ಚಾಮರಾಜಪೇಟೆ ಪಶು ಆಸ್ಪತ್ರೆ ಸ್ಥಳಾಂತರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿದೆ. ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾದ ಕಾರಣ ಯಥಾಸ್ಥಿತಿ ಕಾಯ್ದುಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರು (ಮಾ.06): ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಚಾಮರಾಜಪೇಟೆ ಪಶು ಆಸ್ಪತ್ರೆಯನ್ನು ಸ್ಥಳಾಂತರಿಸಿದ್ದ ಸರ್ಕಾರ ಅಲ್ಪಸಂಖ್ಯಾತ ಇಲಾಖೆಗೆ ರವಾನಿಸಿ ಆದೇಶ ಹೊರಡಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ 2 ಅರ್ಜಿ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಿಂದಿನ ಆದೇಶವನ್ನು ವಾಪಸ್ ಪಡೆದುಕೊಂಡಿದೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಚಲುವಾಧಿಪಾಳ್ಯ ವಾರ್ಡ್, ಮೈಸೂರು ರಸ್ತೆ ಹಾಗೂ ಗೂಡ್‌ ಶೆಡ್ ರಸ್ತೆಗೆ ಹೊಂದಿಕೊಂಡಂತೆ ಇರುವ ಪಶು ಆಸ್ಪತ್ರೆಯನ್ನು ಹುದ್ದೆಗಳ ಸಮೇತ ಜಯನಗರ, ಬೆಂಗಳೂರು ಇಲ್ಲಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳಾಂತರಿಸಿ ಆದೇಶ ಹೊರಡಿಸಿತ್ತು. ಇದಾದ ನಂತರ ಪಶುಸಂಗೋಪನಾ ಇಲಾಖೆಯ ಪಶು ಆಸ್ಪತ್ರೆ ಮತ್ತು ನಿವೇಶನವನ್ನು (2 ಎಕರೆ) ಮೌಲಾನಾ ಆಜಾದ್/ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನಿರ್ಮಾಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿ ಆದೇಶ ಹೊರಡಿಸಲಾಗಿತ್ತು.

ಆದರೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಅಧೀನದಲ್ಲಿರುವ ಚಾಮರಾಜಪೇಟೆ ಪಶು ಆಸ್ಪತ್ರೆಯ 2 ಎಕರೆ ಜಾಗವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ (ಹಸ್ತಾಂತರಿಸಿರುವ ಮತ್ತು ಪಶು ಆಸ್ಪತ್ರೆಯನ್ನು ಹುದ್ದೆಗಳ ಸಮೇತ ಸ್ಥಳಾಂತರಿಸಿರುವ ಆದೇಶಗಳ ವಿರುದ್ಧ ಹೈಕೋರ್ಟ್‌ನಲ್ಲಿ ಗಿರೀಶ್ ಭಾರದ್ವಾಜ್ ಹಾಗೂ ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದ ಎರಡು ಪ್ರಕರಣಗಳು ದಾಖಲಾಗಿರುತ್ತದೆ. ಪಶುಪಾಲನಾ ಇಲಾಖೆ ಸಚಿವರು ಸರ್ಕಾರದ ಪಶು ಆಸ್ಪತ್ರೆ ಜಾಗ ಹಸ್ತಾಂತರದ ಕುರಿತು ಹೆಚ್ಚಿನ ಚರ್ಚೆ ಅವಶ್ಯವಿದ್ದು, ಆದೇಶಗಳನ್ನು ಹಿಂಪಡೆಯುಂತೆ ಕೋಡಿದ್ದಾರೆ.

ಇದನ್ನೂ ಓದಿ: ವಕ್ಫ್ ಬೋರ್ಡ್‌ಗೆ ಚಾಮರಾಜಪೇಟೆ ಪಶು ಆಸ್ಪತ್ರೆ ಭೂಮಿ ಕೊಟ್ಟ ಸರ್ಕಾರಿ ಆದೇಶಕ್ಕೆ ತಡೆಯೊಡ್ಡಿದ ಹೈಕೋರ್ಟ್!

ಈ ಹಿನ್ನೆಲೆಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿರುವ ಗೂಡ್‌ ಶೆಡ್ ರಸ್ತೆಗೆ ಹೊಂದಿಕೊಂಡಂತಿರುವ ಪಶು ಆಸ್ಪತ್ರೆ ಸೇರಿದಂತೆ 2 ಎಕರೆ ಖಾಲಿ ಜಾಗವನ್ನು ಮೌಲಾನಾ ಆಜಾದ್/ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನಿರ್ಮಾಣಕ್ಕಾಗಿ ಹೊರಡಿಸಿದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದು ಆದೇಶಿಸಲಾಗಿದೆ. ಈ ಮೂಲಕ ಚಾಮರಾಜಪೇಟೆ ಜನರ ಹೋರಾಟಕ್ಕೆ ಭಾರೀ ಗೆಲುವು ಸಿಕ್ಕಂತಾಗಿದೆ. ಇಲ್ಲಿ ಈ ಹಿಂದನಂತೆ ಪಶು ಆಸ್ಪತ್ರೆ ಕಾರ್ಯನಿರ್ವಹಿಸಲಿದೆ. ಜೊತೆಗೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಇದ್ದ ಜಾಗದ ಒಡೆತನದ ಹಕ್ಕು ಕೂಡ ರದ್ದು ಆಗಿದೆ.