Asianet Suvarna News Asianet Suvarna News

ವಿಧಾನಪರಿಷತ್ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪಟ್ಟು, ಹೈಕಮಾಂಡ್‌ಗೆ ಇಕ್ಕಟ್ಟು

* ಕರ್ನಾಟಕ ವಿಧಾನಪರಿಷತ್ ಚುನಾವಣೆ
* ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪಟ್ಟು
* ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಲೆಕ್ಕಾಚಾರದಲ್ಲಿ ತೊಡಗಿದ ಹೈಕಮಾಂಡ್
 

Karnataka MLC Elections Ticket Fight In BJP And Congress rbj
Author
Bengaluru, First Published May 23, 2022, 1:02 PM IST

ಬೆಂಗಳೂರು, (ಮೇ.23): ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ ಇನ್ನೊಂದು ದಿನ ಬಾಕಿ ಇದೆ. ಆದರೂ ಸಹ ಮೂರು ಪಕ್ಷಗಳು ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಲೆಕ್ಕಾಚಾರದಲ್ಲಿ ತೊಡಗಿವೆ. 

ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ನಾಲ್ಕು , ಕಾಂಗ್ರೆಸ್ ಗೆ ಎರಡು ಹಾಗೂ ಜೆಡಿಎಸ್ ಗೆ ಒಂದು ಸ್ಥಾನ ದೊರೆಯಲಿದೆ. ಮೇ 24 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನಾಳೆ (ಮಂಗಳವಾರ) ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದರೂ ಸಹ ಅಭ್ಯರ್ಥಿಗಳನ್ನ ಘೋಷಣೆ ಮಾಡಿಲ್ಲ.

ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದರಿಂದ ಯಾರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಚಿಂತನೆ ನಡೆಸಿದೆ. ಅದರಲ್ಲೂ ಕಾಂಗ್ರೆಸ್‌ನಲ್ಲಿ ಎರಡು ಸ್ಥಾನ ಹತ್ತಾರು ನಾಯಕರು ಟಿಕೆಟ್‌ಗೆ ಪಟ್ಟು ಹಿಡಿದಿದ್ದರಿಂದ ಹೈಕಮಾಂಡ್‌ ಸಂಕಷ್ಟಕ್ಕೆ ಸಿಲುಕಿದೆ. 

ನಾನೇ ಬಿಜೆಪಿ ಅಭ್ಯರ್ಥಿ ಎಂದ ಹೊರಟ್ಟಿ, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಈಶ್ವರಪ್ಪ..!

ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಮುಸುಕಿನ ಗುದ್ದಾಟ ನಡೆಸಿದ್ದಾರೆ. ಇದರಿಂದ ಹೈಕಮಾಂಡ್ ದೊಡ್ಡತಲೆ ನೋವಾಗಿ ಪರಿಣಮಿಸಿದೆ. ಇದರಿಂದ ಖುದ್ದು ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಚರ್ಚೆ ಮಾಡಿದೆ.

ಸಂಭಾವ್ಯ ಪಟ್ಟಿ ಕಳುಹಿಸಿದ ಬಿಜೆಪಿ
ನಾಲ್ಕು ಸ್ಥಾನಗಳಿಗೆ ರಾಜ್ಯ ಬಿಜೆಪಿ ಹತ್ತಾರು ಸಂಭಾವ್ಯರ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಿಕೊಟ್ಟಿದ್ದು, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಮಹಿಳೆ ಮತ್ತು ಸಾಮಾನ್ಯ ವರ್ಗದವರಿಗೆ ತಲಾ ಒಂದು ಸ್ಥಾನ ಹಂಚಿಕೆ ಮಾಡುವ ಲೆಕ್ಕಾಚಾರದಲ್ಲಿ ಒಂದೊಂದು ವರ್ಗಕ್ಕೆ ಸೇರಿದ ಐವರು ಸಂಭಾವ್ಯರ ಪಟ್ಟಿಯನ್ನು ರಾಜ್ಯ ಕೋರ್ ಕಮಿಟಿ ಹೈಕಮಾಂಡ್ ಗೆ ಕಳುಹಿಸಿ ಕೊಟ್ಟಿದೆ ಎನ್ನಲಾಗಿದ್ದು, ಪ್ರಮುಖವಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಪಕ್ಷದ ಹೈಕಮಾಂಡ್ ಆಯ್ಕೆ ಮಾಡುತ್ತಾರೋ ಇಲ್ಲವೋ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. 

ಉಳಿದಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ನಿರ್ಮಲ ಕುಮಾರ ಸುರಾನಾ, ಗೀತಾ ವಿವೇಕಾನಂದ, ಎಸ್.ಮಂಜುಳಾ, ಛಲವಾದಿ ನಾರಾಯಣಸ್ವಾಮಿ, ಸಿದ್ದರಾಜು, ತೇಜಸ್ವಿನಿ ಅನಂತ ಕುಮಾರ್, ಲಿಂಗರಾಜ ಪಾಟೀಲ್, ಮಹೇಶ್ ಟೆಂಗಿನಕಾಯಿ, ಜಗದೀಶ್ ಹಿರೇಮನಿ ಹೆಸರುಗಳು ಸಂಭಾವ್ಯವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕೇಳಿಬರುತ್ತಿವೆ.

MLC Election: ವಿಜಯೇಂದ್ರಗೆ ಪರಿಷತ್‌ ಟಿಕೆಟ್‌: ಸಿಎಂ ಶಿಫಾರಸು

8 ಹೆಸರುಗಳು ಅಂತಿಮ
ಕರ್ನಾಟಕ ಬಿಜೆಪಿ ಕಳುಹಿಸಿರುವ ಹತ್ತಾರು ಸಂಭಾವ್ಯ ಹೆಸರುಗಳ ಪೈಕಿ ಇದೀಗ 8 ಹೆಸರುಗಳು ಅಂತಿಮಗೊಂಡಿದ್ದು, ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡಿರುವ ವರಿಷ್ಠರು ಜಾತಿ, ವರ್ಚಸ್ಸು, ಪ್ರದೇಶವಾರು, ಪಕ್ಷಕ್ಕೆ ಸಲ್ಲಿಸಿರುವ ಸೇವೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಮೇಲೆ ಟಿಕೆಟ್ ಘೋಷಣೆ ಮಾಡಲಿದ್ದಾರೆ. ದಾವೋಸ್‍ಗೆ ತೆರಳುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ದೆಹಲಿಗೆ ತೆರಳಿದ್ದರು.

ಕೊನೆ ಕ್ಷಣದಲ್ಲಿ ಅಮಿತ್ ಶಾ ಭೇಟಿ ಸಾಧ್ಯವಾಗದಿದ್ದರೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಔಪಚಾರಿಕವಾಗಿ ಮಾತುಕತೆ ನಡೆಸಿದ್ದರು. ನಾಮಪತ್ರ ಸಲ್ಲಿಸಲು ನಾಳೆ ಕಡೆಯ ದಿನವಾಗಿದ್ದು, ಬಹುತೇಕ ಸಂಜೆಯೊಳಗೆ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಲ್ಲಿ ಡಿಕೆಶಿ-ಸಿದ್ದು ಫೈಟ್
ಹೌದು...ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಸಂಬಂಧ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಖುದ್ದು ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನ ದೆಹಲಿಗೆ ಕರೆಯಿಸಿಕೊಂಡು ಈ ಬಗ್ಗೆ ಚರ್ಚೆ ನಡೆಸಿತ್ತು. ಇದೀಗ ದಿಢೀರ್ ಅಂತ ಭಾನುವಾರ ತಡರಾತ್ರಿ ಡಿಕೆ ಶಿವಕುಮಾರ್ ದಿಲ್ಲಿಗೆ ಹೋಗಿರುವುದು ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ.

ಎಸ್‌ಆರ್ ಪಾಟೀಲ್‌ ಪರ ಡಿಕೆಶಿ ಬ್ಯಾಟಿಂಗ್ ಮಾಡುತ್ತಿದ್ರೆ, ಆರ್.ಬಿ ತಿಮ್ಮಾಪುರ ಪರ ಸಿದ್ದರಾಮಯ್ಯ ಲಾಬಿ ನಡೆಸಿದ್ದಾರೆ. ಇನ್ನೊಂದು ಸ್ಥಾನಕ್ಕೆ ಮಹಿಳೆಯರಿಗೆ ಆದ್ಯತೆ ನೀಡಬೇಕೆಂದು ಸಿದ್ದರಾಮಯ್ಯ ಅವರು ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಇಲ್ಲವಾದಲ್ಲಿ ಕ್ರಿಶ್ಚಿಯನ್‌ ಸಮುದಾಯಕ್ಕೆ ಕೊಡುವುದಾದರೆ ಐವಾನ್ ಡಿಸೋಜಾ ಅವರಿಗೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಹಾಕುತ್ತಿದೆ.

ಸಂಜೆಯೊಳಗೆ ಪಟ್ಟಿ ಪ್ರಕಟ
ಯೆಸ್...ಮೇ.24 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುವುದರಿಂದ ಇಂದು(ಸೋಮವಾರ) ಸಂಜೆಯೊಳಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿ ಘೋಷಣೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದ ಯಾರಿಗೆಲ್ಲಾ ಟಿಕೆಟ್ ಸಿಗಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. 

Follow Us:
Download App:
  • android
  • ios