ಉಚಿತ ವಿದ್ಯುತ್‌ಗೆ ರಾಜ್ಯದ 2.14 ಕೋಟಿ ಸಂಪರ್ಕಗಳು ಅರ್ಹ: ಸಚಿವ ಕೆ.ಜೆ.ಜಾರ್ಜ್‌

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಗೆ ಚಾಲನೆ ನೀಡಲಾಗಿದ್ದು, ಜೂನ್‌ 15ರಿಂದ ಜುಲೈ 5ರವರೆಗೆ ಯೋಜನೆಯಡಿ ಉಚಿತ ವಿದ್ಯುತ್‌ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ.

Karnatakas 2 14 crore connections eligible for free electricity Says Minister KJ George gvd

ಬೆಂಗಳೂರು (ಜೂ.08): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಗೆ ಚಾಲನೆ ನೀಡಲಾಗಿದ್ದು, ಜೂನ್‌ 15ರಿಂದ ಜುಲೈ 5ರವರೆಗೆ ಯೋಜನೆಯಡಿ ಉಚಿತ ವಿದ್ಯುತ್‌ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ. 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆ ಮಾಡುವ ಎಲ್ಲರೂ ಈ ಯೋಜನೆಗೆ ಫಲಾನುಭವಿ ಆಗಲು ಅರ್ಹರು. ರಾಜ್ಯದಲ್ಲಿ 2.16 ಕೋಟಿ ಗೃಹ ಬಳಕೆ ವಿದ್ಯುತ್‌ ಸಂಪರ್ಕಗಳಿವೆ. ಇವುಗಳಲ್ಲಿ ಮಾಸಿಕ 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆ ಮಾಡುವವರು 2.14 ಕೋಟಿ ಮಂದಿ ಇದ್ದಾರೆ. 

ಇವರು ಸರಾಸರಿ 53 ಯುನಿಟ್‌ನಷ್ಟು ವಿದ್ಯುತ್‌ ಬಳಕೆ ಮಾಡುತ್ತಾರೆ. ಉಳಿದಂತೆ 2 ಲಕ್ಷ ಸಂಪರ್ಕಗಳು ಮಾತ್ರ 200 ಯುನಿಟ್‌ಗಿಂತ ಹೆಚ್ಚು ಬಳಕೆ ಮಾಡುತ್ತಿದ್ದು, ಅವು ಮಾತ್ರ ‘ಗೃಹ ಜ್ಯೋತಿ’ ಸೌಲಭ್ಯದಿಂದ ಹೊರಗುಳಿಯಲಿವೆ ಎಂದು ಹೇಳಿದ್ದಾರೆ. ಈ ಬಗ್ಗೆ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೃಹ ಜ್ಯೋತಿ ಯೋಜನೆಯ ಸೌಲಭ್ಯವನ್ನು ಜನರಿಗೆ ಒದಗಿಸಲು ಎಲ್ಲಾ ರೀತಿ ಸಿದ್ಧತೆ ಮಾಡಿಕೊಂಡಿದ್ದೇವೆ. ನಾಗರಿಕರ ಎಲ್ಲಾ ಗೊಂದಲಗಳಿಗೂ ಪರಿಹಾರ ಕಲ್ಪಿಸಿದ್ದೇವೆ. 

