Doddaballapur: ಬಿಜೆಪಿ ಜನಸ್ಪಂದನ ಸಮಾವೇಶದ ವೇಳೆ ‘ಬಾನಿಗೊಂದು ಎಲ್ಲೆ ಎಲ್ಲಿದೆ’ ಹಾಡು ಹಾಡಿದ ಸಚಿವ ಸುಧಾಕರ್
ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ ಜನ ಸ್ಪಂದನ ಸಮಾವೇಶ ನಡೆಯುತ್ತಿದ್ದು, ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಡಾ. ರಾಜ್‌ಕುಮಾರ್ ಅವರ 'ಬಾನಿಗೊಂಡು ಎಲ್ಲೆ ಎಲ್ಲಿದೆ' ಹಾಡನ್ನು ಹಾಡಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಇಂದು ದೊಡ್ಡಬಳ್ಳಾಪುರದಲ್ಲಿ ಜನ ಸ್ಪಂದನ ಸಮಾವೇಶವನ್ನು ಆಯೋಜಿಸಿದೆ. ಶನಿವಾರ, ಸೆಪ್ಟೆಂಬರ್ 10, 2022 ರಂದು ಆಯೋಜನೆಯಾಗಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಅಭಿಮಾನಿಗಳ ದೇವರು, ಅಣ್ಣಾವ್ರು ಡಾ. ರಾಜ್‌ಕುಮಾರ್ ಬಗ್ಗೆ ಹಾಡನ್ನು ಹೇಳಿದ್ದಾರೆ. ಕಾಂಗ್ರೆಸ್ ಕಚ್ಚಾಟವನ್ನು ನೋಡಿ ನನಗೆ ‘’ಬಾನಿಗೊಂದು ಎಲ್ಲೆ ಎಲ್ಲಿದೆ’ ಎಂಬ ಹಾಡು ನನಗೆ ನೆನಪಾಗುತ್ತದೆ ಎಂದು ಹೇಳಿದ ಡಾ. ಸುಧಾಕರ್, ಈ ವೇಳೆ ಹಾಡನ್ನು ಹಾಡುವ ಮೂಲಕ ಗಮನ ಸೆಳೆದರು. ಈ ಮಧ್ಯೆ, ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ ಜನಸ್ಪಂದನ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಸಚಿವ ಡಾ. ಸುಧಾಕರ್ ಅವರನ್ನು ಹೊಗಳಿದರು.
ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ 1 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸೆಪ್ಟೆಂಬರ್ 10 ರಂದು ಜನಸ್ಪಂದನ ಸಮಾವೇಶವನ್ನು ಆಯೋಜಿಸಿದೆ. ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಅಣ್ಣಾವ್ರ ಹಾಡನ್ನು ಹಾಡಿದ್ದು ವಿಶೇಷ.
ಇಂದು ಬಿಜೆಪಿ ಜನಸ್ಪಂದನ ಭರ್ಜರಿ ಶಕ್ತಿ ಪ್ರದರ್ಶನ: 3 ಲಕ್ಷ ಜನ ಭಾಗಿ ನಿರೀಕ್ಷೆ
ಹೌದು, ಸಮಾವೇಶದಲ್ಲಿ ಮಾತನಾಡಿದ ಡಾ. ಸುಧಾಕರ್, ‘’ಕಾಂಗ್ರೆಸ್ ಕಚ್ಚಾಟವನ್ನು ನೋಡಿದ್ರೆ ನನಗೆ ಡಾ. ರಾಜ್‌ಕುಮಾರ್ ಅವರ ಪ್ರೇಮದ ಕಾಣಿಕೆ ಚಿತ್ರದ ಹಾಡು ನೆನಪಿಗೆ ಬಂತು. ಅದರಲ್ಲಿ ಅವರು ಹೇಳ್ತಾರೆ ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ. ಏಕೆ ಕನಸು ಕಾಣುವೆ, ನಿಧಾನಿಸು ನಿಧಾನಿಸು. ಆಸೆ ಎಂಬ ಬಿಸಿಲ ಕುದುರೆ ಏಕೆ ಏರುವೆ..? ಮರಳು ಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ.. ಜನರ ನಿಯಮ ಮೀರಿ ಇಲ್ಲಿ ಏನೂ ನಡೆಯದು’’ ಎಂದು ಡಾ. ರಾಜ್‌ಕುಮಾರ್ ಅವರ ಹಾಡನ್ನು ಆರೋಗ್ಯ ಸಚಿವ ಡಾ. ಸುಧಾಕರ್ ಹಾಡಿದರು. ನಂತರ,’’ ಮಾನ್ಯ ಸಿದ್ದರಾಮಣ್ಣ, ಮಾನ್ಯ ಡಿಕೆಶಿಯವರೇ, ನೀವು ನೆನೆಸಿದಂತೆ ಕರ್ನಾಟದಲ್ಲಿ ಏನೂ ಆಗದು’’ ಎಂದೂ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಈ ಮೂಲಕ ಬಿಜೆಪಿಯ ಜನ ಸ್ಪಂದನ ಸಮಾವೇಶದಲ್ಲಿ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನಡುವಿನ ಆಂತರಿಕ ಕಚ್ಚಾಟದ ಬಗ್ಗೆ ಸಚಿವ ಸುಧಾಕರ್ ಮಾತನಾಡಿದ್ದು, ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ.
ಬಿಜೆಪಿಯ ಜನಸ್ಪಂದನ ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದು, ಈ ಹಿನ್ನೆಲೆ ಸಮಾವೇಶವನ್ನು ಆಯೋಜಿಸಿರುವ ಡಾ. ಸುಧಾಕರ್ ಅವರನ್ನು ಮಾಜಿ ಸಿಎಂ ಯಡಿಯೂರಪ್ಪ ಶ್ಲಾಘಿಸಿದರು. ಹಾಗೆ, ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ನಾಯಕ ಸಿ.ಟಿ. ರವಿ, ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಸುಧಾಕರ್, ಎಂಟಿಬಿ ನಾಗರಾಜ್, ಮುನಿರತ್ನ ಹಾಗೂ ಕೆಲ ಜಿಲ್ಲೆಗಳ ಕಾರ್ಯಕರ್ತರನ್ನು ಅಭಿನಂದಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಸಹ ಇವರನ್ನು ಹೊಗಳಿದರು. ಈ ಸಮಾವೇಶದಲ್ಲಿ ಕಾಂಗ್ರೆಸ್‌ನಲ್ಲಿದ್ದ ಎಂ. ಡಿ. ಲಕ್ಷ್ಮೀನಾರಾಯಣ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.
BJP Janaspandana ಶಕ್ತಿ ಪ್ರದರ್ಶನಕ್ಕೆ ಕ್ಷಣಗಣನೆ
ಕಳೆದ ಹಲವು ದಿನಗಳಿಂದ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್‌ನ ನಾಯಕರಿಗೆ ತಿರುಗೇಟು ನೀಡಲು ಈ ಜನಸ್ಪಂದನ ಕಾರ್ಯಕ್ರಮ ಪ್ರಮುಖ ವೇದಿಕೆಯಾಗುವುದು ನಿಶ್ಚಿತವಾಗಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಬದಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಗಿಯಾಗಿದ್ದಾರೆ ಹಾಗೂ ಸಮಾವೇಶದ ಕೇಂದ್ರಬಿಂದುವಾಗಿದ್ದಾರೆ.