Karnataka MLC Election Congress Ticket Fight: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಇಬ್ಬರೂ ಪ್ರತ್ಯೇಕ ಪಟ್ಟಿ ಹಿಡಿದು ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ. ಇಬ್ಬರಲ್ಲಿ ಯಾರ ಪಟ್ಟಿಗೆ ಹೈಕಮಾಂಡ್‌ ಮುದ್ರೆ ಬೀಳಲಿದೆ ಎಂಬುದನ್ನು ತಿಳಿಯಲು ರಾಜ್ಯ ಕಾಂಗ್ರೆಸ್‌ ಕಾತುರದಿಂದ ಕಾಯುತ್ತಿದೆ. 

ಬೆಂಗಳೂರು, ಮೇ 23: ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಕಳೆದ ಹಲವು ತಿಂಗಳುಗಳಿಂದ ಮುನ್ನೆಲೆಗೆ ಬರುತ್ತಲೇ ಇದೆ. ನಾವೆಲ್ಲರೂ ಒಂದು, ಸಾಮೂಹಿಕ ನಾಯಕತ್ವ ಎಂಬ ಮಾತನ್ನು ಒಂದೇ ಸಭೆಯಲ್ಲಿದ್ದಾಗ ಹೇಳುತ್ತಾರೆ. ಆದರೆ ಡಿಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ನಡುವಿನ ಶೀತಲ ಸಮರ (Cold war between Siddaramaiah and DK Shivakumar) ಎಲ್ಲರಿಗೂ ತಿಳಿದ ವಿಚಾರವೇ. ಇದೀಗ ಎಂಎಲ್‌ಸಿ ಚುನಾವಣೆ ಹತ್ತಿರವಾಗಿದ್ದು, ಎರಡು ಸ್ಥಾನಗಳಿಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಡಿಕೆ ಶಿವಕುಮಾರ್‌ ಒಂದಿಷ್ಟು ಹೆಸರುಗಳನ್ನು ಪಟ್ಟಿ ಮಾಡಿಕೊಂಡು ದೆಹಲಿಗೆ ಹೋಗಿದ್ದರೆ, ಸಿದ್ದರಾಮಯ್ಯ ಕೂಡ ಒಂದು ಪಟ್ಟಿಯನ್ನು ನೀಡಿದ್ದಾರೆ. ಇಬ್ಬರೂ ತಾವು ಹೇಳುವ ಅಭ್ಯರ್ಥಿಗಳಿಗೇ ಟಿಕೆಟ್‌ ನೀಡಬೇಕು ಎಂಬ ಹಠಕ್ಕೆ ಬಿದ್ದಿದ್ಧಾರೆ ಎಂದು ಪಕ್ಷದ ಮೂಲಗಳೇ ತಿಳಿಸಿವೆ. ಮೂಲಗಳ ಪ್ರಕಾರ ಕಾಂಗ್ರೆಸ್‌ನಿಂದ ಒಂದು ಸ್ಥಾನಕ್ಕಾಗಿ ಎಂ ಆರ್‌ ಸೀತಾರಾಮ್‌ (MR Seetharam) ಅವರ ಹೆಸರು ಈಗಾಗಲೇ ಹೈಕಮಾಂಡ್‌ ಒಪ್ಪಿಗೆ ಮಾಡಿದೆ. ಇನ್ನೊಂದು ಸ್ಥಾನಕ್ಕಾಗಿ ಡಿಕೆ - ಸಿದ್ದು ಬಣಗಳ ನಡುವೆ ಪೈಪೋಟಿ ಮುಂದುವರೆದಿದೆ. ಹಾಗಾದರೆ ಸಿದ್ದರಾಮಯ್ಯ ಯಾರ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ ಮತ್ತು ಡಿಕೆ ಶಿವಕುಮಾರ್‌ ಯಾರನ್ನು ಸಮರ್ಥಿಸುತ್ತಿದ್ದಾರೆ? ಅದರ ಮಾಹಿತಿ ಇಲ್ಲಿದೆ. 

