ರಾಜ್ಯದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ರಷ್ಟು ಮೀಸಲು ನೀಡುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಮೀಸಲಾತಿಯು 2019 ರ ಸಮ್ಮಿಶ್ರ ಸರ್ಕಾರದ ಸಂಪುಟ ಉಪಸಮಿತಿಯ ಶಿಫಾರಸ್ಸಿನ ಮೇರೆಗೆ ಜಾರಿಯಾಗಿದ್ದು, ಬಿಜೆಪಿ ಇದನ್ನು ಧರ್ಮಾಧಾರಿತ ಮೀಸಲಾತಿ ಎಂದು ಟೀಕಿಸಿದೆ.
ಬೆಂಗಳೂರು (ಜೂ.20): ರಾಜ್ಯದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ. 15 ರಷ್ಟು ಮೀಸಲು ನಿರ್ಧಾರ ಈಗ ಕೈಗೊಂಡ ತೀರ್ಮಾನವಲ್ಲ. 2019 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಚಿಸಿದ್ದ ಸಂಪುಟ ಉಪ ಸಮಿತಿ ಶಿಫಾರಸ್ಸು ಮಾಡಿತ್ತು ಎಂದು ವಸತಿ ಹಾಗೂ ಅಲ್ಪಸಂಖ್ಯಾತ ರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ
ಈ ಕುರಿತು ಹೇಳಿಕೆ ನೀಡಿರುವ ಅವರು, ಸಾಚಾರ್ ಸಮಿತಿ ವರದಿ ಪ್ರಕಾರ ಕೇಂದ್ರ ಸರ್ಕಾರದಲ್ಲಿ ಈಗಾಗಲೇ ವಸತಿ ಯೋಜನೆಗಳಲ್ಲಿ ಶೇ. 15 ರಷ್ಟು ಮೀಸಲಾತಿ ಅಲ್ಪಸಂಖ್ಯಾತ ಸಮುದಾಯಕ್ಕೆ ಇದೆ.
ಅದೇ ರೀತಿ ರಾಜ್ಯದಲ್ಲೂ ನೀಡಬೇಕು ಎಂಬ ಬೇಡಿಕೆ ಇತ್ತು. ಹೀಗಾಗಿ ಕೇಂದ್ರದ ಮಾದರಿಯನ್ನೇ ಅನುಸರಿಸಲಾಗಿದೆ. 2019 ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಯಾಗಿದ್ದಾಗ ರಚಿಸಿದ್ದ ಸಂಪುಟ ಉಪ ಸಮಿತಿ ಶಿಫಾರಸ್ಸು ಮಾಡಿತ್ತು.ಇದೀಗ ಸಂಪುಟದ ಮುಂದೆ ಬಂದು ಒಪ್ಪಿಗೆ ದೊರೆತಿದೆ. ಈಗಾಗಲೇ ಇದ್ದ ಶೇ. 10 ರಷ್ಟು ಮೀಸಲಾತಿ ಪ್ರಮಾಣ ಶೇ. 15 ಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಪಸಂಖ್ಯಾತ ಸಮುದಾಯದಲ್ಲಿ ಹೆಚ್ಚಿನ ಬಡ ಕುಟುಂಬಗಳಿದ್ದು ವಸತಿ ರಹಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಬೇಡಿಕೆ ಇತ್ತು. 2021 ರಾಷ್ಟ್ರೀಯ ಅಲ್ಪಸಂಖ್ಯಾತ ರ ಆಯೋಗವು ಸಹ ಶೇ. 15 ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ತಿಳಿಸಿತ್ತು. ಇದೆಲ್ಲ ವಾಸ್ತವ ಅಂಶ ತಿಳಿಯದೆ ಪ್ರತಿಪಕ್ಷ ಗಳು ಅನಗತ್ಯ ಟೀಕೆ ಗಳು ಮಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ವಸತಿ ಯೋಜನೆಯಲ್ಲಿನ ಧರ್ಮಾಧಾರಿತ ಮೀಸಲಾತಿ ವಿರುದ್ಧ ಬಿಜೆಪಿ ಹೋರಾಟಕ್ಕೆ ಸಿದ್ಧತೆ
