ಭಾಸ್ಕರ್‌ ರಾವ್‌ ನಂತರ ಮುಖ್ಯಮಂತ್ರಿ ಚಂದ್ರು ಎಎಪಿ ಸೇರ್ಪಡೆ: ಕೇಜ್ರಿವಾಲ್‌ ಪಕ್ಷದ ಕಡೆ ವಾಲ್ತಾರ ಕಿಮ್ಮನೆ?

Kimmane Ratnakar to join AAP: ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಸೇವೆಯಿಂದ ನಿವೃತ್ತಿ ಪಡೆದು ಆಮ್‌ ಆದ್ಮಿ ಪಕ್ಷವನ್ನು ಸೇರಿದ್ದರು. ಈಗ ಕಾಂಗ್ರೆಸ್‌ ತೊರೆದ ಮುಖ್ಯಮಂತ್ರಿ ಚಂದ್ರು ಕೂಡ ಎಎಪಿ ಸೇರಲಿದ್ದಾರೆ ಎಂಬ ಸುದ್ದಿ ಬಂದಿದೆ. ಜತೆಗೆ ಕಿಮ್ಮನೆ ರತ್ನಾಕರ್‌ ಕೂಡ ಕಾಂಗ್ರೆಸ್‌ ತೊರೆದು ಎಎಪಿಗೆ ಹೋಗುವ ಸಾಧ್ಯತೆಯಿದೆ ಎನ್ನುತ್ತವೆ ಮೂಲಗಳು

Kimmane Ratnakar likely to join Aam Admi Party

ಬೆಂಗಳೂರು: ದಿನೇ ದಿನೇ ಕಾಂಗ್ರೆಸ್‌ ಪಕ್ಷದಿಂದ ನಾಯಕರು ರಾಜೀನಾಮೆ ನೀಡಿ ಬೇರೆ ಪಕ್ಷಗಳಿಗೆ ಸೇರ್ಪಡೆಯಾಗುತ್ತಲೇ ಇದ್ದಾರೆ. ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಮುಂದುವರೆಯುತ್ತಲೇ ಇದೆ. ಪಂಜಾಬಿನಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರು ಕಾಂಗ್ರೆಸ್‌ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರಿದರು. ಗುಜರಾತಿನ ಪಾಟಿದಾರ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ಬಿಜೆಪಿ ಸೇರ್ಪಡೆಯಾದರು. ಈಗ ರಾಜ್ಯ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಮಾಜಿ ಪರಿಷತ್‌ ಸದಸ್ಯ ಮುಖ್ಯಮಂತ್ರಿ ಚಂದ್ರು ಕೂಡ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ಆಮ್‌ ಆದ್ಮಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಎಎಪಿ ಘೋಷಿಸಿದೆ. 

ಕಾಂಗ್ರೆಸ್‌ನ ಹಿರಿಯ ವಕ್ತಾರ ಬ್ರಿಜೇಶ್‌ ಕಾಳಪ್ಪ ಕೂಡ ಕಳೆದ ವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅವರು ಕೂಡ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪಂಜಾಬ್‌ ಗೆಲುವಿನ ಬಳಿಕ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲು ಆಮದ್‌ ಆದ್ಮಿ ಪಕ್ಷ ಸಾಕಷ್ಟು ಯತ್ನಿಸುತ್ತಿದೆ. ಮತ್ತು ಇತರೆ ಪಕ್ಷಗಳ ನಾಯಕರಿಗೂ ಸಹ ಎಎಪಿ ಮೇಲೆ ನಂಬಿಕೆ ಮೂಡುತ್ತಿದೆ, ಇದಕ್ಕಾಗಿಯೇ ಪಕ್ಷದ ಕಡೆ ಹಲವು ನಾಯಕರು ಒಲವು ತೋರಿಸುತ್ತಿದ್ದಾರೆ ಎನ್ನತ್ತಾರೆ ರಾಜಕೀಯ ಪಂಡಿತರೊಬ್ಬರು. 

ಕಿಮ್ಮನೆ ರತ್ನಾಕರ್‌ ಎಎಪಿಗೆ?

ಕಾಂಗ್ರೆಸ್‌ನ ಹಿರಿಯ ನಾಯಕ ಕಿಮ್ಮನೆ ರತ್ನಾಕರ್‌ ಕೂಡ ಆಮ್‌ ಆದ್ಮಿ ಪಕ್ಷಕ್ಕೆ ಸೇರುತ್ತಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಮುಂದಿನ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್‌ ಕೈತಪ್ಪುವ ಸಾಧ್ಯತೆ ಹಿನ್ನೆಲೆ, ಕಿಮ್ಮನೆ ಕೂಡ ಕಾಂಗ್ರೆಸ್‌ ತೊರೆದು ಎಎಪಿಯಿಂದ ತೀರ್ಥಹಳ್ಳಿ ಟಿಕೆಟ್‌ ಪಡೆದು ಚುನಾವಣೆ ಎದುರಿಸುತ್ತಾರೆ ಎಂದು ಅವರ ಆಪ್ತ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಿಮ್ಮನೆ ರತ್ನಾಕರ್‌ ಸಿದ್ದರಾಮಯ್ಯ ಜತೆ ಆತ್ಮೀಯರಾಗಿದ್ದರೂ ಸಹ ಈ ಬಾರಿ ಟಿಕೆಟ್‌ ತಪ್ಪುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ. ಎಎಪಿ ಸೇರುವುದಾದರೆ ಇದೊಂದೇ ಕಾರಣವಲ್ಲ, ಡಿಕೆ ಶಿವಕುಮಾರ್ ಅವರ ಸ್ಥಳೀಯ ಕೆಲ ನಾಯಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿರುವುದು ಕಿಮ್ಮನೆ ಬಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎಂದೂ ಕೆಲವರು ಹೇಳುತ್ತಾರೆ. ಪ್ರಸ್ತುತ ರಾಜಕಾರಣದಲ್ಲಿ ಸಜ್ಜನ ರಾಕಾರಣಿ ಎಂದೇ ಗುರುತಿಸಿಕೊಂಡಿರುವ ಕಿಮ್ಮನೆ ರತ್ನಾಕರ್‌ ಕಾಂಗ್ರೆಸ್‌ ತೊರೆಯುತ್ತಾರ, ಅಥವಾ ಊಹಾಪೋಹಗಳಿಗೆ ಉತ್ತರಿಸುತ್ತಾರ ಎಂಬುದನ್ನು ಕಾದು ನೋಡಬೇಕು. 

ಇದನ್ನೂ ಓದಿ: ಮುಸ್ಲಿಂ ಅಭ್ಯರ್ಥಿ ಗೆಲ್ಲಿಸಲು JDS ಅಭ್ಯರ್ಥಿ ನಿವೃತ್ತಿ ಘೋಷಿಸಲಿ: ಸಿದ್ದರಾಮಯ್ಯ

ರಾಜ್ಯಸಭೆ ಕಸರತ್ತು:

ರಾಜ್ಯಸಭೆ ನಾಲ್ಕು ಸ್ಥಾನಕ್ಕೆ ಚುನಾವಣೆ ಇದೇ ಹತ್ತನೇ ತಾರೀಕು ನಡೆಯಲಿದ್ದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಕುಪೇಂದ್ರ ರೆಡ್ಡಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರೆ ಮನ್ಸೂರ್‌ ಅಲಿ ಖಾನ್‌ ಕಾಂಗ್ರೆಸ್‌ನಿಂದ ಎರಡನೇ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಜಾತ್ಯತೀತ ನೀತಿಗೆ ಕಟಿಬದ್ಧರಾಗಿದ್ದರೆ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ. ಅತ್ತ ಜೆಡಿಎಸ್‌ ನಾಯಕರು ಬೇಕಂತಲೇ ಕಾಂಗ್ರೆಸ್‌ ಎರಡನೇ ಅಭ್ಯರ್ಥಿಯಾಗಿ ಅಲ್ಪಸಂಖ್ಯಾತ ವ್ಯಕ್ತಿಯನ್ನು ನಿಲ್ಲಿಸಿ ಸಮುದಾಯಕ್ಕೆ ವಂಚಿಸುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾಶಸ್ತ್ಯ ಕೊಡುವುದೇ ಆಗಿದ್ದರೆ ಮೊದಲ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕಿತ್ತು. ಈಗ ಜೆಡಿಎಸ್‌ಗೆ ಬೆಂಬಲ ನೀಡಿ ಯಾಕೆಂದರೆ ಕಾಂಗ್ರೆಸ್‌ಗೆ 25 ಮತಗಳು ಮಾತ್ರ ಇವೆ, ಆದರೆ ಜೆಡಿಎಸ್‌ಗೆ 32 ಮತಗಳಿವೆ ಎಂದು ಜೆಡಿಎಸ್‌ ಬೇಡಿಕೆಯಿಟ್ಟಿದೆ. ಇನ್ನೊಂದೆಡೆ ಜೆಡಿಎಸ್‌ - ಕಾಂಗ್ರೆಸ್‌ ತಿಕ್ಕಾಟದಲ್ಲಿ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಲೆಹರ್‌ ಸಿಂಗ್‌ಗೆ ಬೆಂಬಲ ನೀಡುವಂತೆ ಜೆಡಿಎಸ್‌ಗೆ ಕೋರಿದೆ. 

ಇದನ್ನೂ ಓದಿ: Rajya Sabha Election: ಬಿಜೆಪಿಯ 3 ಅಭ್ಯರ್ಥಿಗಳಿಗೂ ಜಯ: ಅರುಣ್‌ ಸಿಂಗ್‌ ವಿಶ್ವಾಸ

ಒಟ್ಟಿನಲ್ಲಿ ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಮೂರೂ ಪಕ್ಷಗಳೂ ಹಾಸಿಗೆ ಮೀರಿ ಕಾಲು ಚಾಚಿದ್ದು, ಕಡೆಗೆ ಗೆಲುವು ಯಾರ ಪಾಲಾಗಲಿದೆ ಎಂಬುದನ್ನು ಕಾದುನೋಡಬೇಕು. 

 

Latest Videos
Follow Us:
Download App:
  • android
  • ios