ಎರಡು ಸೀಟ್‌, ಎರಡು ಬಣ, ಡಜನ್‌ಗೂ ಮೇಲೆ ಆಕಾಂಕ್ಷಿಗಳು:
ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಲಾಭಿ ಜೋರಾಗಿ ನಡೆಯುತ್ತಿದ್ದು, ಎರಡು ಸ್ಥಾನಗಳಿಗೆ ಹತ್ತಾರು ಆಕಾಂಕ್ಷಿಗಳು ಯತ್ನಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಡಿಕೆಶಿ ಮೇಲೆ ಅಭ್ಯರ್ಥಿಗಳು ಒತ್ತಡ ಹೇರುತ್ತಿದ್ದಾರೆ. ಜಾತಿ, ಪ್ರಾದೇಶಿಕತೆ, ಸಂಘಟನೆ ಆಧಾರದಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 
ಆಕಾಂಕ್ಷಿಗಳು ಇವರೇ:

1 - ಎಂ.ಡಿ.ಲಕ್ಷ್ಮೀನಾರಾಯಣ (ಮಾಜಿ ಶಾಸಕ): ನೇಕಾರ ಸಮುದಾಯದ ಪ್ರಭಾವಿ ಮುಖಂಡರಾಗಿರುವ ಎಂಡಿ ಲಕ್ಷ್ಮೀನಾರಾಯಣ ಕಳೆದ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಬೆಳಗಾವಿ ದಕ್ಷಿಣದಿಂದ ಸ್ಪರ್ಧಿಸಿದ್ದರು. ಪಕ್ಷಕ್ಕಾಗಿ ಕ್ಷೇತ್ರ ತ್ಯಾಗ ಮಾಡಿದ್ದೇನೆ, ಪಕ್ಷದ ಸಂಘಟನೆಯಲ್ಲಿ ನಿರತನಾಗಿದ್ದೇನೆ ಮತ್ತು ನೇಕಾರ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂಬುದು ಇವರ ವಾದ.

2 - ಸಚಿನ ಮಿಗಾ (ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ): ರೈತರ ವಿಚಾರದಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡಿದವರು. ಪ್ರಬಲ ಒಕ್ಕಲಿಗ ಸಮುದಾಯದಲ್ಲಿ ಗುರುತಿಸಿಕೊಂಡವರು. ಜತೆಗೆ ಡಿಕೆ ಶಿವಕುಮಾರ್‌ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. 

3 - ನಿವೇದಿತಾ ಆಳ್ವಾ (ಮಾರ್ಗರೇಟ್ ಆಳ್ವಾ ಪುತ್ರ): ಕ್ರೈಸ್ತ ಸಮುದಾಯದ ಕೋಟಾದಲ್ಲಿ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿರುವ ನಿವೇದಿತ್‌ ಆಳ್ವಾ ಮೇಲೆ ಪಕ್ಷದ ಕನಿಕರವೂ ಇದೆ. ಹಲವು ಬಾರಿ ಕಾಂಗ್ರೆಸ್‌ನಿಂದ ಟಿಕೆಟ್‌ ವಂಚಿತರಾಗಿರುವ ಹಿನ್ನೆಲೆ, ಅವರು ಈ ಬಾರಿಯಾದರೂ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ತಾಯಿ ಮಾರ್ಗರೇಟ್‌ ಆಳ್ವಾ ಸಹ ಹೈಕಮಾಂಡ್‌ ಮಟ್ಟದಲ್ಲಿ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

4 - ಐವನ್ ಡಿಸೋಜಾ (ಮಾಜಿ ವಿಧಾನಪರಿಷತ್ ಸದಸ್ಯ): ಕ್ರೈಸ್ತ ಕೋಟಾದಲ್ಲಿ ಮತ್ತೊಂದು ಬಾರಿ ಅವಕಾಶಕ್ಕೆ ಪ್ರಯತ್ನಿಸುತ್ತಿರುವ ಮಂಗಳೂರಿನ ನಾಯಕ, ಸಿದ್ದರಾಮಯ್ಯ ಅವರ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ. ಕ್ರೈಸ್ತ ಸಮುದಾಯದ ಸಂಘಟನೆಯಲ್ಲಿ ಪ್ರಾಬಲ್ಯ ಹೊಂದಿರುವುದು ಕೂಡ ಲಾಬಿಗೆ ಮುಖ್ಯ ಕಾರಣ.

ಇದನ್ನೂ ಓದಿ: ಕಾಂಗ್ರೆಸ್‌ ಗೆದ್ದರೆ ಮಡಿವಾಳರಿಗೆ ಎಸ್ಸಿ ಮೀಸಲು: ಸಿದ್ದು

5 - ಮನ್ಸೂರ್‌ ಅಲಿ ಖಾನ್‌ (ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ): ಮಾಜಿ ಕೇಂದ್ರ ಸಚಿವ ಕೆ ರಹಮಾನ್‌ ಖಾನ್‌ ಅವರ ಮಗ ಮನ್ಸೂರ್‌ ಅಲಿ ಖಾನ್‌ ಕೂಡ ಎಂಎಲ್‌ಸಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ. ಡಿಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಇಬ್ಬರ ಜತೆಯೂ ಉತ್ತಮ ಒಡನಾಟ ಹೊಂದಿರುವ ಮನ್ಸೂರ್ ಖಾನ್‌ ಪರ ರಹಮಾನ್‌ ಖಾನ್‌ ಕೂಡ ಹೈಕಮಾಂಡ್‌ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. 

6 - ಬಿ.ಎಲ್ ಶಂಕರ್ (ಮಾಜಿ ಸಭಾಪತಿ): ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಅನುಕಂಪದ ಹಿನ್ನೆಲೆ ಪರಿಷತ್‌ಗಾದರೂ ಪರಿಗಣಿಸಿ ಎಂಬ ಬೇಡಿಕೆ ಬಿಎಲ್‌ ಶಂಕರ್‌ ಅವರದ್ದು. ಜತೆಗೆ ಒಕ್ಕಲಿಗ ಸಮುದಾಯದಲ್ಲೂ ಪ್ರಬಲರಾಗಿದ್ದಾರೆ. ಎಸ್‌ಎಂ ಕೃಷ್ಣ ಅವರ ಆಪ್ತರಾಗಿರುವ ಕಾರಣಕ್ಕೆ ಡಿಕೆ ಶಿವಕುಮಾರ್‌ ಅವರೂ ಶಂಕರ್‌ ಪರ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

7 - ನಾರಾಯಣಸ್ವಾಮಿ (ಮಾಜಿ ವಿಧಾನಪರಿಷತ್ ಸದಸ್ಯ): ಸ್ಥಳೀಯ ಸಂಸ್ಥೆಗಳ ಮೂಲಕ ನಡೆದ ಪರಿಷತ್ ಚುನಾವಣೆಯಿಂದ ದೂರ ಉಳಿದ ಕಾರಣದಿಂದ ಈಗ ಪರಿಷತ್‌ ಟಿಕೆಟ್‌ಗಾಗಿ ಲಾಬಿ ಮಾಡುತ್ತಿದ್ದಾರೆ. ಒಕ್ಕಲಿಗ ಕೋಟಾದಿಂದ ಟಿಕೆಟ್‌ ನೀಡುವಂತೆ ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಮತ್ತು ಕೆ.ಆರ್ ಪುರಂ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಅನುಕಂಪವೂ ಇವರ ಮೇಲಿದೆ.

ಇದನ್ನೂ ಓದಿ: ನಾನೇ ಬಿಜೆಪಿ ಅಭ್ಯರ್ಥಿ ಎಂದ ಹೊರಟ್ಟಿ, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಈಶ್ವರಪ್ಪ..!

8 - ಎಸ್ ಆರ್ ಪಾಟೀಲ್ (ಮಾಜಿ ಸಚಿವ): ಲಿಂಗಾಯತ ಕೋಟಾದಿಂದ ಟಿಕೆಟ್‌ ಪಡೆಯಲು ಪ್ರಬಲ ಯತ್ನ ಮಾಡುತ್ತಿರುವ ಎಸ್‌ ಆರ್‌ ಪಾಟೀಲ್‌ಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಜತೆಗೆ ಟಿಕೆಟ್‌ ಕೊಡದಿದ್ದರೆ ಪಕ್ಷದಿಂದ ಹೊರ ನಡೆಯುವ ಬ್ಲಾಕ್‌ಮೇಲ್‌ ಕೂಡ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಾದಾಮಿಯಲ್ಲಿ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲ್ಲಲು ಇವರ ಕೊಡುಗೆ ಹೆಚ್ಚಿದೆ. ಇದೂ ಕೂಡ ಇವರ ರೆಸ್ಯೂಮಿನ ಟ್ರಂಪ್‌ ಕಾರ್ಡ್‌. 

9 - ಅಲ್ಲಂ ವೀರಭದ್ರಪ್ಪ (ನಿವೃತ್ತಿಯಾಗ್ತಿರುವ ವಿಧಾನಪರಿಷತ್ ಸದಸ್ಯ): ಲಿಂಗಾಯತ ಕೋಟಾದಡಿಯಲ್ಲಿ ಮತ್ತೊಂದು ಬಾರಿ ಪರಷತ್‌ ಸದಸ್ಯರಾಗಲು ಅಲ್ಲಂ ವೀರಭದ್ರಪ್ಪ ಯತ್ನಿಸುತ್ತಿದ್ದಾರೆ. ಅವರ ಬಗ್ಗೆ ಹೈಕಮಾಂಡ್‌ ಕೂಡ ಉತ್ತಮ ಅಭಿಪ್ರಾಯ ಹೊಂದಿದೆ ಎನ್ನಲಾಗಿದೆ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಪಕ್ಷದಲ್ಲಿ ಹಿರಿತನದ ಆಧಾರ ಮತ್ತು ಲಿಂಗಾಯತ ಸಮುದಾಯದ ಕಾರ್ಡ್‌ ಪ್ರಯೋಗ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

10 - ಪುಷ್ಪ ಅಮರನಾಥ್ (ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಇಲ್ಲದ ಕಾರಣ, ಮಹಿಳಾ ಕೋಟಾದಿಂದ ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಡೆಯಿಂದ ಒತ್ತಡ ಹಾಕಲು ಯತ್ನಿಸುತ್ತಿದ್ದಾರೆ.

11 - ವಿ.ಎಸ್. ಉಗ್ರಪ್ಪ (ಮಾಜಿ ಸಂಸದ): ದಲಿತ ಕೋಟಾದಲ್ಲಿ ಅವಕಾಶ ನೀಡುವಂತೆ ವರಿಷ್ಠರ ಮೇಲೆ ವಿಎಸ್‌ ಉಗ್ರಪ್ಪ ಒತ್ತಡ ಹೇರುತ್ತಿದ್ದಾರೆ. ಪರಿಷತ್‌ ಸದಸ್ಯರಾಗಿದ್ದಾಗ ಉತ್ತಮ ಕೆಲಸ ಮಾಡಿದ ಅನುಭವವಿದೆ, ಮತ್ತು ಪಕ್ಷನಿಷ್ಠ ಇವೆಲ್ಲವನ್ನೂ ಪರಿಗಣಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪಟ್ಟು, ಹೈಕಮಾಂಡ್‌ಗೆ ಇಕ್ಕಟ್ಟು

ಈ ಎಲ್ಲಾ ಆಕಾಂಕ್ಷಿಗಳೂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅವರ ಮೂಲಕ ಲಾಬಿ ನಡೆಸುತ್ತಿದ್ದಾರಾದರೂ ಎಂ ಆರ್‌ ಸೀತಾರಾಮ್‌ ಅವರ ಹೆಸರು ಮಾತ್ರ ಇದುವರೆಗೂ ಆಯ್ಕೆಯಾಗಿದೆ ಎನ್ನಲಾಗುತ್ತಿದೆ. ಹೈಕಮಾಂಡ್‌ ಕಡೆಯ ಹಂತದಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದರ ಮೇಲೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಇಬ್ಬರಲ್ಲಿ ಹೈಕಮಾಂಡ್‌ ಮಟ್ಟದಲ್ಲಿ ಯಾರ ವರ್ಚಸ್ಸು ಹೆಚ್ಚಿದೆ ಎಂಬುದೂ ತಿಳಿಯಲಿದೆ.