Asianet Suvarna News Asianet Suvarna News

ಜಿಲ್ಲೆಗಳಿಗೆ ನೂತನ ಸಚಿವರ ದೌಡು!

* ಮಂತ್ರಿಮಂಡಲ ರಚನೆ ವೇಳೆ ಸಿಎಂ ಬೊಮ್ಮಾಯಿ ನೀಡಿದ ಟಾಸ್ಕ್‌ ಪಾಲನೆ

* ಜಿಲ್ಲೆಗಳಿಗೆ ನೂತನ ಸಚಿವರ ದೌಡು

* ನೆರೆ ಹಾನಿ, ಕೋವಿಡ್‌ ನಿರ್ವಹಣೆ ಪರಿಶೀಲನೆ, ಅಧಿಕಾರಿಗಳ ಜೊತೆ ಸಭೆ

karnataka Politics Newly Swor In Ministers Focuses On Their Districts Issues pod
Author
Bangalore, First Published Aug 7, 2021, 7:20 AM IST
  • Facebook
  • Twitter
  • Whatsapp

ಬೆಂಗಳೂರು(ಆ.07): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ರಚಿಸಿದ ಬೆನ್ನಲ್ಲೇ ನೀಡಿರುವ ಟಾಸ್ಕ್‌ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಗಳಿಗೆ ಭೇಟಿ ನೀಡಿದ ನೂತನ ಸಚಿವರು ಅಲ್ಲಿನ ನೆರೆ ಹಾಗೂ ಕೋವಿಡ್‌ ಪರಿಸ್ಥಿತಿಗಳ ಕುರಿತು ಪರಿಶೀಲನೆ ನಡೆಸಿದರು. ಕೆಲ ಸಚಿವರು ನೆರೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ತೆರಳಿ ಖುದ್ದು ಪರಿಶೀಲನೆ ನಡೆಸಿದರೆ, ಮತ್ತೆ ಕೆಲವರು ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಪಡೆದರು. ಇದೇ ವೇಳೆ ಕೋವಿಡ್‌-19 ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲು ಸಲಹೆ ಸೂಚನೆಗಳನ್ನು ನೀಡಿದರು.

2ನೇ ಬಾರಿ ಸಿ.ಪಿ.ಯೋಗೇಶ್ವರ್‌ಗೆ ಎದುರಾದ ಕಹಿ ಅನುಭವ

ಶುಕ್ರವಾರ ಬಾಗಲಕೋಟೆಯಲ್ಲಿ ಸಚಿವ ಉಮೇಶ್‌ ಕತ್ತಿ, ಹಾವೇರಿಯಲ್ಲಿ ಬಿ.ಸಿ.ಪಾಟೀಲ್‌, ಹಾಸನದಲ್ಲಿ ಗೋಪಾಲಯ್ಯ, ಉತ್ತರ ಕನ್ನಡದಲ್ಲಿ ಶಿವರಾಮ್‌ ಹೆಬ್ಬಾರ್‌, ಶಿವಮೊಗ್ಗದಲ್ಲಿ ಕೆ.ಎಸ್‌.ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಜಂಟಿಯಾಗಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಳಿದಂತೆ ಹೆಚ್ಚಿನವರು ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದು, ಶನಿವಾರ ನೆರೆ ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ.

ಪ್ರವಾಹದಿಂದ ಅತಿ ಹೆಚ್ಚು ಹಾನಿಗೀಡಾಗಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸಚಿವ ಶಿವರಾಮ ಹೆಬ್ಬಾರ್‌ ಅಧಿಕಾರಿಗಳ ಸಭೆ ನಡೆಸಿ ತಾಲೂಕಿನಲ್ಲಿ ಪ್ರವಾಹದಿಂದ ಆಗಿರುವ ಅನಾಹುತ, ಹಾನಿಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಕೆಲ ಪ್ರವಾಹ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿದರು. ಶನಿವಾರ ಅವರು ಕಾರವಾರದಲ್ಲಿ ಕೋವಿಡ್‌-19 ನಿಯಂತ್ರಣ ಮತ್ತು ಪ್ರವಾಹ ಹಾನಿ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ.

ಹಾವೇರಿಯಲ್ಲಿ ದಿನವಿಡೀ ಅಧಿಕಾರಿಗಳ ಸಭೆ ನಡೆಸಿದ ಸಚಿವ ಬಿ.ಸಿ.ಪಾಟೀಲ್‌, ಪ್ರವಾಹದಿಂದಾದ ಹಾನಿ, ಪರಿಹಾರ ಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಬಳಿಕ ಅತಿವೃಷ್ಟಿಯಿಂದ ಬೆಳೆಹಾನಿಯಾದ ರೈತರ ಹೊಲಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶನಿವಾರವೂ ಅವರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಇನ್ನು ಸಚಿವರಾದ ಕೆ.ಎಸ್‌.ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜತೆಗೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಎಂ ಬಳಿಯೇ ಹಣಕಾಸು, BDA, ಇಂಧನ: ಇಲ್ಲಿದೆ ಪ್ರಮುಖರ ಸಂಭಾವ್ಯ ಖಾತೆ!

ಹಾಸನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಗೋಪಾಲಯ್ಯ ಕೋವಿಡ್‌ ಪರಿಸ್ಥಿತಿ, ಮಳೆಯಿಂದಾದ ಬೆಳೆ ಹಾನಿ ಬಗ್ಗೆ ಚರ್ಚಿಸಿದರು. ನಂತರ ಮಳೆಯಿಂದ ಕುಸಿದಿದ್ದ ದೋಣಿಗಲ್‌ ಬಳಿಯ ರಾ.ಹೆ.75ಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಪರಿಶೀಲಿಸಿದರು. ಬಾಗಲಕೋಟೆಯಲ್ಲಿ ಜಿಲ್ಲೆಯಲ್ಲಿ ಸಚಿವ ಉಮೇಶ್‌ ಕತ್ತಿ ಅಧಿಕಾರಿಗಳ ಸಭೆಯ ಜತೆಗೆ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಡಗಿಗೆ ಕೋಟ ಭೇಟಿ:

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಡಿಕೇರಿಗೆ ತೆರಳಿ ಕೊಡಗು ಜಿಲ್ಲೆಯಲ್ಲಿನ ಮಳೆ ಹಾನಿ ಹಾಗೂ ಕೋವಿಡ್‌ ಹೆಚ್ಚಳದ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ನಂತರ ಉಡುಪಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಸಭೆ ನಡೆಸಿದರು. ಸಚಿವ ಗೋವಿಂದ ಕಾರಜೋಳ ಬೆಳಗಾವಿ ಜಿಲ್ಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದು, ಶನಿವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮಂಗಳೂರಿನಲ್ಲಿ ಸಭೆ ನಡೆಸಿದ ಸಚಿವ ಎಸ್‌. ಅಂಗಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಹಾಗೂ ಪ್ರವಾಹ ಹಾವಳಿ ಪರಿಹಾರ ಕಾರ್ಯಗಳ ಮಾಹಿತಿ ಪಡೆದು, ಸೂಕ್ತ ಪರಿಹಾರಕ್ಕೆ ಸೂಚಿಸಿದರು.

ಕರ್ನಾಟಕದ ರಾಜಕಾರಣಿಗಳಿಗೆ ದೆಹಲಿಯಲ್ಲೀಗ ಪ್ರಹ್ಲಾದ್ ಜೋಶಿ ಆಪದ್ಬಾಂಧವ

ಸಚಿವ ಆನಂದ ಸಿಂಗ್‌ ಬಳ್ಳಾರಿಯಲ್ಲಿ ಅಧಿಕಾರಿಗಳ ಸಭೆನಡೆಸಿ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಹಾಗೂ ಕೋವಿಡ್‌ ನಿಯಮಾವಳಿ ಪಾಲಿಸುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಬೆಂಗಳೂರಿನ ವಿಕಾಸ ಸೌಧದಿಂದ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಸಭೆ ನಡೆಸಿದ ಸಚಿವ ಮುರುಗೇಶ್‌ ನಿರಾಣಿ ಕಲಬುರಗಿ ಜಿಲ್ಲೆಯಲ್ಲಿನ ನೆರೆ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು.

ಸಚಿವರಿಂದ ನೆರೆ ಸಮೀಕ್ಷೆ

ಬಾಗಲಕೋಟೆಯಲ್ಲಿ ಸಚಿವ ಉಮೇಶ್‌ ಕತ್ತಿ, ಹಾವೇರಿಯಲ್ಲಿ ಬಿ.ಸಿ.ಪಾಟೀಲ್‌, ಹಾಸನದಲ್ಲಿ ಗೋಪಾಲಯ್ಯ, ಉತ್ತರ ಕನ್ನಡದಲ್ಲಿ ಶಿವರಾಮ್‌ ಹೆಬ್ಬಾರ್‌, ಶಿವಮೊಗ್ಗದಲ್ಲಿ ಕೆ.ಎಸ್‌.ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಜಂಟಿಯಾಗಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.

Follow Us:
Download App:
  • android
  • ios