ಶಿವಮೊಗ್ಗ (ಜೂ. 20): ರಾಜ್ಯ ಸರ್ಕಾರ ಆಶ್ರಯ ವಸತಿ ಯೋಜನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡುತ್ತಿರುವ ನಿರ್ಧಾರವನ್ನು ಬಿಜೆಪಿ ಎಂಎಲ್ಸಿ ಡಿ.ಎಸ್. ಅರುಣ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 'ಇದು ಬ್ರಿಟಿಷರ ಡಿವೈಡ್ ಅಂಡ್ ರೂಲ್ ನೀತಿಯ ಪ್ರತಿಬಿಂಬ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಲು ಮುಂದಾಗಿದೆ' 'ವಸತಿ ಯೋಜನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ 15% ಮೀಸಲಾತಿ ನೀಡುವುದು ರಾಜ್ಯದ ಇತಿಹಾಸದಲ್ಲಿಯೇ ದೊಡ್ಡ ತಪ್ಪು. ಜುಲೈ 11ರಿಂದ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ಬಗ್ಗೆ ತೀವ್ರ ಹೋರಾಟ ನಡೆಯಲಿದೆ. ಸರ್ಕಾರದ ಯಾವುದೇ ಸಂವಿಧಾನ ವಿರೋಧಿ ನೀತಿಗಳಿಗೆ ವಿರೋಧ ವ್ಯಕ್ತಪಡಿಸಲಾಗುತ್ತದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ: ಡಿ.ಎಸ್. ಅರುಣ್ ಅವರು ಸರ್ಕಾರದ ಧೋರಣೆಗಳನ್ನು ಪ್ರಶ್ನಿಸಿ, “2013ರಿಂದ 2018ರ ಅವಧಿಯಲ್ಲಿ ಕೂಡ ಇಂತಹ ಪ್ರಯತ್ನಗಳು ನಡೆದಿದ್ದವು. ಆಗಲೂ ಸಾರ್ವಜನಿಕ ವಿರೋಧದಿಂದ ಹಿಂಪಡೆಯಲಾಗಿತ್ತು. ಇದೀಗ ಮತ್ತೆ ಧರ್ಮದ ಆಧಾರದ ಮೇಲೆ ಮೀಸಲಾತಿಯ ವಿಷಯವನ್ನು ಮುಂದೂಡಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲೂ ಜಾತಿ ಭಾವನೆ ಬೆಳೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. 'ಶಿಕ್ಷಣದಲ್ಲಿ ಮಕ್ಕಳ ಮನಸ್ಸಿನಲ್ಲಿ ಜಾತಿಯ ವಿಷಬೀಜ ಬಿತ್ತುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ನಾಯಕರು, ವಿಶೇಷವಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ ಬ್ಯಾಂಕ್‌ಗಾಗಿ ಮುಸ್ಲಿಂ ಸಮುದಾಯದ ಒಲವು ಪಡೆಯಲು ಈ ರೀತಿಯ ನೀತಿ ಅನುಸರಿಸುತ್ತಿದ್ದಾರೆ' ಎಂದು ಟೀಕಿಸಿದರು.
ತ್ರಿ-ಬಿ ವರ್ಗ ಮತ್ತು ಗುತ್ತಿಗೆ ಮೀಸಲಾತಿ ಕುರಿತು ಪ್ರಶ್ನೆ:
ಇತ್ತೀಚೆಗಷ್ಟೇ ತ್ರಿ-ಬಿ ವರ್ಗಕ್ಕೆ ಗುತ್ತಿಗೆಗಳಲ್ಲಿ ಮೀಸಲಾತಿ ಘೋಷಿಸಿದ ಸರ್ಕಾರದ ಕ್ರಮವನ್ನು ಅವರು ಪ್ರಶ್ನಿಸಿದರು. “ತ್ರಿ-ಬಿ ವರ್ಗದಲ್ಲಿ 19 ಉಪಜಾತಿಯುಳ್ಳ ಮುಸ್ಲಿಂ ಸಮುದಾಯವಲ್ಲದೆ ಇನ್ನು ಯಾರಿದ್ದಾರೆ ಎಂಬುದು ಸ್ಪಷ್ಟವಾಗಲಿ ಎಂದು ಡಿಎಸ್ ಅರುಣ್ ಪ್ರಶ್ನಿಸಿದರು. ಬಿಜೆಪಿ ಆಡಳಿತಾವಧಿಯಲ್ಲಿ ಯಾವುದೇ ಕೋಮುಗಲಭೆ ನಡೆದಿಲ್ಲ. ಎಲ್ಲ ಯೋಜನೆಗಳು ಸಮಾನವಾಗಿ ಎಲ್ಲ ವರ್ಗದ ಜನರಿಗೆ ನೀಡಲಾಗಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಡವರ ಹಿತಕ್ಕಾಗಿ ಕಾರ್ಯಕ್ರಮಗಳು ಜಾರಿಗೊಳ್ಳುತ್ತಿವೆ' ಎಂದು ಹೇಳಿದರು.
