ಸೂರ್ಯೋದಕ್ಕೂ ಮುನ್ನವೇ ಆಗಮಿಸಿದ್ದ ಜನ, ಕೈಯಲ್ಲಿ ರಾಷ್ಟ್ರಧ್ವಜ, ಇಸ್ರೋ ವಿಜ್ಞಾನಿಗಳ ಪರ ಜೈಕಾರ, ವಂದೇ ಮಾತರಂ ಘೋಷಣೆ, ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಲ್ಲಿ ಸಡಗರ, ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೂಮಳೆಯ ಮೂಲಕ ಭರ್ಜರಿ ಸ್ವಾಗತ. 

ಬೆಂಗಳೂರು (ಆ.27): ಸೂರ್ಯೋದಕ್ಕೂ ಮುನ್ನವೇ ಆಗಮಿಸಿದ್ದ ಜನ, ಕೈಯಲ್ಲಿ ರಾಷ್ಟ್ರಧ್ವಜ, ಇಸ್ರೋ ವಿಜ್ಞಾನಿಗಳ ಪರ ಜೈಕಾರ, ವಂದೇ ಮಾತರಂ ಘೋಷಣೆ, ಪುಟ್ಟಮಕ್ಕಳಿಂದ ಹಿಡಿದು ದೊಡ್ಡವರಲ್ಲಿ ಸಡಗರ, ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೂಮಳೆಯ ಮೂಲಕ ಭರ್ಜರಿ ಸ್ವಾಗತ. ಬ್ರಿಕ್ಸ್‌ ಶೃಂಗಸಭೆಗಾಗಿ ನಾಲ್ಕು ದಿನಗಳ ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ ಪ್ರವಾಸ ಮುಗಿಸಿ ಚಂದ್ರಯಾನ-3 ಯಶಸ್ಸಿನ ರೂವಾರಿಗಳಾದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ನೇರವಾಗಿ ರಾಜಧಾನಿ ಬೆಂಗಳೂರಿಗೆ ಶನಿವಾರ ಆಗಮಿಸಿದ ಪ್ರಧಾನಿ ನರೇಂದ್ರ ಅವರಿಗೆ ಸಾರ್ವಜನಿಕರು ತುಂಬು ಸಡಗರದಿಂದ ಸ್ವಾಗತಿಸಿದ ಪರಿ ಇದು.

ಶನಿವಾರ ನಸುಕಿನ 5.30ಕ್ಕೂ ಮುನ್ನವೇ ಎಚ್‌ಎಎಲ್‌ ವಿಮಾನ ನಿಲ್ದಾಣದ ಹೊರಭಾಗದ ರಸ್ತೆಯ ಇಕ್ಕೆಲದಲ್ಲಿ ಸಾವಿರಾರು ಜನ ಮೋದಿ ಸ್ವಾಗತಕ್ಕಾಗಿ ಸೇರಿದ್ದರು. ಜತೆಗೆ ಜಾಲಹಳ್ಳಿ ಕ್ರಾಸ್‌, ಸಿಸ್ಟಮ್‌ ಸರ್ಕಲ್‌ಗಳಲ್ಲಿಯೂ ಮುಂಜಾನೆಯೇ ಮೋದಿ ಅವರನ್ನು ನೋಡಲು ಜಮಾಯಿಸಿದ್ದರು. ಡೊಳ್ಳುಕುಣಿತ, ವೀರಗಾಸೆ, ತಮಟೆ ವಾಧ್ಯ ಕಲಾವಿದರು ಕಲಾ ಪ್ರದರ್ಶನದಲ್ಲಿ ನೀಡಿದರು. ಮಕ್ಕಳು, ಯುವಜನರು ಸೇರಿದಂತೆ ದೊಡ್ಡವರು ರಾಷ್ಟ್ರಧ್ವಜ, ಇಸ್ರೋ ಲಾಂಛನ, ಚಂದ್ರಯಾನದ ಭಿತ್ತಿ ಪತ್ರ ಹಿಡಿದು ವಿಜ್ಞಾನಿಗಳ ಪರ ಘೋಷಣೆ ಕೂಗುವ ಮೂಲಕ ಸಂಭ್ರಮಿಸಿದರು. 

ಇಸ್ರೋ ವಿಜ್ಞಾನಿಗಳು ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದು ವಿಪರ್ಯಾಸ: ನಟ ಚೇತನ್‌

ಅನೇಕ ಜನರು, ಮಕ್ಕಳು ಕೆನ್ನೆಯ ಮೇಲೆ ಇಸ್ರೋ ಲಾಂಛನ, ರಾಷ್ಟ್ರಧ್ವಜ ಬರೆಸಿಕೊಂಡು ಭಾರತ್‌ ಮಾತಾ ಕೀ ಜೈ ಎಂದು ಅಭಿಮಾನ ವ್ಯಕ್ತಪಡಿಸಿದರು. ಮೋದಿ ಕಾಣುತ್ತಿದ್ದಂತೆ ಮೊಬೈಲ್‌ನಲ್ಲಿ ಪೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲ್‌, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವರಾದ ಆರ್‌.ಅಶೋಕ್‌, ಕೆ.ಗೋಪಾಲಯ್ಯ, ಮುನಿರತ್ನ ಸೇರಿ ಬಿಜೆಪಿ ಪದಾಧಿಕಾರಿಗಳು, ಮುಖಂಡರು ಜನರ ನಡುವೆ ಇದ್ದು ಸಂಭ್ರಮಕ್ಕೆ ಸಾಕ್ಷಿಯಾದರು.

ಕೈಬೀಸಿದ ಮೋದಿ: ಜಾಲಹಳ್ಳಿ ಕ್ರಾಸ್‌ನ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರಿನಿಂದ ಇಳಿದು ಬಂದು ಸುತ್ತಲೂ ನೆರೆದಿದ್ದ ಜನರತ್ತ ಕೈ ಬೀಸಿದರು. ಈ ವೇಳೆ ಸಾರ್ವಜನಿಕರಿಂದ ಹಷೋದ್ಘಾರ ಮೊಳಗಿತು. ಬಳಿಕ ಕಾರನ್ನೇರಿ ಅನತಿ ದೂರದವರೆಗೆ ಜನರತ್ತ ಕೈಬೀಸುತ್ತ ಮೋದಿ ತೆರಳಿದರು. ಈ ಸಂದರ್ಭದಲ್ಲಿ ಜನತೆ ಹೂಮಳೆಗೈದರು. ಬಳಿಕ ಅಲ್ಲಿಂದ ನೇರವಾಗಿ ಇಸ್ರೋ ಐಸ್ಟ್ರಾಕ್‌ ಕೇಂದ್ರದತ್ತ ಪ್ರಧಾನಿ ಮೋದಿ ತೆರಳಿದರು. ವಾಪಸ್ಸಾಗುವಾಗಲೂ ಪ್ರಧಾನಿಯನ್ನು ಕಣ್ತುಂಬಿಕೊಳ್ಳಲು ಜನತೆ ಇಸ್ರೋ ಬಳಿಯ ಸಿಸ್ಟಮ್‌ ಸರ್ಕಲ್‌ ಬಳಿ ನೆರೆದಿದ್ದರು.

ಬಿಗಿ ಭದ್ರತೆ: ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಬೆಳಗ್ಗೆ ಐದು ಸಾವಿರಕ್ಕೂ ಹೆಚ್ಚಿನ ಪೊಲೀಸರಿಂದ ಬಿಗಿ ಬಂದೋಬಸ್‌್ತ ಏರ್ಪಡಿಸಲಾಗಿತ್ತು. ಎಚ್‌ಎಎಲ್‌ ಬಳಿಯೇ ಸುಮಾರು ಎರಡು ಸಾವಿರ ಪೊಲೀಸರಿದ್ದರು. ದೊಮ್ಮಲೂರು, ಟ್ರಿನಿಟಿ ಸರ್ಕಲ್‌, ಮೇಖ್ರಿ ಸರ್ಕಲ್‌, ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್‌ಗಳಲ್ಲಿ ಹೆಚ್ಚಿನ ಪೊಲೀಸರು ನಿಯೋಜನೆಯಾಗಿದ್ದರು. ಐಸ್ಟ್ರಾಕ್‌ ಸೇರಿ ಸುತ್ತಲಿನ ಕಾರ್ಖಾನೆಗಳಿಗೆ ಬೆಳಗ್ಗೆ 9ರ ಬಳಿಕವೇ ಕೆಲಸ ಆರಂಭಿಸಿಲು ತಿಳಿಸಲಾಗಿತ್ತು. ಹೀಗಾಗಿ ಬೆಳಗ್ಗೆಯೇ ಅಲ್ಲಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಜೊತೆಗೆ ನಸುಕಿನ ಮೆಟ್ರೋ ರೈಲುಗಳು ಭರ್ತಿಯಾಗಿದ್ದವು.

ನಾನು ಒಬ್ಬ ಬಡಪಾಯಿ, ಬೆನ್ನು ಹಿಂದೆ ಏಕೆ ಬಿದ್ದಿದ್ದೀರಿ?: ಜಗದೀಶ್‌ ಶೆಟ್ಟರ್‌

ಬೆನ್ನು ತಟ್ಟಿ ಶ್ಲಾಘನೆ: ಇಸ್ರೋ ಐಸ್ಟ್ರಾಕ್‌ ಕೇಂದ್ರಕ್ಕೆ ಬರುತ್ತಿದ್ದಂತೆ ಅಧ್ಯಕ್ಷ ಡಾ.ಎಸ್‌.ಸೋಮನಾಥ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಸೋಮನಾಥ್‌ ಬೆನ್ನುತಟ್ಟಿಮೋದಿ ಶ್ಲಾಘಿಸಿದರು. ಚಂದ್ರಯಾನದ ವಿವಿಧ ಹಂತ, ವಿಭಾಗಗಳಲ್ಲಿ ಕೆಲಸ ಮಾಡಿದ ವಿಜ್ಞಾನಿಗಳು ಪ್ರಧಾನಿ ಮೋದಿ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡರು.