ಇಂದು ಮೇಲ್ಮನೆ ಚುನಾವಣಾ ಫಲಿತಾಂಶ ಪ್ರಕಟ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ಧತೆ ಒಟ್ಟು 7 ಟೇಬಲ್ ವ್ಯವಸ್ಥೆ - ಗೆಲುವಿಗೆ ಕನಿಷ್ಠ 1036 ಮತ ಅಗತ್ಯ
ಬೆಂಗಳೂರು(ಡಿ.14): ಬೆಂಗಳೂರು ನಗರ (Bengaluru City) ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ದ್ವೈ ವಾರ್ಷಿಕ ಚುನಾವಣೆಯ (Election) ಮತ ಎಣಿಕಾ ಕಾರ್ಯ ನಗರದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಮತಗಟ್ಟೆಗಳಿಂದ ತಂದಿರುವ ಮತಪೆಟ್ಟಿಗೆಗಳನ್ನು ಮತ ಎಣಿಕಾ ಕೇಂದ್ರದ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಮಂಗಳವಾರ ಬೆಳಗ್ಗೆ 7.30ಕ್ಕೆ ಅಭ್ಯರ್ಥಿಗಳ ಹಾಗೂ ಚುನಾವಣಾ ವೀಕ್ಷಕರ ಸಕ್ಷಮದಲ್ಲಿ ಭದ್ರತಾ ಕೊಠಡಿಯನ್ನು ತೆರೆಯಲಾಗುವುದು. ಮತ ಎಣಿಕೆ ಕೊಠಡಿಯಲ್ಲಿ ಒಟ್ಟು ಏಳು ಟೇಬಲ್‌ಗಳನ್ನು ಜೋಡಿಲಾಗಿದ್ದು, ಪ್ರತಿ ಟೇಬಲ್‌ಗೆ ಇಬ್ಬರು ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಭ್ಯರ್ಥಿ ಪರ ಒಬ್ಬ ಏಜೆಂಟ್‌ಗೆ ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಜೆ.ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಮತ ಪೆಟ್ಟಿಗೆಯಿಂದ ಎಲ್ಲಾ ಮತ ಪತ್ರಗಳನ್ನು ಹೊರತೆಗೆದು ವೀಕ್ಷಕರ ಹಾಗೂ ಅಭ್ಯರ್ಥಿಗಳ (Candidates) ಪರ ಏಜೆಂಟ್‌ಗಳ ಮುಂದೆಯೇ 25 ಕಟ್ಟುಗಳಂತೆ ಬಂಡಲ್ ಮಾಡಿ ಇಡಲಾಗುವುದು. ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದ ನಾಲ್ಕು ಅಭ್ಯರ್ಥಿಗಳಿಗೆ ಸೇರಿ ಒಟ್ಟು 2070 ಮತ ಚಲಾವಣೆಯಾಗಿದ್ದು, ಪ್ರತಿ ಟೇಬಲ್‌ಗೆ ತಲಾ 300 ಮತಪತ್ರಗಳನ್ನು ಎಣಿಕೆಗೆ ಹಂಚಿಕೆ ಮಾಡುವುದು. ನಂತರ ಸಿಂಧು ಮತ್ತು ಅಸಿಂಧು ಮತಗಳನ್ನು ಬೇರ್ಪಡಿಸಿ, ಸಿಂಧುವಾದ ಮತಪತ್ರಗಳನ್ನು ಮೊದಲ ಆದ್ಯತೆಗಾಗಿ ಎಣಿಕೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ಸುತ್ತಿನ ನಂತರ ಅತಿ ಹೆಚ್ಚು ಮತಗಳನ್ನು ಪಡೆದಿರುವ ಅಭ್ಯರ್ಥಿಯು ಕನಿಷ್ಠ 1036 ಮತಗಳನ್ನು ಪಡೆಯದೇ ಇದ್ದ ಪಕ್ಷದಲ್ಲಿ ಎರಡನೇ ಸುತ್ತಿನ ಎಣಿಕೆಗೆ ಅತ್ಯಂತ ಕನಿಷ್ಠ ಮತಗಳನ್ನು ಪಡೆದ ಅಭ್ಯರ್ಥಿಯ ಮತಗಳನ್ನು ತೆಗೆದು ಎರಡನೇ ಆದ್ಯತೆಗಾಗಿ ಇತರೆ ಅಭ್ಯರ್ಥಿಗಳ ಟ್ರೇಗೆ ಹಂಚಿಕೆ ಮಾಡಲಾಗುವುದು. ಹೀಗೆ ಗರಿಷ್ಠ ಮತ ಸಂಖ್ಯೆ ಓರ್ವ ಅಭ್ಯರ್ಥಿಗೆ ಎಣಿಕೆಯಾಗುವವರೆಗೂ ಮತ ಎಣಿಕೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದ್ದಾರೆ.
ಬಂದೋಬಸ್ತ್ : ಮತ ಎಣಿಕೆ ಹಿನ್ನೆಲೆಯಲ್ಲಿ ಸರ್ಕಾರಿ ಮಹಾರಾಣಿ ವಿಜ್ಞಾನ ಕಾಲೇಜಿನ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ ಎಣಿಕೆಗೆ ಕೇಂದ್ರದ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.
ತಮ್ಮದೇ ಗೆಲುವಿನ ವಿಶ್ವಾಸ :
ಬೆಂಗಳೂರು ಗ್ರಾಮಾಂತರ (Bengaluru Rural) ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ (MLC Election) ಸಮಬಲದ ಹೋರಾಟ ನೀಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗೆಲುವಿನ ವಿಶ್ವಾಸದಲ್ಲಿದ್ದರೆ, ಬಿಜೆಪಿ ಠೇವಣಿ ನಷ್ಟವಾಗದೆ ಪಕ್ಷದ ಮರ್ಯಾದೆ ಉಳಿದರೆ ಸಾಕು ಎನ್ನುತ್ತಿದೆ. ಜೆಡಿಎಸ್ (JDS) ಮತ್ತು ಕಾಂಗ್ರೆಸ್ (Congress) ಪಕ್ಷಗಳ ಭದ್ರಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಎರಡು ಪಕ್ಷಗಳ ನಡುವಿನ ಕಾಳಗವಾಗಿತ್ತು. ಉಭಯ ಪಕ್ಷಗಳನ್ನು ಮಣಿಸಿ ಬಿಜೆಪಿ ಗೆಲುವು ದಾಖಲಿಸುವುದು ಅಷ್ಟುಸುಲಭವೂ ಅಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಎರಡು ಪಕ್ಷಗಳ ನಡುವಿನ ಹಣಾಹಣಿ ಜಿಲ್ಲೆಯವರೇ ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಸಹ ಪ್ರತಿಷ್ಠೆ ತಂದೊಡ್ಡಿದೆ. ಹೀಗಾಗಿ ವಿಧಾನ ಪರಿಷತ್ ಚುನಾವಣೆ (Election) ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ.
ಸ್ಥಳೀಯ ಸಂಸ್ಥೆಗಳು ಸೇರಿದಂತೆ ಇಲ್ಲಿವರೆಗೆ ನಡೆದಿರುವ ಸಾಲು ಸಾಲು ಚುನಾವಣೆಗಳಲ್ಲಿ ಸೋಲು ಅನುಭವಿಸಿ ಮುಖಭಂಗಕ್ಕೊಳಗಾಗಿರುವ ದಳಪತಿಗಳಿಗೆ , ವಿಧಾನ ಪರಿಷತ್ ಚುನಾವಣೆ ಗೆಲುವಿನೊಂದಿಗೆ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೆಡಿಎಸ್ ನ (JDS) ಭದ್ರಕೋಟೆ ಎನ್ನುವುದನ್ನು ಸಾಬೀತು ಪಡಿಸಬೇಕಿದೆ. ಹೀಗಾಗಿ ಪಕ್ಷದ ಗೆಲುವು ಅತಿ ಅಗತ್ಯ ಮತ್ತು ಅನಿವಾರ್ಯವಾಗಿದೆ.
ಕಾಂಗ್ರೆಸ್ ಪಾಲಿಗೆ ದೊಡ್ಡ ಸವಾಲು:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ತವರು ಜಿಲ್ಲೆ ಜತೆಗೆ ಸೋದರ ಸಂಬಂಧಿ ಎಸ್.ರವಿ ಅಭ್ಯರ್ಥಿಯಾಗಿರುವ ಕಾರಣ ಕಾಂಗ್ರೆಸ್ (Congress) ಪಾಲಿಗೆ ಚುನಾವಣೆ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಚುನಾವಣೆ ಘೋಷಣೆಯಾದ ದಿನದಿಂದಲೂ ವಿರೋಚಿತ ಹೋರಾಟ ನೀಡಿದೆ. 2023ರ ವಿಧಾನಸಭೆ ಚುನಾವಣೆಗೆ ವಿಧಾನ ಪರಿಷತ್ ಚುನಾವಣೆ ದಿಕ್ಸೂಚಿಯಾಗಿ ಜಿಲ್ಲೆಯಲ್ಲಿ ಹೊಸ ರಾಜಕೀಯ ಪರಿವರ್ತನೆ ಸೃಷ್ಟಿಯಾಗಲಿದೆ. ಇದರೊಂದಿಗೆ ಕಾಂಗ್ರೆಸ್‌ನ ವರ್ಚಸ್ಸು ಮತ್ತಷ್ಟುಹೆಚ್ಚಾಗಲಿದೆ. ಜೆಡಿಎಸ್ ಪಕ್ಷವನ್ನು ಮತ್ತಷ್ಟುನೆಲಕಚ್ಚುವಂತೆ ಮಾಡಲು ಇದೊಂದು ಸದಾವಕಾಶ ಎನ್ನುವುದು ಕೈ ಪಾಳಯದ ರಾಜಕೀಯ ಲೆಕ್ಕಾಚಾರ.
