ಬಿಜೆಪಿ ವಿರುದ್ಧ ಮತ್ತೊಂದು ತನಿಖಾಸ್ತ್ರ: ಕೋವಿಡ್ ಅಕ್ರಮ ತನಿಖೆಗೆ ಆಯೋಗ ರಚಿಸಿ ಸರ್ಕಾರ ಆದೇಶ
ಕಳೆದ ಸರ್ಕಾರದ ಅವಧಿಯಲ್ಲಿ ಕೊರೋನಾ ಸೋಂಕು ಅಬ್ಬರದ ವೇಳೆ ಔಷಧ ಮತ್ತು ಉಪಕರಣಗಳ ಖರೀದಿಯಲ್ಲಿನ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಿ ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ತನಿಖಾ ಆಯೋಗ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು (ಆ.27): ಕಳೆದ ಸರ್ಕಾರದ ಅವಧಿಯಲ್ಲಿ ಕೊರೋನಾ ಸೋಂಕು ಅಬ್ಬರದ ವೇಳೆ ಔಷಧ ಮತ್ತು ಉಪಕರಣಗಳ ಖರೀದಿಯಲ್ಲಿನ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಿ ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ತನಿಖಾ ಆಯೋಗ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೊರೋನಾ ಔಷಧ, ಉಪಕರಣ ಖರೀದಿಗೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈ ಹಿಂದೆ ನೀಡಿದ್ದ ವರದಿಯಲ್ಲಿನ ಗಂಭೀರವಾದ ಆರೋಪಗಳನ್ನು ಆಧಾರವಾಗಿಟ್ಟುಕೊಂಡು ತನಿಖೆಗೆ ಆದೇಶಿಸಲಾಗಿದೆ. ಆಯೋಗವು 3 ತಿಂಗಳೊಳಗಾಗಿ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ 40 ಪರ್ಸೆಂಟ್ ಆರೋಪದ ತನಿಖೆ ನಡೆಸಲು ತನಿಖಾ ಆಯೋಗ ರಚನೆಯಾದ ಬೆನ್ನಲ್ಲೇ ಇದೀಗ, 2021ರಲ್ಲಿ ಕೊರೋನಾ ಸೋಂಕು ನಿವಾರಣೆ ಮತ್ತು ತಡೆಗಟ್ಟಲು ಔಷಧ ಹಾಗೂ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ತನಿಖಾ ಆಯೋಗ ರಚಿಸಲಾಗಿದೆ. ಆಯೋಗದ ಅಧ್ಯಕ್ಷರಾಗಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರು ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದವರು.
ಇಸ್ರೋ ಆಧ್ಯಕ್ಷ ಸೋಮನಾಥ್ ಬೆನ್ನುತಟ್ಟಿ ಶ್ಲಾಘಿಸಿದ ಪ್ರಧಾನಿ ಮೋದಿ
ಏನೇನು ತನಿಖೆ?: ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸೇರಿದಂತೆ ಇತರ ಇಲಾಖೆಗಳಿಂದ ಕೊರೋನಾ ಅವಧಿಯಲ್ಲಿ ಔಷಧ, ಉಪಕರಣಗಳು ಹಾಗೂ ಇನ್ನಿತರ ಸಾಮಗ್ರಿಗಳ ಖರೀದಿ, ಕೊರೋನಾ ರೋಗಿಗಳಿಗೆ ಹಾಸಿಗೆ ಹಂಚಿಕೆಯಲ್ಲಿನ ಅಕ್ರಮ, ಆಮ್ಲಜನಕ ನಿರ್ವಹಣೆ, ಚಾಮರಾಜನಗರ ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಆಮ್ಲಜನಕ ಕೊರತೆಯಿಂದ ಉಂಟಾಗಿರುವ ಸಾವುಗಳು ಹಾಗೂ ಇನ್ನಿತರ ವಿಚಾರಗಳ ಕುರಿತು ತನಿಖೆ ನಡೆಸಲು ನ್ಯಾ. ಜಾನ್ ಮೈಕಲ್ ಕುನ್ಹಾ ನೇತೃತ್ವದ ತನಿಖಾ ಆಯೋಗಕ್ಕೆ ರಾಜ್ಯ ಸರ್ಕಾರ ಸೂಚಿಸಿದೆ.
ನನಗೆ ಅಮಿತ್ ಶಾ ಅಥವಾ ಯಾರೂ ಕರೆ ಮಾಡಿಲ್ಲ: ಜಗದೀಶ್ ಶೆಟ್ಟರ್
ಸಂಬಂಧಪಟ್ಟಇಲಾಖೆಯ ಅಧಿಕಾರಿಗಳು ಆಯೋಗವು ತನಿಖೆಗಾಗಿ ಸೂಚಿಸುವ ಕಡತಗಳು, ದಾಖಲೆಗಳನ್ನು ಒದಗಿಸಬೇಕು. ಜತೆಗೆ ಸ್ಥಳ ತನಿಖೆ ವೇಳೆ ಅಧಿಕಾರಿಗಳು ಆಯೋಗದ ಸದಸ್ಯರೊಂದಿಗೆ ಸ್ಥಳದಲ್ಲಿ ಹಾಜರಿರಬೇಕು. ಅಗತ್ಯವಿದ್ದರೆ ಆಯೋಗದ ಅಧ್ಯಕ್ಷರು ವಸ್ತು ಅಥವಾ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ನೋಂದಾಯಿತ ಮೂರನೇ ಸ್ವತಂತ್ರ ಸಂಸ್ಥೆಯ ನೆರವು ಪಡೆಯಬಹುದಾಗಿದೆ ಎಂದು ಹೇಳಿದೆ.