ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಆರ್‌ಎಸ್‌ಎಸ್‌ ಆದಾಯದ ಬಗ್ಗೆ ಪ್ರಶ್ನಿಸಿದ್ದಕ್ಕೆ ಬಿಜೆಪಿ ನಾಯಕರು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನನ್ನು 'ಬಲಿತ ದಲಿತ' ಎಂದು ಕರೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸವಾಲು ಹಾಕಿದರು.

ಬೆಂಗಳೂರು (ಜೂ.25); ‘ಆರ್‌ಎಸ್‌ಎಸ್(RSS) ಆದಾಯ ಕೇಳಿದರೆ ಇವರಿಗೇಕೆ ಉರಿ? ನನ್ನನ್ನು ಬಲಿತ ದಲಿತ ಎನ್ನುತ್ತಿರುವ ಕೇಂದ್ರ ಸಚಿವರು ಬಲಿತ ದಲಿತರು ಎಷ್ಟು ಜನ ಇದ್ದಾರೆ ಎಂಬುದನ್ನು ತೋರಿಸಲಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank kharge) ಸವಾಲು ಹಾಕಿದ್ದಾರೆ.

ಆರ್‌ಎಸ್‌ಎಸ್‌ ನೋಂದಣಿ ಬಗ್ಗೆ ಪ್ರಶ್ನಿಸಿರುವ ತಮ್ಮ ವಿರುದ್ಧ ಶೋಭಾ ಕರಂದ್ಲಾಜೆ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಲಿತ ದಲಿತರು ಎಷ್ಟು ಜನರಿದ್ದಾರೆ?

ಬಲಿತ ದಲಿತರು ಎಷ್ಟು ಜನ ಇದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೋರಿಸಲಿ. ಇವರ ಮನಸ್ಥಿತಿ ಮುಂಚೆಯಿಂದಲೂ ಹೀಗೆಯೇ ಇದೆ. ಆರ್‌ಎಸ್‌ಎಸ್‌ ಬಗ್ಗೆ ಕೇಳಿದರೆ ಇವರಿಗೆ ಏಕೆ ಉರಿ? ದಲಿತನೊಬ್ಬ ಪ್ರಶ್ನೆ ಮಾಡುತ್ತಿದ್ದಾನೆ ಎಂಬುದು ಇವರ ಸಮಸ್ಯೆಯೇ ಎಂದು ಪ್ರಶ್ನಿಸಿದರು.

ಯಾಕೆ ನಾನು ಸೂಟು ಹಾಕಬಾರದೇ?

ನನ್ನ ಎರಡನೇ ಚುನಾವಣೆಯಲ್ಲಿ ಚಿತ್ತಾಪುರದಲ್ಲಿ ಪ್ರಚಾರ ಮಾಡುವಾಗ ಪ್ರಿಯಾಂಕ್‌ ಖರ್ಗೆ ಸೂಟು ಹಾಕಿಕೊಂಡು ವಿಧಾನಸೌಧದಲ್ಲಿ ಕೂರುತ್ತಾನೆ ಎಂದು ಬಿಜೆಪಿಯವರು ಪ್ರಚಾರ ಮಾಡಿದರು. ಯಾಕೆ ನಾನು ಸೂಟು ಹಾಕಬಾರದೇ? ನಾನು ಗಾಡಿಯಲ್ಲಿ ಓಡಾಡಬಾರದೇ? ನನ್ನ ಆದಾಯ ಎಷ್ಟಿದೆ ಅಷ್ಟೇ ಮಾಡುತ್ತಿದ್ದೇನೆ. ಇವರಿಗೇನು ಸಮಸ್ಯೆ ಎಂದು ಪ್ರಶ್ನೆ ಮಾಡಿದರು.

ನನ್ನ ಪ್ರಶ್ನೆಗಳಿಗೆ ಇವರ ಬಳಿ ಉತ್ತರವಿಲ್ಲ:

ನನ್ನ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿಲ್ಲ. ಹೀಗಾಗಿ ಹೀಗಾಗಿ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ವೈಯಕ್ತಿಕವಾಗಿ ಮಾತನಾಡುತ್ತಾರೆ. ಬಿಜೆಪಿಯ ಸುನಿಲ್‌ಕುಮಾರ್ ನನ್ನನ್ನು ಕಾನ್ವೆಂಟ್‌ ದಲಿತ ಎಂದಿದ್ದರು.

ಪ್ರಿಯಾಂಕ್ ಖರ್ಗೆ ಅವರು ಒಂದು ಲೋಟ ಹೆಚ್ಚು ಹಾಲು ಕುಡಿದಿರಬೇಕು, ಅವರಿಗೆ ಪೈಲ್ಸ್ ಬಂದಿರಬೇಕು ಎಂದೆಲ್ಲಾ ವಿಧಾನಸಭೆಯಲ್ಲೆ ಮಾತನಾಡಿದ್ದರು. ಇವರಿಗೆ ಇಷ್ಟು ಹೊಟ್ಟೆ ಉರಿ ಯಾಕೆ ಎಂದು ಪ್ರಶ್ನಿಸಿದರು.