ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ರಾಹುಲ್ ಗಾಂಧಿ 40 ದಿನಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಾರಣ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಮತದಾರರ ಪರಿಷ್ಕರಣೆ ಮತ್ತು ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ಸರ್ಕಾರದ ಕ್ರಮವನ್ನು ಅವರು ಟೀಕಿಸಿದ್ದಾರೆ.
ಗದಗ (ಜು.12) : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul gandhi) ಕಳೆದ 40 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಕಾಣೆ ಆಗಿದ್ದರಿಂದಲೇ ರಾಜ್ಯದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಆದರೆ, ರಾಜ್ಯ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಯಲ್ಲೇ ಮಗ್ನರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.
SIR ಗೆ ಕರ್ನಾಟಕ ಸರ್ಕಾರ ಅನಗತ್ಯ ಗೊಂದಲ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶೇಷ ಮತದಾರರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ರಾಜ್ಯ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಕಷ್ಟದ ಪರಿಸ್ಥಿತಿಯಲ್ಲೂ ಬಿಎಲ್‌ಒಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಮತದಾರರ ನೋಂದಣಿ ನಮೂನೆಗಳು ಮನೆ ಮನೆಗೆ ತಲುಪುವಂತೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದರು.
ಶಾಶ್ವತ ನಿವಾಸ ಪ್ರಮಾಣಪತ್ರ ಕಾನೂನು ಬಾಹಿರ
ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ರಾಜ್ಯ ಸರ್ಕಾರದ ಕ್ರಮ ಕಾನೂನು ಬಾಹಿರವಾಗಿದೆ. ನುಸುಳುಕೋರರಿಗೆ ಮತದಾರರ ಗುರುತಿನ ಚೀಟಿ ದೊರಕಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಮಾಣಪತ್ರ ನೀಡಲು ಸರ್ಕಾರ ವಿಧಿಸಿರುವ 11 ಷರತ್ತುಗಳೂ ಸಮಂಜಸವಾಗಿಲ್ಲ ಎಂದು ಜೋಶಿ ಆಕ್ಷೇಪ ವ್ಯಕ್ತಪಡಿಸಿದರು.


