ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ RSS ವಿರುದ್ಧ ಗುಡುಗಿದ್ದಾರೆ. ನಾನು ಸಚಿವನಾಗಿ ಇರುವ ತನಕ ರಾಜ್ಯದಲ್ಲಿ RSS ಪಥಸಂಚಲನಕ್ಕೆ ನನ್ನ ಅನುಮತಿ ಕಡ್ಡಾಯ ಎಂದು ಕಿಡಿಕಾರಿದ್ದಾರೆ. ಖರ್ಗೆ ಹೇಳಿದ್ದೇನು ಅನ್ನೋ ವಿವರ ಇಲ್ಲಿದೆ.   

ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ನಡುವಿನ ಸಂಘರ್ಷ ಹೊಸ ತಿರುವು ಪಡೆದುಕೊಂಡಿದೆ. ಅವಕಾಶ ಸಿಕ್ಕಾಗಲೆಲ್ಲಾ ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ ನಡೆಸುವ ಸಚಿವ ಪ್ರಿಯಾಂಕ್ ಖರ್ಗೆ ಇದೀಗ ಸಂಘಕ್ಕೆ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ. ನಾನು ಸಚಿವನಾಗಿ ಇರುವವರೆಗೂ ರಾಜ್ಯದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಅನುಮತಿ ಪಡೆಯುವುದು ಕಡ್ಡಾಯ ಎಂದು ಎಚ್ಚರಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮ್ಮನೆ ಬಿಡಲ್ಲ ಎಂದು ಲೇವಡಿ

ಕಲಬುರಗಿಯ ಐವಾನ್ ಎ ಶಾಹಿ ಪ್ರದೇಶದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ನಾನು ಈಗಾಗಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದೇನೆ. 100 ವರ್ಷದ ಹಳೆಯ ಸಂಘಟನೆ ಅಂತಾರಲ್ಲ, ನಿಮ್ಮ ಸಂಘಟನೆಯ ದಾಖಲೆಗಳು ಎಲ್ಲಿವೆ? ಪಥಸಂಚಲನ ನಡೆಸಲು ನೀವು ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ದಾಖಲೆಗಳು ಎಲ್ಲೋ ಇರಬಹುದು, ಹುಡುಕಿಕೊಂಡು ಬರಲಿ. ಅಲ್ಲಿಯವರೆಗೆ ಸುಮ್ಮನೆ ಬಿಡಲ್ಲ ಎಂದು ಲೇವಡಿ ಮಾಡಿದ್ದಾರೆ.

ಘಟನೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರು ನನ್ನ ವೈಯಕ್ತಿಕ ವಿಚಾರಗಳನ್ನು ಕೆದಕುತ್ತಿದ್ದಾರೆ ಎಂದು ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕ್ ಯಾರನ್ನ ಮದುವೆಯಾಗಿದ್ದಾನೆ? ಆತನ ಮಕ್ಕಳು ಯಾರು? ಪ್ರಿಯಾಂಕ್ ಕಪ್ಪಗಿದ್ದಾನಾ ಅಥವಾ ಬೆಳ್ಳಗಿದ್ದಾನಾ? ಎಂದು ಕೆದಕುತ್ತಿದ್ದಾರೆ. ಅವರು ಎಷ್ಟೇ ಕೆದಕಿದರೂ ನಾನು ಹೆದರುವ ವ್ಯಕ್ತಿಯಲ್ಲ. ನನ್ನ ಬಣ್ಣದ ಬಗ್ಗೆ ಮಾತನಾಡುವವರಿಗೆ ನನ್ನ ಕೆಲಸಗಳೇ ಉತ್ತರ ನೀಡುತ್ತವೆ ಎಂದು ಸವಾಲು ಹಾಕಿದ್ದಾರೆ. ಒಟ್ಟಿನಲ್ಲಿ ಪಥಸಂಚಲನದ ವಿಚಾರವಾಗಿ ಪ್ರಿಯಾಂಕ್ ಖರ್ಗೆ ತೆಗೆದುಕೊಂಡಿರುವ ಈ ಕಠಿಣ ನಿಲುವು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಹಾಗೂ ಪ್ರತಿಭಟನೆಗೆ ಕಾರಣವಾಗುವ ಸಾಧ್ಯತೆಯಿದೆ.

ಇದೇ ವೇಳೆ ಅಯೋಧ್ಯೆಯ ರಾಮಮಂದಿರದ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ ಸಚಿವರು, ರಾಮಮಂದಿರದ ಕಟ್ಟಡದ ಉಸ್ತುವಾರಿ ಹೊತ್ತಿದ್ದ ಗೋಪಾಲ್ ಜೀ ಅವರು 40 ಪರ್ಸೆಂಟ್ ಕಮಿಷನ್ ಪಡೆದು ತಮ್ಮ ಅಳಿಯನಿಗೆ ಕಾಂಟ್ರಾಕ್ಟ್ ನೀಡಿದ್ದಾರೆ. ಅಯೋಧ್ಯೆಯಲ್ಲೂ ಬಿಜೆಪಿ ಬಿಟ್ಟಿಲ್ಲ ಅಲ್ಲೂ ಕಮಿಷನ್ ದಂಧೆ ನಡೆದಿದೆ. ಇದೆಲ್ಲವೂ ದೊಡ್ಡ ಗೇಮ್ ಪ್ಲಾನ್ ಎಂದು ಕಿಡಿಕಾರಿದರು.