ಬಸವಕಲ್ಯಾಣದ ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪನವರೇ ತಮ್ಮ ಮನೆ ಹಾಳುಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಮುಂಬರುವ ಚುನಾವಣೆಯಲ್ಲಿ ತಮಗೇ ಮೈತ್ರಿ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೀದರ್ (ನ.24): ಹಿರಿಯೂರು ಉಪಚುನಾವಣೆ ಟಿಕೆಟ್ಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಬ್ಬ ಜೆಡಿಎಸ್ ಮಾಜಿ ಶಾಸಕ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಬಗ್ಗೆ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆಯೂ ಬಿಎಸ್ವೈ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿರುವುದು ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ವಿರೋಧಿಗಳು ಆಡಿಕೊಳ್ಳುವಂತಾಗಿದೆ.
ನನ್ನ ಮನೆ ಹಾಳು ಮಾಡಿದ್ದು ಯಡಿಯೂರಪ್ಪ!
ಬೀದರ್ ಜಿಲ್ಲೆಯ ಬಸವಕಲ್ಯಾಣದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಬಸವಣ್ಣನ ಮುಂದೆ ನಿಂತು ಬೊಬ್ಬೆ ಹೊಡೆಯುತ್ತೇನೆ 'ನನ್ನ ಮನೆ ಹಾಳು ಮಾಡಿದ್ದು ಯಡಿಯೂರಪ್ಪ' ಎಂದು ಅಸಮಾಧಾನ ವ್ಯಕ್ತಪಡಿಸಿರುವುದು ಬಿಜೆಪಿ-ಜೆಡಿಎಸ್ ನಡುವೆ ಬಿರುಕು ಕಾಣಿಸಿಕೊಂಡಂತಾಗಿದೆ.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದ್ದೇನು?
ಬಿಎಸ್ ಯಡಿಯೂರಪ್ಪ ಅವರೇ ನನ್ನ ಮನೆ ಹಾಳುಮಾಡಿದ್ದಾರೆ. ಹೀಗಾಗಿಯೇ ಅವರಿಗಿಂದು ಕೆಟ್ಟ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು ಮುಂದುವರಿದು, ನಾನು ಬಿಜೆಪಿಯಲ್ಲಿ ದುಡಿದಿದ್ದೇನೆ. ಬಿಜೆಪಿಯವ್ರು ನನಗೆ ದೋಖಾ ಮಾಡಿದ್ರು. ಆದ್ರೆ ನಾನು ಯಾವತ್ತೂ ಬಿಜೆಪಿಗೆ ದೋಖಾ ಮಾಡಿದವನಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನನಗೆ ಮೋಸ ಮಾಡಿದ್ದಾರೆ. ಇದನ್ನ ನಾನು ಬಸವಣ್ಣನ ಮುಂದೆ ನಿಂತು ಬೊಬ್ಬೆ ಹೊಡೆಯುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಯ ಬಂದಾಗ ಎಲ್ಲ ಮಾತಾಡ್ತೀನಿ
ಬಿಎಸ್ ಯಡಿಯೂರಪ್ಪನವರೇ ನನಗೆ ಮೋಸ ಮಾಡಿದ್ದಾರೆ. ನನ್ನನ್ನ ಮಣ್ಣಲ್ಲಿ ಹಾಕಿಸಿದ್ದಕ್ಕೆ ಅವರ ಪರಿಸ್ಥಿತಿ ಹೀಗಾಗಿದೆ. ಸಮಯ ಬಂದಾಗ ಎಲ್ಲವನ್ನೂ ಮಾತನಾಡುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೇಲಿ ಬಸವಕಲ್ಯಾಣ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗುತ್ತೆ. ಮುಂದಿನ ಬಾರಿ ಬಸವಕಲ್ಯಾಣದಿಂದಲೇ ಸ್ಪರ್ಧಿಸುತ್ತೇನೆ. ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಟಿಕೆಟ್ ನನಗೆ ಸಿಗುತ್ತೆ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಭರವಸೆ ವ್ಯಕ್ತಪಡಿಸಿದರು.
















