ಬಂಡೆ ಲೂಟಿ ಆರೋಪಗಳನ್ನು ತಳ್ಳಿಹಾಕಿದ ಡಿ.ಕೆ.ಶಿವಕುಮಾರ್, ಕನಕಪುರದಲ್ಲಿ ಚುನಾವಣೆಗೆ ನಿಲ್ಲುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಪರೋಕ್ಷ ಸವಾಲು ಹಾಕಿದ್ದಾರೆ. ರಾಜಕೀಯ ದ್ವೇಷ ಬಿಟ್ಟು ಎಆರ್ಎಐ ಕೇಂದ್ರ ಸ್ಥಾಪಿಸಿ ಯುವಕರಿಗೆ ಉದ್ಯೋಗ ನೀಡುವಂತೆ, ಸವಾಲೆಸೆದರು.
ಕನಕಪುರ (ನ.29): ಬಂಡೆ ಲೂಟಿ ಮಾಡ್ತಾನೆ ಅಂತಾರೆ. ನಾನು ಯಾರ ಜೇಬಿಗೂ ಕೈ ಹಾಕಿಲ್ಲ, ಯಾರ ಆಸ್ತಿಯನ್ನೂ ಹೊಡೆದಿಲ್ಲ. ಯಾರೂ ಬೇಕಾದ್ರೂ ಬಂದು ಇಲ್ಲಿಯೇ ಚುನಾವಣೆಗೆ ನಿಲ್ಲಲಿ. ಈ ಹಿಂದೆ ಬಂದು ಚುನಾವಣೆಗೆ ನಿಂತಿದ್ದ ಸಮಯದಲ್ಲಿ ಏನಾಯ್ತು ಎಂಬುದು ಇಡೀ ನಾಡಿಗೆ ತಿಳಿದಿರುವ ವಿಷಯ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ರಾಜಕೀಯ ದ್ವೇಷ ಬಿಟ್ಟು ತಮ್ಮ ಕೆಲಸ ಮಾಡಲಿ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಕೇಂದ್ರ ಸಚಿವರು ತಮ್ಮ ಕೆಲಸವನ್ನು ಬಿಟ್ಟು ಬರೀ ರಾಜಕೀಯ ದ್ವೇಷ ಸಾಧನೆಗೆ ನಿಂತಿದ್ದು, ಮೊದಲು ಇಲ್ಲಿ ಎಆರ್ಎಐ ಸೆಂಟರ್ ಸ್ಥಾಪನೆ ಮಾಡಲು ಮುಂದಾಗಲಿ ಇದರಿಂದ ಸಾಕಷ್ಟು ಬೆಳವಣಿಗೆ ಆಗುತ್ತದೆ. ಇದರ ಬಗ್ಗೆ ತಿಳಿದಿಲ್ಲ ಎಂದರೆ ಪುಣೆಗೆ ಹೋಗಿ ನೋಡಿಕೊಂಡು ಬರಲಿ ಇದರಿಂದ ಕೈಗಾರಿಕೆಗಳು ಸ್ಥಾಪನೆಯಾಗಿ ಯುವಕರಿಗೆ ಉದ್ಯೋಗ ಲಭಿಸುತ್ತದೆ. ಈಗ ಬೇರೆ ದೇಶಗಳಿಗೆ ವಾಹನಗಳು ಟೆಸ್ಟಿಂಗ್ ಹೋಗುತ್ತಿವೆ, ಎಆರ್ಎಐ ಇಲ್ಲೇ ಆದರೆ ಅವು ಇಲ್ಲೇ ಟೆಸ್ಟ್ ಆಗುತ್ತವೆ ಎಂದರು.
ಎಆರ್ಎಐ ಜೊತೆಗೆ ಬೇರೆ ಕಾರ್ಖಾನೆ ಸ್ಥಾಪನೆ ನಾನು 500 ಎಕರೆ ಕೇಳಿದ್ದು, ಅದನ್ನೇ ಮಂಡ್ಯ ಶಾಸಕರು 100 ಅಂತ ಹೇಳಿದರೆ ಈಗ 500 ಎಕರೆ ಅಂತಾ ವಿವಾದ ಮಾಡುತ್ತಾ ನನ್ನನ್ನು ದೂರುತ್ತಿದ್ದು ಮಂಡ್ಯದಲ್ಲಿ ಏನು ಮಾಡಿದ್ದಾನೆ ಸಾಕ್ಷಿ ಗುಡ್ಡೆ ಕೊಡಲಿ ಅಂತಾರೆ. ಮೊದಲು ನೀವು ಜಾಗ ಕೊಡಿ ನಾನು ಸಾಕ್ಷಿಗುಡ್ಡೆಯನ್ನು ಕೊಡ್ತೀನಿ. ನನಗೆ ಇವರು ಈಗ 100 ಎಕರೆಯನ್ನೇ ಕೊಡಲಿ ಸಾಕು. ಮುಂದೆ ಚುನಾವಣೆ ಬರುತ್ತೆ. ಆಗ ಜನ ಆಶೀರ್ವಾದ ಮಾಡ್ತಾರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬರುತ್ತೆ ಆಗ ನಾವೇ ಮಾಡ್ತೀವಿ ಕೆಲವರು ಟೀಕೆ ಮಾಡ್ತಾರೆ ಮಾಡಲಿ ನಾನು ತಲೆಕಡಿಸಿಕೊಳ್ಳಲ್ಲ ಎಂದರು.
ಪಿಂಚಣಿಗೆ ಲಂಚ ತಪ್ಪಿಸಿದ್ದೇನೆ:
ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಪಿಂಚಣಿ ಕೊಡಲು ಅರ್ಜಿ ಹಾಕಿದರೆ 2 ಸಾವಿರ ರು.ಲಂಚ ಕೊಡಬೇಕಿತ್ತು. ಅದನ್ನು ತಪ್ಪಿಸಲೆಂದೇ ನಾನು ಸಮಿತಿ ಮಾಡಿ, ಅರ್ಜಿ ಪಡೆದು ಮನೆ ಬಾಗಿಲಿಗೆ ವೃದ್ಧಾಪ್ಯ, ಎಲ್ಲ ರೀತಿಯ ಪಿಂಚಣಿ ತಲುಪಿಸುತ್ತಿದ್ದೇವೆ. ಬಡವರಿಗಾಗಿ 15 ಸಾವಿರ ಸೈಟುಗಳನ್ನು ನೀಡಲು ಸಿದ್ಧತೆಯಾಗಿದೆ. ಕನಕಪುರದಲ್ಲಿ 80 ಸೈಟು ಹಂಚಿದ್ದೇವೆ. ಬಡವರಿಗೆ 20-30 ಅಳತೆ ಸೈಟಿನ ಬದಲಾಗಿ 30-40 ನಿವೇಶನಗಳನ್ನು ವಿತರಿಸುವಂತೆ ಮಾರ್ಗದರ್ಶನ ನೀಡಿದ್ದೇನೆ, ಎಲ್ಲಾ ಬಡವರು ಕಾರು ತೆಗೆದುಕೊಳ್ಳಬೇಕು, ಹಸು ಕಟ್ಟಬೇಕು. ಅನ್ನೋದು ನನ್ನ ಆಸೆ. ಇದಕ್ಕಾಗಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇನೆ ಎಂದರು.












