Maharashtra CM Devendra Fadnavis visits Belagavi ಬೆಳಗಾವಿಗೆ ಆಗಮಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಎಂಇಎಸ್ ಮುಖಂಡರು ಭೇಟಿಯಾಗಿ ಗಡಿ ವಿವಾದ ಕುರಿತು ಚರ್ಚಿಸಿದರು. ನಾಗಪುರ ಅಧಿವೇಶನದ ಬಳಿಕ ಈ ಬಗ್ಗೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಬೆಳಗಾವಿ (ನ.29): ನಗರಕ್ಕೆ ಆಗಮಿಸಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್(Maharashtra CM Devendra Fadnavis) ಅವರನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಮುಖಂಡರು ಭೇಟಿಯಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು. ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ(Maharashtra Karnataka Border dispute) ಹಾಗೂ ಮರಾಠಿ ಭಾಷೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದ ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ನಾಗಪುರ ಅಧಿವೇಶನ ಮುಗಿದ ಬಳಿಕ ಸಭೆ ನಡೆಸಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.

ದೇವೇಂದ್ರ ಫಡ್ನವೀಸ್ ಗೆ ಎಂಇಎಸ್ ಮನವಿ ಏನು?

ಎಂಇಎಸ್ ಅಧ್ಯಕ್ಷ ಪ್ರಕಾಶ್ ಮರಗಾಳೆ ನೇತೃತ್ವದ ನಿಯೋಗವು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಮನವಿ ಪತ್ರ ಸಲ್ಲಿಸಿತು. ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕು. ಕೊಲ್ಲಾಪುರದಲ್ಲಿ ಆದಷ್ಟು ಬೇಗ ಉನ್ನತಾಧಿಕಾರ ಸಮಿತಿ ಸಭೆ ಕರೆಯಬೇಕು ಎಂದು ನಿಯೋಗ ಒತ್ತಾಯಿಸಿತು.

ಅಲ್ಲದೆ, ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶರಣಕುಮಾರ್ ಲಿಂಬಾಳೆ ಅವರು ಗಡಿ ವಿವಾದ ಹಾಗೂ ಮರಾಠಿ ಭಾಷೆಯ ಕುರಿತು ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಖಂಡಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ ಎಂದು ವಕೀಲ ಅಮರ್ ಯಳ್ಳೂರಕರ ತಿಳಿಸಿದರು.

ನಿಯೋಗದ ಮನವಿ ಸ್ವೀಕರಿಸಿದ ಸಿಎಂ ಫಡ್ನವೀಸ್ ಅವರು, ನಾಗಪುರ ಅಧಿವೇಶನ ಮುಕ್ತಾಯಗೊಂಡ ಬಳಿಕ ಕೊಲ್ಲಾಪುರದಲ್ಲಿ ಉನ್ನತಾಧಿಕಾರ ಸಂಪುಟ ಸಮಿತಿ ಹಾಗೂ ತಜ್ಞರ ಸಮಿತಿ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಜಿ ಶಾಸಕ ಮನೋಹರ ಕಿಣೇಕರ್ ಮಾಹಿತಿ ನೀಡಿದರು.