ನಾನೊಬ್ಬ ಸಣ್ಣ ಶಾಸಕ, ನನಗೇನು ನೇತೃತ್ವ ಕೊಡಲ್ಲ. ನಾನು ಈ ಜಿಲ್ಲೆಯ ಮಗ, ಡಿಕೆಶಿ ಈ ಜಿಲ್ಲೆಯ ಮಗ. ಈ ಸಂದರ್ಭದಲ್ಲಿ ನಾನು ಅವರ ಜೊತೆ ಇರಬೇಕು. ಅವರ ಜೊತೆ ಇದ್ದು ಸಹಕಾರ ಕೊಡುವುದು ನಮ್ಮ ಧರ್ಮ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ರಾಮನಗರ (ನ.27): ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಒಳ್ಳೆಯ ಸುದ್ದಿ ಬರುತ್ತದೆ ಅಂತ ಹೇಳಿದ್ದು, ನಾವೆಲ್ಲರು ಬಹಳ ಖುಷಿಯಾಗಿದ್ದೇವೆ. ಇನ್ನೆರಡು ಮೂರು ದಿನಗಳಲ್ಲಿ ಒಳ್ಳೆ ಸುದ್ದಿ ಬರಲಿ ಅನ್ನೋದೆ ನಮ್ಮ ಆಸೆ ಎಂದು ಶಾಸಕ ಇಕ್ಬಾಲ್ ಹುಸೇನ್ ಅವರು ಡಿಕೆಶಿ ಸಿಎಂ ಆಗುವುದು ಖಚಿತವೆಂದು ಪರೋಕ್ಷವಾಗಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲಸ ಮಾಡಿರುವವರಿಗೆ ಕೂಲಿ ಕೊಡುತ್ತೇವೆ. ಸುಮ್ಮನೆ ಓಡಾಡುವವರಿಗೆ ಕೂಲಿ ಕೊಡಲು ಆಗುತ್ತಾ? ಡಿ.ಕೆ.ಶಿವಕುಮಾರ್ ಅವರು ಕೆಲಸ ಮಾಡಿ ಬೆವರು ಸುರಿಸಿದ್ದಾರೆ. ಹಾಗಾಗಿ ಅವರಿಗೆ ಕೂಲಿ ಕೊಡಬೇಕು ಎಂದು ಹೇಳಿದರು.
ನಾನೊಬ್ಬ ಸಣ್ಣ ಶಾಸಕ, ನನಗೇನು ನೇತೃತ್ವ ಕೊಡಲ್ಲ. ನಾನು ಈ ಜಿಲ್ಲೆಯ ಮಗ, ಡಿ.ಕೆ.ಶಿವಕುಮಾರ್ ಅವರೂ ಈ ಜಿಲ್ಲೆಯ ಮಗ. ಈ ಸಂದರ್ಭದಲ್ಲಿ ನಾನು ಅವರ ಜೊತೆ ಇರಬೇಕು. ಅವರ ಜೊತೆ ಇದ್ದು ಸಹಕಾರ ಕೊಡುವುದು ನಮ್ಮ ಧರ್ಮ ಎಂದು ಹೇಳಿದರು. ದೆಹಲಿಯಲ್ಲಿ ಯಾರನ್ನೂ ಭೇಟಿ ಮಾಡಿಲ್ಲ, ಒಂದಷ್ಟು ವಿಚಾರವಾಗಿ ಚರ್ಚೆ ಮಾಡಬೇಕಿತ್ತು. ಅದನ್ನು ಅಲ್ಲಿ ಹೋಗಿ ಶಾಸಕರ ಜೊತೆ ಚರ್ಚೆ ಮಾಡಿದ್ದೇವೆ. ಮುಂದೆ ಏನು ಮಾಡಬೇಕು ಅಂತ ಚರ್ಚೆ ಮಾಡಿ ವಾಪಸ್ ಬಂದಿದ್ದೇವೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.
ಡಿಸಿಎಂ ಪರಿಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತೆ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಘಟನೆ, ಪರಿಶ್ರಮ ಹಾಗೂ ಹೋರಾಟದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಜನರಿಗೆ ಉತ್ತಮ ಆಡಳಿತ ಕೊಡಲು ಸಾಧ್ಯವಾಗಿದೆ. ಅವರ ಪರಿಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು. ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನಿ ಸಿಪಾಯಿ. ಅವರು ಅಧಿಕಾರಕ್ಕಾಗಿ ಎಂದೂ ಅವಕಾಶವಾದಿಗಳಾಗಿಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ರವರು ತಮ್ಮ ಜವಬ್ದಾರಿಯನ್ನು ನಿರ್ವಹಿಸುವ ಹಾಗೂ ಪಕ್ಷ ಸಂಘಟನೆ ಉದ್ದೇಶದಿಂದ ವರಿಷ್ಟರೊಂದಿಗೆ ಚರ್ಚಿಸಲು ದೆಹಲಿಗೆ ಹೋಗಿ ಬರುತ್ತಾರೆ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ. ಅವರ ಪರಿಶ್ರಮ ಮತ್ತು ಪ್ರಾರ್ಥನೆ ಯಾವತ್ತಿಗೂ ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನೊಬ್ಬ ಶಾಸಕನಾಗಿದ್ದು, ಜನರ ಸೇವೆಗೆ ನನ್ನೆಲ್ಲ ಸಮಯವನ್ನು ಮೀಸಲಿಟ್ಟಿದ್ದೇನೆ. ನನಗೆ ನನ್ನದೆ ಆದ ಜವಬ್ದಾರಿಯಿದ್ದು, ರಾಜಕೀಯವಾಗಿ ಕ್ಷೇತ್ರ ಮುಂದುವರೆದಿದೆ. ಆದರೆ , ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ರಾಮನಗರ ಕ್ಷೇತ್ರದ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸುತ್ತಾ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. ನನಗೆ ಯಾವ ವಿಚಾರವಾಗಿಯೂ ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಹಾಗೂ ರಾಜ್ಯದ ಉಸ್ತುವಾರಿಗಳಾದ ಸುರ್ಜೇವಾಲ ಸೂಚನೆ ನೀಡಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ಗೆ ಬೇರೆ ಕೆಲಸ ಇಲ್ಲ, ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕೆ ಮಾಡುವುದೇ ಅವರ ಕೆಲಸವಾಗಿದೆ. ಅವರು ಟೀಕೆ ಟಿಪ್ಪಣಿ ಮಾಡಿ ನಮ್ಮನ್ನು ಎಚ್ಚರಿಸುತ್ತಿರಲಿ, ನಾವು ಜವಬ್ದಾರಿಯಿಂದ ಕೆಲಸ ಮಾಡಿ ತೋರಿಸುತ್ತೇವೆ ಎಂದು ತಿರುಗೇಟು ನೀಡಿದರು.