ಬಿಜೆಪಿ ಕಾಲದ 3 ಕಾಯ್ದೆಗಳು ಮರುಪರಿಶೀಲನೆ: ಸಿಎಂ ಸಿದ್ದರಾಮಯ್ಯ

ಹೀಗಾಗಿ 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆ ಮಾಡುವ ಯಾರೇ ಆಗಲಿ ಯೋಜನೆಯ ಲಾಭ ಪಡೆಯಬಹುದು ಎಂದು ಸ್ಪಷ್ಟಪಡಿಸಿದರು. ಸೇವಾಸಿಂಧು ಪೋರ್ಟಲ್‌ನಲ್ಲಿ ಜೂ.15ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕಳೆದ 12 ತಿಂಗಳ ವಿದ್ಯುತ್‌ ಬಳಕೆ ಸರಾಸರಿ ಪರಿಗಣಿಸಿ ಮಾಸಿಕ ಸರಾಸರಿಗಿಂತ ಶೇ.10ರಷ್ಟುಹೆಚ್ಚು ವಿದ್ಯುತ್ತನ್ನು ಉಚಿತವಾಗಿ ಬಳಸಲು ಅವಕಾಶ ಕಲ್ಪಿಸಲಾಗಿದೆ. ಈ ಬಳಕೆಯ ಪ್ರಮಾಣ 200 ಯುನಿಟ್‌ ಮೀರಿದರೆ ಮಾತ್ರ ಪೂರ್ಣ ಶುಲ್ಕ ಪಾವತಿಸಬೇಕು ಎಂದು ಹೇಳಿದರು.

ಮನೆ ಮಾಲಿಕರು ಎಷ್ಟುಮನೆ ಇವೆ ಎಂದು ಘೋಷಿಸಲಿ: ಒಂದಕ್ಕಿಂತ ಹೆಚ್ಚು ಮನೆ ಬಾಡಿಗೆ ನೀಡಿರುವ ಮನೆ ಮಾಲಿಕರು ಎಷ್ಟುಮನೆಗಳಿವೆ ಎಂಬುದನ್ನು ಘೋಷಣೆ ಮಾಡಿಕೊಂಡರೆ ಇನ್ನೂ ಉತ್ತಮವಾಗುತ್ತದೆ. ಅವರಿಗೆ ಹೆಚ್ಚುವರಿ ಆಸ್ತಿ ತೆರಿಗೆ ವಿಧಿಸುವ ಹೆದರಿಕೆ ಬೇಡ. ಧೈರ್ಯವಾಗಿ ಘೋಷಿಸಿಕೊಳ್ಳಬಹುದು. ಸೇವಾಸಿಂಧು ಪೋರ್ಟಲ್‌ ಮೂಲಕವೇ ಇದನ್ನು ಘೋಷಿಸಲು ಅವಕಾಶ ಮಾಡಿಕೊಡುತ್ತೇವೆ. ಒಂದೇ ಸಂಖ್ಯೆಗೆ ಇಬ್ಬರು, ಮೂವರು ಅರ್ಜಿ ಸಲ್ಲಿಸಿದಾಗ ಪರಿಶೀಲನೆ ನಡೆಸಿ ಅರ್ಹರಿಗೆ ಸೌಲಭ್ಯ ನೀಡಲು ನೆರವಾಗುತ್ತದೆ ಎಂದು ಸಚಿವರು ಹೇಳಿದರು.

ಸರಾಸರಿಗಿಂತ ಹೆಚ್ಚು ಬಳಸಿದರೂ ನಿಗದಿತ ಶುಲ್ಕವಿಲ್ಲ: 12 ತಿಂಗಳ ಸರಾಸರಿಗಿಂತ ಶೇ.10ರಷ್ಟುಮಾತ್ರ ಹೆಚ್ಚುವರಿ ವಿದ್ಯುತ್‌ ಉಚಿತವಾಗಿ ಬಳಸಲು ಅವಕಾಶ ನೀಡಲಾಗಿದೆ. ಉದಾ: ಮಾಸಿಕ 100 ಯುನಿಟ್‌ ಬಳಕೆ ಮಾಡುತ್ತಿರುವವರು 110 ಯುನಿಟ್‌ವರೆಗೆ ಬಳಸಬಹುದು. ಅವರು 130 ಯುನಿಟ್‌ ಬಳಕೆ ಮಾಡಿದರೆ ಹೆಚ್ಚುವರಿ 20 ಯುನಿಟ್‌ಗೆ ಮಾತ್ರ ಶುಲ್ಕ ಪಾವತಿಸಬೇಕು. ಅವರು ಗೃಹ ಬಳಕೆಗೆ ನಿಗದಿ ಮಾಡಿರುವ 110 ರು. ನಿಗದಿತ ಶುಲ್ಕವನ್ನು ಪಾವತಿಸಬೇಕಾಗಿಲ್ಲ. 20 ಯುನಿಟ್‌ ಶುಲ್ಕ ಹಾಗೂ ಶೇ.9ರಷ್ಟುತೆರಿಗೆ ಪಾವತಿಸಿದರೆ ಸಾಕು ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ಮಾಹಿತಿ ನೀಡಿದರು. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಹಣಕಾಸು ನಿರ್ದೇಶಕ ದರ್ಶನ್‌ ಹಾಜರಿದ್ದರು.

ಅರ್ಜಿ ಸಲ್ಲಿಕೆ ಹೇಗೆ?: ಸೇವಾಸಿಂಧು ಪೋರ್ಟಲ್‌ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಲಿಂಕ್‌ ನೀಡಲಾಗುವುದು. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಂಪ್ಯೂಟರ್‌, ಮೊಬೈಲ್‌ಗಳಿಂದಲೂ ಅರ್ಜಿ ಸಲ್ಲಿಸಬಹುದು. ಉಳಿದವರು ಕರ್ನಾಟಕ ಒನ್‌, ಬೆಂಗಳೂರು ಒನ್‌, ಗ್ರಾಮ ಒನ್‌ ಕೇಂದ್ರಗಳು, ಸೇವಾ ಕೇಂದ್ರಗಳಿಂದ ಅರ್ಜಿ ಸಲ್ಲಿಸಬಹುದು. ಇದಕ್ಕೆ ಇ-ಆಡಳಿತ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು: ಅರ್ಜಿ ಸಲ್ಲಿಕೆ ವೇಳೆ ಸ್ವಂತ ಮನೆಯವರು ವಿದ್ಯುತ್‌ ಸಂಪರ್ಕದ ಆರ್‌.ಆರ್‌.ಸಂಖ್ಯೆ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಸ್ವಂತ ಮನೆಯವರಿಗೆ ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿರುವುದಿಲ್ಲ.

ಆದರೆ, ಬಾಡಿಗೆದಾರರು ಅಥವಾ ಲೀಸ್‌ಗೆ ಮನೆ ಪಡೆದಿರುವವರು ಆರ್‌.ಆರ್‌.ಸಂಖ್ಯೆ ಹಾಗೂ ಸಂಬಂಧಪಟ್ಟವಿಳಾಸ ಹೊಂದಿರುವ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಚ್‌ ಯಾವುದೇ ಅಧಿಕೃತ ಗುರುತಿನ ಚೀಟಿ ನೀಡಬೇಕು. ಸಂಬಂಧಪಟ್ಟವಿಳಾಸದ ಗುರುತಿನ ಚೀಟಿ ಇಲ್ಲದಿದ್ದರೆ ಬಾಡಿಗೆ ಅಥವಾ ಲೀಸ್‌ ಕರಾರುಪತ್ರ ನೀಡಬೇಕು. ಅವುಗಳನ್ನು ಪರಿಶೀಲನೆ ನಡೆಸಿ ಇಂಧನ ಇಲಾಖೆಯು ‘ಗೃಹ ಜ್ಯೋತಿ’ ಸೌಲಭ್ಯವನ್ನು ಒದಗಿಸುತ್ತದೆ ಎಂದು ಜಾಜ್‌ರ್‍ ಮಾಹಿತಿ ನೀಡಿದರು.

ಹೆಚ್ಚುವರಿ ಸರ್ವರ್‌ ವ್ಯವಸ್ಥೆ: ಜೂನ್‌ 15ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದು, 20 ದಿನಗಳಲ್ಲೇ 2.14 ಕೋಟಿಯಷ್ಟುಮಂದಿ ಅರ್ಜಿ ಸಲ್ಲಿಸಲು ಮುಗಿಬೀಳಲಿದ್ದಾರೆ. ಇದರಿಂದ ಸರ್ವರ್‌ ಮೇಲೆ ಒತ್ತಡ ಹೆಚ್ಚಾಗುವುದರಿಂದ ಐದು ಪಟ್ಟು ಹೆಚ್ಚು ಸಾಮರ್ಥ್ಯದ ಸರ್ವರ್‌ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ನಿತ್ಯ 5-10 ಲಕ್ಷ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇ-ಆಡಳಿತ ಅಧಿಕಾರಿಗಳು ತಿಳಿಸಿದರು.

ಸರ್ಕಾರಿ ವಕೀಲರ ನೇಮಕ ಹಗರಣ: ಇಲಾಖಾ ತನಿಖೆಗೆ ಸಿಎಂ ಸಿದ್ದು ನಿರ್ದೇಶನ

13 ಸಾವಿರ ಕೋಟಿ ರು. ಹೊರೆ: ಹಣಕಾಸಿನ ವಿಚಾರ ಇನ್ನೂ ಲೆಕ್ಕ ಮಾಡಿಲ್ಲ. ಹಿಂದಿನ ಸರಾಸರಿ ಬಳಕೆ ಪರಿಗಣಿಸಿದರೆ ವರ್ಷಕ್ಕೆ 13 ಸಾವಿರ ಕೋಟಿ ರು. ಹೊರೆ ಉಂಟಾಗುವ ಸಾಧ್ಯತೆಯಿದೆ ಎಂದು ಕೆ.ಜೆ. ಜಾರ್ಜ್‌ ತಿಳಿಸಿದರು.

ಹೊರ ರಾಜ್ಯದವರಿಗೂ ಉಚಿತ ವಿದ್ಯುತ್‌!: ಬೆಂಗಳೂರಿನಂತಹ ನಗರಗಳಿಗೆ ಉದ್ಯೋಗಕ್ಕಾಗಿ ಬಂದವರು ತಮ್ಮ ಸ್ವಂತ ಊರಿನ ವಿಳಾಸದಲ್ಲಿ ಗುರುತಿನ ಚೀಟಿ ಹೊಂದಿರುತ್ತಾರೆ. ಬೆಂಗಳೂರಿನಲ್ಲಿ ಬಾಡಿಗೆಗೆ ನೆಲೆಸಿರುತ್ತಾರೆ. ಅಂತಹವರು ಯಾವ ದಾಖಲೆ ಒದಗಿಸಿ ಗೃಹ ಜ್ಯೋತಿ ಸೌಲಭ್ಯ ಪಡೆಯಬೇಕು ಎಂಬ ಪ್ರಶ್ನೆ ಉದ್ಭವಿಸಬಹುದು. ಕೇವಲ ರಾಜ್ಯದ ಇತರೆ ಭಾಗದವರು ಮಾತ್ರವಲ್ಲ. ಕೇರಳ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಎಲ್ಲಾ ಗುರುತಿನ ಚೀಟಿ ದಾಖಲೆಗಳು ಕೇರಳದ ವಿಳಾಸದಲ್ಲಿದ್ದರೂ, ಇಲ್ಲಿ ವಾಸಿಸುತ್ತಿರುವುದಕ್ಕೆ ದಾಖಲೆ ನೀಡಿದರೆ (ಬಾಡಿಗೆ, ಲೀಸ್‌ ಕರಾರುಪತ್ರ, ಚಾಲನಾ ಪರವಾನಗಿ, ಪಾಸ್‌ಪೋರ್ಚ್‌ ಯಾವುದಾದರೂ) ಸೌಲಭ್ಯ ಪಡೆಯಬಹುದು ಎಂದು ಗೌರವ್‌ ಗುಪ್ತಾ ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios