ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಮಂಗಳವಾರದಂದೇ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ.
ಬೆಂಗಳೂರು (ಮೇ.24): ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಮಂಗಳವಾರದಂದೇ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ. ಚಿತ್ರನಟ ದೊಡ್ಡಣ್ಣ ಅವರ ಅಳಿಯ ಕೂಡ ಆಗಿರುವ ಪಕ್ಷದ ಮುಖಂಡ ಕೆ.ಸಿ.ವೀರೇಂದ್ರ (ಪಪ್ಪಿ) ಮತ್ತು ಪಕ್ಷದ ವಕ್ತಾರ ಟಿ.ಎ.ಶರವಣ ಅವರಿಬ್ಬರ ನಡುವೆ ಪೈಪೋಟಿ ಏರ್ಪಟ್ಟಿದ್ದು, ವೀರೇಂದ್ರ ಹೆಸರು ಅಂತಿಮಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಪದ್ಮನಾಭನಗರದ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ದೇವೇಗೌಡ ಸೇರಿದಂತೆ ಕೆಲವು ಮುಖಂಡರು ತುರ್ತು ಸಭೆ ನಡೆಸಿ ಮಾತುಕತೆ ನಡೆಸಿದರು. ಈ ವೇಳೆ ವೀರೇಂದ್ರ ಹಾಗೂ ಶರವಣ ಅವರ ಹೆಸರು ಪ್ರಸ್ತಾಪವಾಗಿವೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದೆ. ಪಕ್ಷದಲ್ಲಿ 2-3 ಅಭ್ಯರ್ಥಿಗಳು ಇದ್ದು, ಮಂಗಳವಾರ ಪಕ್ಷದ ವರಿಷ್ಠ ದೇವೇಗೌಡರ ಸಮ್ಮುಖದಲ್ಲಿ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಸಂಘಟನೆಗಾಗಿ ಪಕ್ಷದ ತೀರ್ಮಾನಕ್ಕೆ ಎಲ್ಲಾ ರೀತಿಯ ಸಹಮತ ಇರುತ್ತದೆ ಎಂದು ತಿಳಿಸಿದ್ದರು ಎಂದರು.
ಡಿಕೆಶಿ vs ಸಿದ್ದರಾಮಯ್ಯ: ಎಂಎಲ್‌ಸಿ ಟಿಕೆಟ್ ಬಡಿದಾಟದಲ್ಲಿ ಗೆಲುವು ಯಾರಿಗೆ?
ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ. ರಾಜ್ಯಸಭೆ ಚುನಾವಣೆಗೆ ಇನ್ನೂ ಸಮಯ ಇದೆ. ಅಲ್ಲಿಯೂ 3-4 ಮಂದಿ ಆಕಾಂಕ್ಷಿಗಳಿದ್ದಾರೆ. ಯಾರಲ್ಲೂ ಅಸಮಾಧಾನ ಇಲ್ಲ. ಎಲ್ಲರ ಸಹಮತದೊಂದಿಗೆ ನಾನು, ಇಬ್ರಾಹಿಂ ಮತ್ತು ದೇವೇಗೌಡ ಅವರು ಚರ್ಚೆ ಮಾಡುತ್ತೇವೆ. ದೇವೇಗೌಡ ಅವರ ತೀರ್ಮಾನವೇ ಅಂತಿಮ. ವಿಧಾನಪರಿಷತ್‌ಗೆ 8-10 ಜನರ ಒತ್ತಡ ಇತ್ತು. ದಾಸರಹಳ್ಳಿ ಕ್ಷೇತ್ರದ ಅಂದಾನಪ್ಪ ಹಿರಿಯ ನಾಯಕರು. ಕೋಲಾರದಲ್ಲಿ ರಾಜೇಶ್ವರಿ ಅವರು ಆಕಾಂಕ್ಷಿಯಾಗಿದ್ದಾರೆ. ನಾರಾಯಣಸ್ವಾಮಿ ಸಹ ಹಳೆಯವರು. ಆದರೆ, ಅಂತಿಮವಾಗಿ ಯಾರು ಎಂಬುದು ಸೋಮವಾರ ತಡರಾತ್ರಿ ತೀರ್ಮಾನವಾಗಲಿದೆ ಎಂದು ಹೇಳಿದರು.
ದೊಡ್ಡಣ್ಣ ಅಳಿಯ ವೀರೇಂದ್ರಗೆ ಜೆಡಿಎಸ್ ವಿಧಾನಪರಿಷತ್ ಟಿಕೆಟ್?: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ತನಗೆ ಲಭಿಸುವ ಒಂದು ಸ್ಥಾನಕ್ಕೆ ಚಿತ್ರನಟ ದೊಡ್ಡಣ್ಣ ಅವರ ಅಳಿಯ ಹಾಗೂ ಪಕ್ಷದ ಮುಖಂಡ ಕೆ.ಸಿ.ವೀರೇಂದ್ರ (ಪಪ್ಪಿ) ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಪಕ್ಷದ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದು, ಸೋಮವಾರ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. ವೀರೇಂದ್ರ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಉದ್ಯಮಿಯಾಗಿರುವ ವೀರೇಂದ್ರ ಅವರು ಗೋವಾದಲ್ಲಿನ ಕ್ಯಾಸಿನೋ ಮಾಲೀಕರಾಗಿದ್ದಾರೆ. ಹಲವು ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅವರ ನಿವಾಸದ ಮೇಲೆ ದಾಳಿ ನಡೆಸಿ ಬಚ್ಚಲುಮನೆಯಲ್ಲಿ ಕೋಟ್ಯಂತರ ರುಪಾಯಿ ನಗದು ವಶಪಡಿಸಿಕೊಂಡಿತ್ತು.
ಕಾಂಗ್ರೆಸ್ ಗೆದ್ದರೆ ಮಡಿವಾಳರಿಗೆ ಎಸ್ಸಿ ಮೀಸಲು: ಸಿದ್ದು
ಬಳಿಕ ಸಿಬಿಐ ಹವಾಲಾ ವಹಿವಾಟು ಆರೋಪದ ಮೇರೆಗೆ ವೀರೇಂದ್ರ ಅವರನ್ನು ವಶಕ್ಕೆ ಪಡೆದಿತ್ತು. ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದರೂ ಸಂಖ್ಯಾಬಲದ ಆಧಾರದ ಮೇಲೆ ಜೆಡಿಎಸ್‌ಗೆ ಒಂದು ಸ್ಥಾನ ಮಾತ್ರ ಲಭ್ಯವಾಗಲಿದೆ. ಹಾಲಿ ಸದಸ್ಯ ರಮೇಶ್‌ಗೌಡ ಅವರ ಅವಧಿ ಮುಂದಿನ ತಿಂಗಳು ಅಂತ್ಯವಾಗಲಿದೆ. ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಲ್ಲದೆ, ಪಕ್ಷದ ವಕ್ತಾರ ಟಿ.ಎ.ಶರವಣ, ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಪ್ರಕಾಶ್ ಮತ್ತಿತರರು ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಜೆಡಿಎಸ್ ವರಿಷ್ಠರು ವೀರೇಂದ್ರ ಅವರನ್ನು ಕಣಕ್ಕಿಳಿಸುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.
