Asianet Suvarna News Asianet Suvarna News

ಬಿಜೆಪಿ ಕಾಲದ 3 ಕಾಯ್ದೆಗಳು ಮರುಪರಿಶೀಲನೆ: ಸಿಎಂ ಸಿದ್ದರಾಮಯ್ಯ

ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಜಾನುವಾರು ಹತ್ಯೆ ಕಾಯ್ದೆ ತಿದ್ದುಪಡಿ ಮತ್ತಿತರ ಕಾಯ್ದೆಗಳ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 

3 Acts of BJP era to be reviewed Says CM Siddaramaiah gvd
Author
First Published Jun 8, 2023, 5:24 AM IST

ಬೆಂಗಳೂರು (ಜೂ.08): ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಜಾನುವಾರು ಹತ್ಯೆ ಕಾಯ್ದೆ ತಿದ್ದುಪಡಿ ಮತ್ತಿತರ ಕಾಯ್ದೆಗಳ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ತಮ್ಮನ್ನು ಭೇಟಿ ಮಾಡಿದ ರೈತ ಮುಖಂಡರ ಜೊತೆ ಚರ್ಚಿಸಿದ ಸಿದ್ದರಾಮಯ್ಯ, ಕೃಷಿಗೆ ಮಾರಕವಾಗಿರುವ ಕಾಯ್ದೆಗಳ ವಿರುದ್ಧ ರೈತರು ಹೋರಾಟ ನಡೆಸಿದ್ದಾರೆ. ನಮ್ಮ ಸರ್ಕಾರ ರೈತರ ಬೆಂಬಲಕ್ಕಿದೆ. ಈ ನಿಟ್ಟಿನಲ್ಲಿ ರೈತರ ಹಿತಕ್ಕೆ ಮಾರಕವಾಗಿರುವ ಕಾಯ್ದೆಗಳ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು. 

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ನೀತಿ, ನಿಯಮಾವಳಿಗಳ ಕುರಿತು ವಿವರವಾಗಿ ಚರ್ಚಿಸಲು ಪ್ರತ್ಯೇಕ ಸಭೆ ನಡೆಸುವುದಾಗಿ ಹೇಳಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಚಾಮರಸ ಮಾಲಿ ಪಾಟೀಲ್‌, ಕೇಂದ್ರ ಸರ್ಕಾರ ಕಾರ್ಪೊರೇಟ್‌ ಕೃಷಿಯನ್ನು ಪರಿಚಯಿಸುವುದರಿಂದ ಶೇ.85ಕ್ಕೂ ಹೆಚ್ಚಿನ ಪ್ರಮಾಣದಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತೊಂದರೆಯಾಗಲಿದೆ ಎಂಬುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ರೈತರ ಹಿತ ಕಾಯುವುದಾಗಿ ಭರವಸೆ ನೀಡಿದರು ಎಂದು ತಿಳಿಸಿದರು. 

ಪಠ್ಯ ಪರಿಷ್ಕರಣೆ ಗೊಂದಲ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ರೈತರ ಸಮಸ್ಯೆಗಳ ಬಗ್ಗೆ ಬಜೆಟ್‌ ಮಂಡನೆಗೂ ಮೊದಲೇ ರೈತ ಮುಖಂಡರು, ಸಂಬಂಧಪಟ್ಟಇಲಾಖೆಗಳ ಸಚಿವರು, ಹಿರಿಯ ಅಧಿಕಾರಿಗಳ ಸಭೆ ಕರೆಯಬೇಕು. ವಿದ್ಯುತ್‌, ನೀರಾವರಿ, ಬಿತ್ತನೆ ಬೀಜ, ರಸಗೊಬ್ಬರ, ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಮತ್ತಿತರ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಬೇಕು ಎಂಬ ಮನವಿಗೆ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದು ವಿವರಿಸಿದರು. ಶಾಸಕರಿಗೆ ವಯಸ್ಸಾದ ಹಸು ನೀಡಿಕೆ: ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಡಗಲಪುರ ನಾಗೇಂದ್ರ, ಜಿ.ಸು.ಬೈಯ್ಯಾರೆಡ್ಡಿ, ಅಧಿಕಾರಿ ಹಾಗೂ ಶಾಸಕರಿಗೆ ವಯಸ್ಸಾದ ಹಸುಗಳನ್ನು ನೀಡಲು ರೈತ ಸಂಘ ತಯಾರಿದೆ. 

ನೂತನ ಸರ್ಕಾರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಮಸೂದೆ ಹಿಂಪಡೆದು, ವೈಜ್ಞಾನಿಕ ತಳಹದಿಯ ಮೇಲೆ ಹೊಸ ಮಸೂದೆ ಮಂಡಿಸಬೇಕು ಎಂದು ಆಗ್ರಹಿಸಿದರು. ರಾಷ್ಟ್ರೀಯ ದ್ರಾವಿಡ್‌ ಸಂಘದ ಅಧ್ಯಕ್ಷ ಅಗ್ನಿ ಶ್ರೀಧರ್‌, ಅರೆಶಂಕರ ಮಠದ ಪೀಠಾಧ್ಯಕ್ಷ ಚೈತನ್ಯ ಸಿದ್ದರಾಮ ಸ್ವಾಮೀಜಿ, ಮನೋವಿಜ್ಞಾನಿ ಅ.ಶ್ರೀಧರ್‌ ಅವರು, ಆಹಾರದ ವಿಷಯವನ್ನು ಭಾವನಾತ್ಮಕ ನೆಲೆಯಲ್ಲಿ ಚರ್ಚೆಗೆ ತರಲಾಗಿದೆ, ಹಾಗಾಗಿ ವೈಜ್ಞಾನಿಕ ಹಾಗೂ ತಾರ್ಕಿಕವಾಗಿ ಹೊಸ ಮಸೂದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಯಾವುದಿವು ಕಾಯ್ದೆ?
1. ಭೂ ಸುಧಾರಣೆ:
ಕೃಷಿಕರಲ್ಲದವರೂ ಭೂಮಿ ಖರೀದಿ ಮಾಡಲು ಅವಕಾಶ ಕಲ್ಪಿಸುವ ಕಾನೂನು

2. ಎಪಿಎಂಸಿ: ಎಲ್ಲಿ ಬೇಕಾದರೂ ಕೃಷಿ ಉತ್ಪನ್ನ ಮಾರಲು ರೈತರಿಗೆ ಅನುವು ಮಾಡಿಕೊಡುವ ಕಾಯ್ದೆ

3. ಗೋಹತ್ಯೆ: ಗೋ ಹತ್ಯೆ ನಿಷೇಧಿಸಿ, ಗೋಹತ್ಯೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲು ಇರುವ ಶಾಸನ

ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಅರಸು ಎಲ್ಲರಿಗೂ ಮಾದರಿ: ಸಿದ್ದರಾಮಯ್ಯ

ಕೃಷಿಗೆ ಮಾರಕವಾಗಿರುವ ಕಾಯ್ದೆಗಳ ವಿರುದ್ಧ ರೈತರು ಹೋರಾಟ ನಡೆಸಿದ್ದಾರೆ. ನಮ್ಮ ಸರ್ಕಾರ ರೈತರ ಬೆಂಬಲಕ್ಕಿದೆ. ಈ ನಿಟ್ಟಿನಲ್ಲಿ ರೈತರ ಹಿತಕ್ಕೆ ಮಾರಕವಾಗಿರುವ ಕಾಯ್ದೆಗಳ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು.
- ಸಿದ್ದರಾಮಯ್ಯ ಮುಖ್ಯಮಂತ್ರಿ

Follow Us:
Download App:
  • android
  • ios