ಕರ್ನಾಟಕದ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿ: ಸಚಿವ ಚಲುವರಾಯಸ್ವಾಮಿ
ಜನರಿಗೆ ಕೊಟ್ಟಮಾತಿನಿಂದ ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಸರ್ಕಾರ 59 ಸಾವಿರ ಕೋಟಿ ರು. ವೆಚ್ಚದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವುದು ವಿಪಕ್ಷಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದೆ. ಅದನ್ನು ಅವರಿಂದ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಣಕಿಸಿದರು.
ಮಂಡ್ಯ (ಜೂ.04): ಜನರಿಗೆ ಕೊಟ್ಟ ಮಾತಿನಿಂದ ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಸರ್ಕಾರ 59 ಸಾವಿರ ಕೋಟಿ ರು. ವೆಚ್ಚದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವುದು ವಿಪಕ್ಷಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದೆ. ಅದನ್ನು ಅವರಿಂದ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಣಕಿಸಿದರು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಸಂಪುಟ ರಚನೆಯಾದ ನಂತರದಲ್ಲಿ ನಡೆದ ಮೊದಲ ಸಂಪುಟದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐತಿಹಾಸಿಕ ತೀರ್ಮಾನ ಪ್ರಕಟಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಪಕ್ಷ ಗಳು ಅಧಿಕಾರದಲ್ಲಿದ್ದ ಸಮಯದಲ್ಲಿ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸಲಿಲ್ಲ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದಾಗ ಮುಕ್ತವಾಗಿ ಅಭಿನಂದಿಸುವ, ಒಳ್ಳೆಯ ಮಾತುಗಳನ್ನಾಡುವ ಸೌಜನ್ಯವನ್ನೂ ಪ್ರದರ್ಶಿಸದೆ ಹೀಯಾಳಿಸುವುದು ಸರಿಯೇ? ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರಿಂದ ಈ ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವೇ ಇಲ್ಲ. ಇದು ಯಾರೂ ಜಾರಿ ಮಾಡಲಾಗದ ತೀರ್ಮಾನ ಎಂದು ಅವರು ಭಾವಿಸಿದ್ದರು. ಜನರ ಮುಂದೆ ಅವ ಮಾನಕ್ಕೊಳಗಾಗುವ ಕ್ಷಣಗಳಿಗೆ ಎದುರು ನೋಡುತ್ತಿದ್ದರು. ಆದರೆ, ಕಾಂಗ್ರೆಸ್ ಅವರ ನುಡಿದಂತೆ ನಡೆಯುವ ಮೂಲಕ ಕರ್ನಾಟಕದ ಮಾದರಿಯನ್ನು ದೇಶಕ್ಕೆ ಹಾಕಿಕೊಟ್ಟಿದ್ದೇವೆ ಎಂದು ಹೇಳಿದರು.
ಕೃಷಿ ಸಚಿವ ಚಲುವರಾಯಸ್ವಾಮಿ ಮುಂದಿದೆ ಹಲವು ಸವಾಲುಗಳು!
ಜೆಡಿಎಸ್ ಸರ್ಕಾರ ಸರಿಯಾದ ರೀತಿಯಲ್ಲಿ ರೈತರ ಸಾಲ ಮನ್ನಾ ಮಾಡಲಿಲ್ಲ. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿ ಅದನ್ನೂ ಮಾಡಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರ ಅನ್ನಭಾಗ್ಯಕ್ಕೆ ಕತ್ತರಿ ಹಾಕಿತು. ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಿತು. 40 ಪರ್ಸೆಂಟ್ ಸರ್ಕಾರ ಎಂಬ ಹಣೆಪಟ್ಟಿಕಟ್ಟಿಕೊಂಡಿತು. ಅಭಿವೃದ್ಧಿಯಲ್ಲಿ ಶೂನ್ಯ ಆವರಿಸಿದ್ದ ಐದು ವರ್ಷಗಳ ಸರ್ಕಾರವನ್ನು ತೆಗೆದು ಕಾಂಗ್ರೆಸ್‌ಗೆ ಪೂರ್ಣ ಬಹುಮತ ನೀಡಿ ಜನರು ಅಧಿಕಾರ ಕೊಟ್ಟಿದ್ದಾರೆ. ಅದಕ್ಕಾಗಿಯೇ ಜನರಿಗೆ ಕೊಟ್ಟಮಾತಿನಂತೆ ನಡೆಯುತ್ತಿದ್ದೇವೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ಮೈಷುಗರ್ ಕಾರ್ಖಾನೆಯನ್ನು ನಡೆಸಲಾಗದೆ ಖಾಸಗೀರಣಕ್ಕೆ ಮುಂದಾಗಿದ್ದಾಗ, ನಿಮ್ಮ ಕೈಲಾದರೆ ನಡೆಸಿ. ಇಲ್ಲದಿದ್ದರೆ ಇನ್ನೊಂದು ವರ್ಷ ಬಿಡಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 15 ದಿನದಲ್ಲೇ ಅನುದಾನ ಕೊಟ್ಟು ಕಾರ್ಖಾನೆ ಆರಂಭಿಸುವುದಾಗಿ ಹೇಳಿದ್ದೆ. ಸಿದ್ದರಾಮಯ್ಯನವರು ಸದನದಲ್ಲೂ ಇದೇ ಮಾತನ್ನೇ ಹೇಳಿ ದ್ದರು. ಅದೇ ರೀತಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಹತ್ತೇ ದಿನದಲ್ಲಿ ಮೈಷುಗರ್‌ಗೆ 50 ಕೋಟಿ ರು. ಹಣ ನೀಡಿ ಕಾರ್ಖಾನೆ ಉಳಿವಿಗೆ ಬದ್ಧರಾಗಿದ್ದೇವೆ ಎನ್ನುವುದನ್ನು ತೋರಿಸಿ ಕೊಟ್ಟಿದ್ದೇವೆ ಎಂದರು.
ವಿಪಕ್ಷದವರು ನಮ್ಮ ವೈರಿಗಳೇನಲ್ಲ. ಅವರು ನಮ್ಮನ್ನು ಹೇಗೇ ನೋಡಿರಲಿ. ಅವರೂ ನಮ್ಮ ಸ್ನೇಹಿತರೇ. ಅಭಿವೃದ್ಧಿ ಪರವಾದ ಸಲಹೆ-ಸೂಚನೆಗಳಿದ್ದರೆ ನೀಡಬಹುದು. ಅದನ್ನೂ ನಾವು ಪರಿಗಣಿಸುತ್ತೇವೆ. ಚುನಾವಣೆ ಮುಗಿದಿದೆ. ದ್ವೇಷ ಸಾಧನೆ ಬೇಡ. ಅಭಿವೃದ್ಧಿಯಲ್ಲಿ ಎಲ್ಲರೂ ಒಟ್ಟಾಗಿರೋಣ ಎಂದು ಕಿವಿಮಾತು ಹೇಳಿದರು. ನಾವು ಇನ್ನೊಂದು ಚುನಾವಣೆ ಎದುರಿಸಿ ಶಾಸಕರಾಗುತ್ತೇವೆಂದು ಕನಸು ಕಂಡಿರಲಿಲ್ಲ. ದೈವಕೃಪೆಯಿಂದ ಯಾರೂ ನಂಬಲಾಗದ ಫಲಿತಾಂಶ ನೀಡಿದ್ದೀರಿ. ನಿಮ್ಮ ವಿಶ್ವಾಸಕ್ಕೆ ತಕ್ಕಂತೆ ಅಧಿಕಾರ ನಡೆಸಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.
ಹೃದಯ ರೋಗಿಗಳ ಸಂಖ್ಯೆ ಹೆಚ್ಚಳ ಆತಂಕಕಾರಿ ಬೆಳವಣಿಗೆ: ಡಾ.ಸಿ.ಎನ್.ಮಂಜುನಾಥ್
ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ರವಿಕುಮಾರ್ ಗಣಿಗ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಹೆಚ್.ಬಿ.ರಾಮು, ಎಂ.ಎಸ್.ಆತ್ಮಾನಂದ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ, ವಿಜಯ್ ರಾಮೇಗೌಡ, ಬಿ.ಎಲ್.ದೇವರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಡಾ.ಹೆಚ್.ಕೃಷ್ಣ ಇತರರಿದ್ದರು.