ವಿಧಾನಸಭೆಯಲ್ಲಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ ಸರ್ಕಾರವು ಜಿಎಸ್‌ಟಿ ಹೆಸರಿನಲ್ಲಿ ಬಡವರಿಂದ ಹಣ ಕಸಿಯುತ್ತಿದೆ ಎಂದು ಆರೋಪಿಸಿದರು. ಇದು ಸದನದಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.

ವಿಧಾನಸಭೆ (ಮಾ.10) ‘ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಬಡವರ ಮನೆಗೆ 1.50 ಲಕ್ಷ ರು. ಸಹಾಯಧನ ನೀಡಿ ಜಿಎಸ್‌ಟಿ ಹೆಸರಿನಲ್ಲಿ 1.35 ಲಕ್ಷ ರು. ಕಸಿಯುತ್ತದೆ. ಬಡವರ ಮನೆಗೆ ಆದರೂ ಜಿಎಸ್‌ಟಿ ವಿನಾಯಿತಿ ನೀಡಲಿ’ ಎಂಬ ವಸತಿ ಸಚಿವ ಜಮೀರ್‌ ಅಹಮದ್‌ಖಾನ್‌ ಹೇಳಿಕೆ ಸದನದಲ್ಲಿ ತೀವ್ರ ಚರ್ಚೆಗೆ ಒಳಗಾಯಿತು.

ಕಲಾಪದಲ್ಲಿ ಬಜೆಟ್‌ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್‌ ಸದಸ್ಯ ಶಿವಲಿಂಗೇಗೌಡ ಅವರು ಮಾತನಾಡುವಾಗ ಮಧ್ಯಪ್ರವೇಶಿಸಿದ ಜಮೀರ್‌ ಅಹಮದ್‌ಖಾನ್‌, ‘ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 1.50 ಲಕ್ಷ ರು. ಸಹಾಯಧನ ನೀಡಿ ಶೇ.18 ರಷ್ಟು 1.35 ಲಕ್ಷ ರು. ಜಿಎಸ್‌ಟಿ ಹೆಸರಿನಲ್ಲಿ ಕಸಿದುಕೊಳ್ಳುತ್ತದೆ’ ಎಂದು ದೂರಿದರು.

ಇದನ್ನೂ ಓದಿ: ದೇಶದ ಪ್ರತಿಯೊಬ್ಬರ ತಲೆ ಮೇಲೆ 4.68 ಲಕ್ಷ ಸಾಲ: ಮೋದಿ ಸರ್ಕಾರದ ವಿರುದ್ಧ ಶಿವಲಿಂಗೇಗೌಡಗೌಡ ಕಿಡಿ!

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಸುನಿಲ್‌ ಕುಮಾರ್‌, ‘ಇದು ಯಾವ ಲೆಕ್ಕ. 1.50 ಲಕ್ಷ ರು.ಗಳಿಗೆ ಶೇ.18 ಜಿಎಸ್‌ಟಿ ಎಂದರೆ 1.35 ಲಕ್ಷ ರು. ಹೇಗಾಗುತ್ತದೆ? ಉಲ್ಟಾ ಓದುವುದು ಗೊತ್ತಿತ್ತು. ಉಲ್ಟಾ ಲೆಕ್ಕ ಮಾಡುವುದು ಹೇಗೆ ಹೇಳಿ? ಜಮೀರ್ ಅಹಮದ್‌ ಖಾನ್‌ ಅವರಿಗೆ ಗಣಿತ ಪಾಠ ಮಾಡಿದ ಟೀಚರ್‌ ಯಾರು? ಅವರು ಓದಿದ ಶಾಲೆಯನ್ನು ಕೂಡಲೇ ಮುಚ್ಚಿಸಬೇಕು’ ಎಂದು ಒಂದೇ ಉಸಿರಿನಲ್ಲಿ ಟೀಕಿಸಿದರು.

ಸುನಿಲ್‌ಕುಮಾರ್‌ ಜತೆ ಪ್ರತಿಪಕ್ಷ ಸದಸ್ಯರೂ ದನಿಗೂಡಿಸಿದರು.

ಈ ವೇಳೆ ಜಮೀರ್‌ ಅಹಮದ್‌ಖಾನ್‌ ನೆರವಿಗೆ ಬಂದ ಅಬ್ಬಯ್ಯ ಪ್ರಸಾದ್‌ ಹಾಗೂ ಸ್ಪೀಕರ್‌ ಯು.ಟಿ. ಖಾದರ್‌ ಅವರು, ಒಂದು ಮನೆಯ ಒಟ್ಟು ಘಟಕ ವೆಚ್ಚ 7.5 ಲಕ್ಷ ರು. ಅಷ್ಟಕ್ಕೆ ಶೇ.18 ರಷ್ಟು ಜಿಎಸ್‌ಟಿ ವಿಧಿಸಿ ಕೇಂದ್ರ ಸರ್ಕಾರ ಜಿ.ಎಸ್‌ಟಿ ಸಂಗ್ರಹಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಶಾಸಕ ಭರತ್‌ ರೆಡ್ಡಿ ಕಚೇರಿಗೆ ಬಾಂಬ್‌ ಬೆದರಿಕೆ

ಜಮೀರ್‌ ತಿರುಗೇಟು: ಜಮೀರ್‌ ಅಹಮದ್‌ಖಾನ್‌ ಮಾತನಾಡಿ, ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ರಾಜ್ಯ ಸರ್ಕಾರ 6 ಲಕ್ಷ ರು. ಹಾಗೂ ಕೇಂದ್ರ ಸರ್ಕಾರ 1.5 ಲಕ್ಷ ರು. ಸೇರಿ 7.5 ಲಕ್ಷ ರು. ಘಟಕ ವೆಚ್ಚದಲ್ಲಿ ಬಡವರಿಗೆ ಮನೆ ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರ 1.5 ಲಕ್ಷ ರು. ಸಹಾಯಧನ ನೀಡಿ 1.35 ಲಕ್ಷ ರು. ಜಿಎಸ್‌ಟಿ ಸಂಗ್ರಹ ಮಾಡುತ್ತಿದೆ. ಬಡವರ ಮನೆಗೆ ಆದರೂ ಜಿಎಸ್‌ಟಿ ವಸೂಲಿ ನಿಲ್ಲಿಸಿ ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದರು.