ರವಿ ಹಂಜ್ ರಚಿತ 'ಬಸವ ಮಂಟಪ' ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕರ್ನಾಟಕ ಸರ್ಕಾರ ಆದೇಶಿಸಿದೆ. ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಅಂಶಗಳಿದ್ದ ಕಾರಣ ಬಿಎನ್‌ಎಸ್‌ಎಸ್ ಅಡಿ ಡಿಜಿಟಲ್ ಹಾಗೂ ಮುದ್ರಿತ ಪ್ರತಿಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಬೆಂಗಳೂರು (ನ.24): ತೀವ್ರ ವಿವಾದಕ್ಕೆ ಕಾರಣವಾಗಿದ್ದ ಲೇಖಕ ರವಿ ಹಂಜ್ ರಚಿತ 'ಬಸವ ಮಂಟಪ' ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಕೃತಿಯ ಪ್ರಕಟಣೆ, ಮುದ್ರಣ ಹಾಗೂ ಪ್ರಸಾರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ ಸಂಪೂರ್ಣವಾಗಿ ನಿರ್ಬಂಧಿಸಿದೆ.

12ನೇ ಶತಮಾನದ ಸಮಾಜ ಸುಧಾರಕ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಹಾಗೂ ವಚನ ಸಾಹಿತ್ಯಕ್ಕೆ ಧಕ್ಕೆ ತರುವಂತಹ ಆಕ್ಷೇಪಾರ್ಹ ಮತ್ತು ಕಾನೂನುಬಾಹಿರ ಅಂಶಗಳು ಈ ಕೃತಿಯಲ್ಲಿವೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿತ್ತು. ಇದೀಗ ರಾಜ್ಯ ಗೃಹ ಇಲಾಖೆಯು ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಕ್ರಮ

'ಬಸವ ಮಂಟಪ' ಕೃತಿಯಲ್ಲಿರುವ ಅಂಶಗಳು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಿದ್ದು, ಕಾನೂನುಬಾಹಿರವಾಗಿವೆ ಎಂಬ ಕಾರಣ ನೀಡಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಕಲಂ 98(1)ರ ಅಡಿಯಲ್ಲಿ ಸರ್ಕಾರ ಈ ಕಠಿಣ ಆದೇಶವನ್ನು ಜಾರಿಗೊಳಿಸಿದೆ. ಈ ಆದೇಶದನ್ವಯ ಕೃತಿಯ ಎಲ್ಲಾ ಮುದ್ರಿತ ಪ್ರತಿಗಳನ್ನು ತಕ್ಷಣವೇ ಸರ್ಕಾರದ ವಶಕ್ಕೆ (ಮುಟ್ಟುಗೋಲು) ಪಡೆದುಕೊಳ್ಳಲು ಸೂಚಿಸಲಾಗಿದೆ.

ಪೊಲೀಸ್ ಅಧಿಕಾರಿಗಳಿಗೆ ಶೋಧ ನಡೆಸುವ ಅಧಿಕಾರ

ರಾಜ್ಯದ ಯಾವುದೇ ಭಾಗದಲ್ಲಿ 'ಬಸವ ಮಂಟಪ' ಕೃತಿಯ ಪ್ರತಿಗಳು ಕಂಡುಬಂದಲ್ಲಿ ಅವುಗಳನ್ನು ತಕ್ಷಣವೇ ವಶಪಡಿಸಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಿಶೇಷವಾಗಿ, ಸಬ್‌ಇನ್‌ಸ್ಪೆಕ್ಟರ್ (PSI) ದರ್ಜೆಗಿಂತ ಕಡಿಮೆ ಇಲ್ಲದ ಪೊಲೀಸ್ ಅಧಿಕಾರಿಗಳಿಗೆ ಈ ಕೃತಿಯ ಪ್ರತಿಗಳಿಗಾಗಿ ಶೋಧ ನಡೆಸುವ ಮತ್ತು ವಶಪಡಿಸಿಕೊಳ್ಳುವ ಅಧಿಕಾರವನ್ನು ನೀಡಲಾಗಿದೆ.

ಡಿಜಿಟಲ್ ಪ್ರತಿಗಳ ಮೇಲೂ ನಿರ್ಬಂಧ

ಕೇವಲ ಮುದ್ರಿತ ಪುಸ್ತಕ ಮಾತ್ರವಲ್ಲದೆ, ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಅಥವಾ ಇನ್ನಾವುದೇ ಡಿಜಿಟಲ್ ರೂಪದಲ್ಲಿರುವ 'ಬಸವ ಮಂಟಪ' ಕೃತಿಯ ಪ್ರಕಟಣೆ ಮತ್ತು ಪ್ರಸಾರದ ಮೇಲೂ ಸರ್ಕಾರ ನಿರ್ಬಂಧ ವಿಧಿಸಿದೆ. ಕೃತಿಯ ಪ್ರಕಟಣೆ ಹಾಗೂ ವಿತರಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆದೇಶದ ಪ್ರತಿ ರವಾನೆ

ಈ ಆದೇಶವನ್ನು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG & IGP), ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿದಂತೆ ರಾಜ್ಯದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆದೇಶದ ಪ್ರತಿಯನ್ನು ರವಾನಿಸಲಾಗಿದೆ. ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ.