ನಡೆಯುತ್ತದೆ ಅನ್ನುವುದು ನಿಮ್ಮಗಳ ಊಹೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ನಾನು ಅವತ್ತು ಮಂತ್ರಿಯಾಗಿ ವಿಧಾನಸೌಧಕ್ಕೆ ಹೋಗಿದ್ದೆ. ಬರುವಾಗ ಮಾಜಿ ಆಗಿದ್ದೆ. ನನ್ನ ವಿರುದ್ಧ ನಡೆದಿರುವ ಷಡ್ಯಂತ್ರ, ಅವು ಇವು ಎಲ್ಲವನ್ನು ಬಿಹಾರ ಚುನಾವಣೆ ನಂತರ ಹೇಳುತ್ತೇನೆ ಎಂದು ರಾಜಣ್ಣ ಹೇಳಿದರು.
ಹಳ್ಳಿಗಾಡಿನ ರೈತರಿಗೆ ಸಾಲ ಸೌಲಭ್ಯ
ಸಹಕಾರಿ ರಂಗದಲ್ಲಿ ಜಿಲ್ಲೆಯ ರೈತರ ಸೇವೆ ಮಾಡಲು ನನಗೆ ಮತ್ತೊಂದು ಅವಕಾಶ ದೊರೆತಿದ್ದು, ಹಳ್ಳಿಗಾಡಿನ ರೈತರಿಗೆ ಸಾಲ ಸೌಲಭ್ಯ ಒದಗಿಸುವ ಗುರಿಯನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹೊಂದಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ಸಹಕಾರಿಗಳು ಹಾಗೂ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಡಿಸಿಸಿ ಬ್ಯಾಂಕ್ 14 ಸ್ಥಾನಗಳಲ್ಲಿ 8 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ಉಳಿದ 6 ಸ್ಥಾನಗಳಿಗೆ ಚುನಾವಣೆ ನಡೆದು ನಿರ್ದೇಶಕರು ಆಯ್ಕೆಯಾದರು ಎಂದ ಅವರು, ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ ಎಂದರು.
ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‌ಗಳು ಇವೆ. ಇದರಲ್ಲಿ ತುಮಕೂರು ಬ್ಯಾಂಕ್ ಕೂಡ ಒಂದು. ರೈತಾಪಿ ಕುಟುಂಬಗಳಿಗೆ ಸಾಲ ಸೌಲಭ್ಯ ಒದಗಿಸುವುದೇ 21 ಬ್ಯಾಂಕ್‌ಗಳ ಉದ್ದೇಶ. ರೈತರಿಗೆ ನೀಡುವ ಸಾಲದ ಬಡ್ಡಿಯನ್ನು ಸರ್ಕಾರ ಶೇ. 6 ರಷ್ಟು ಕೊಡುತ್ತಿದೆ. ಇದರಿಂದ ಬ್ಯಾಂಕ್‌ಗೆ ನಷ್ಟ ಆಗುತ್ತದೆ ಎಂಬುದು ಗೊತ್ತಿದ್ದರೂ ಕೂಡ ರೈತರ ಹಿತಕಾಯುವ ದೃಷ್ಠಿಯಿಂದ ಸಾಲ ಸೌಲಭ್ಯ ಕೊಡಲಾಗುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮಾರ್ಚ್ ಅಂತ್ಯದವರೆಗೆ 800 ಕೋಟಿ ರೈತರಿಗೆ ಸಾಲ ವಿತರಿಸಲಾಗಿದೆ. ಕೃಷಿಯೇತರ ಸಾಲ 1130 ಕೋಟಿ ನೀಡಲಾಗಿದೆ.
ರೈತರಿಗೆ ವಿತರಿಸುವ ಸಾಲದ ಬಡ್ಡಿಯಲ್ಲಿ ಆಗುವ ನಷ್ಟವನ್ನು ಕೃಷಿಯೇತರ ಸಾಲದಿಂದ ಬರುವ ಬಡ್ಡಿಯಿಂದ ಸರಿದೂಗಿಸಲಾಗುತ್ತದೆ. ಸದ್ಯ ಬ್ಯಾಂಕ್ ರ‍್ಥಿಕವಾಗಿ ಸದೃಢವಾಗಿದೆ ಎಂದರು. ಕಳೆದ ವರ್ಷ ಬ್ಯಾಂಕ್ ಎನ್‌ಪಿ ಶೇ. 3.81 ರಷ್ಟಿತ್ತು. ಇದನ್ನು 2024-25 ರಲ್ಲಿ 2.90ಕ್ಕೆ ತರಲಾಗಿದೆ. ಮುಂದೆ ಎನ್.ಪಿ.ಯನ್ನು ಮತ್ತಷ್ಟು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಈಗಾಗಲೇ ಡಿಸಿಸಿ ಬ್ಯಾಂಕ್ 45 ಶಾಖೆಗಳನ್ನು ಹೊಂದಿದ್ದು, ಅ. 31 ರಂದು ಪಾವಗಡ ತಾಲ್ಲೂಕು ತಿರುಮಣಿಯಲ್ಲಿ 46ನೇ ಶಾಖೆಯನ್ನು ಆರಂಭಿಸಲಾಗುತ್ತಿದೆ.
ಹಾಗೆಯೇ ತುರುವೇಕೆರೆ ತಾಲೂಕು ದಬ್ಬೇಘಟ್ಟದಲ್ಲಿ ಶಾಖೆ ತೆರೆಯುವಂತೆಯೂ ಬೇಡಿಕೆ ಬಂದಿದೆ. ಅದೇ ರೀತಿಯ ಅಮೃತೂರಿನಲ್ಲಿ ಶಾಖೆ ಆರಂಭಿಸುವಂತೆ ಮನವಿಗಳು ಬರುತ್ತಿವೆ. ಈ ಕುರಿತು ಪರಿಶೀಲಿಸಲಾಗುವುದು ಎಂದರು. ಸಹಕಾರಿ ಆಂದೋಲನ ಜನರ ಆಂದೋಲನವಾಗಬೇಕು. ಈ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿರುವ ಸದಸ್ಯರ ಆಸ್ತಿ ವಿವರವನ್ನು ಚುನಾವಣೆ ಸಮಯದಲ್ಲಿ ಅಫಿಡವಿಟ್ ಮೂಲಕ ಸಲ್ಲಿಸುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದರು.
