ಹಾಸನ ಜಿಲ್ಲಾಧಿಕಾರಿ ಕಚೇರಿ ಭ್ರಷ್ಟಾಚಾರದ ಆರೋಪ ಮಾಡಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಲು ಸೈಬರ್ ಪೊಲೀಸರು ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಕುಮಾರಸ್ವಾಮಿ ಅಧಿಕಾರಿಗಳ ವಿರುದ್ಧ ಗರಂ ಆಗಿ ಡಿಜಿಪಿಗೆ ಕರೆ ಮಾಡಿದ್ದು, ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ. ಮುಂದೇನಾಯ್ತು? ಸ್ಟೋರಿ ಓದಿ.
ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಜಟಾಪಟಿ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಇವತ್ತು ಹಾಸನ ಸೈಬರ್ ಠಾಣೆ ಪೊಲೀಸರು ನೋಟಿಸ್ ಹಿಡಿದು ಕುಮಾರಸ್ವಾಮಿ ನಿವಾಸಕ್ಕೆ ದೌಡಾಯಿಸಿದ್ದರು. ಈ ವೇಳೆ ಕುಮಾರಸ್ವಾಮಿ ಗರಂ ಆದ ಪ್ರಸಂಗ ನಡೆಯಿತು.
ನೋಟಿಸ್ ಸ್ವೀಕರಿಸಿದ ಕೇಂದ್ರ ಸಚಿವ
ನೋಟಿಸ್ ಹಿಡಿದು ನಿಂತಿದ್ದ ಅಧಿಕಾರಿಗಳ ಜೊತೆ ಮಾತನ್ನಾಡಿದ ಕುಮಾರಸ್ವಾಮಿ, ನಾನು ನಿಮ್ಮ ನೋಟಿಸ್ ಸ್ವೀಕರಿಸೋದಿಲ್ಲ. ನಾನು ಪ್ರತಿ ಪಕ್ಷವಾಗಿ ಏನು ಮಾತಾಡಬೇಕೋ ಅದನ್ನು ಮಾತಾಡಿದ್ದೇನೆ. ಈ ರೀತಿ ಮಾತಾಡಿದ್ದವರಿಗೆಲ್ಲ ಹೀಗೇ ದೂರು ಪಡೆದು ಕ್ರಮ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ತಕ್ಷಣ ಡಿಜಿಪಿ ಸಲೀಂಗೆ ಕರೆ ಮಾಡಿ ಕುಮಾರಸ್ವಾಮಿ ಅವರು ಮಾತಾಡಿದ್ದಾರೆ. ಆ ಬಳಿಕ ಅಧಿಕಾರಿಗಳು ತಂದಿದ್ದ ನೋಟಿಸ್ ಅನ್ನು ಹಿಡಿದು ವಾಪಸ್ ಹೋಗಿದ್ದಾರೆ.
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಮಲವಳ್ಳಿ ಶಾಸಕ ಡಾ.ಕೆ.ಅನ್ನದಾನಿ, ಕುಮಾರಸ್ವಾಮಿ ಅವರು ಒಂದು ಅವ್ಯವಹಾರದ ಬಗ್ಗೆ ಹೇಳಿದ್ದಾರೆ. ಅವರ ಜವಾಬ್ದಾರಿಯನ್ನು ಅವರು ಮಾಡಿದ್ದಾರೆ. ಅದಕ್ಕೆ ನೋಟಿಸ್ ನೀಡಬೇಕಾ? ವಿಪಕ್ಷ ವಾಗಿ ಒಂದು ವಿಚಾರ ಹೇಳಿದ್ದಾರೆ. ಅದರ ಬಗ್ಗೆ ರಾಜ್ಯ ಸರ್ಕಾರ ತನಿಖೆ ಮಾಡಬೇಕು. ಅವರು ಕೊಟ್ಟಿರುವ ಮಾಹಿತಿ ಮೇಲೆ ತನಿಖೆ ಮಾಡಿ. ಇಲ್ಲಿ ಕುಮಾರಸ್ವಾಮಿ ಅವರನ್ನೇ ಸಿಕ್ಕಿಸಿ ತಪ್ಪಿತಸ್ಥರನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಸಾಕ್ಷಿ ಇಲ್ಲದೇ ಯಾವ ವಿಚಾರವನ್ನು ಕುಮಾರಸ್ವಾಮಿ ಪ್ರಸ್ತಾಪ ಮಾಡಲ್ಲ. ನೈಸ್, ಕೆಪಿಎಸ್ಸಿ ಯಾವುದೇ ವಿಚಾರವಾಗಲಿ ದಾಖಲೆಗಳ ಸಮೇತ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದಾರೆ. ಎಚ್ಚರಿಕೆ ಕೊಟ್ಟವರಿಗೆ ನೋಟಿಸ್ ಕೊಟ್ಟರೆ ಹೇಗೆ? ಇದನ್ನು ಸರ್ಕಾರ ಅಂತಾರಾ? ನಾವೂ ಕಾನೂನು ಪ್ರಕಾರ ಉತ್ತರ ಕೊಡ್ತೀವಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಮಾಡಿದ್ದ ಆರೋಪ ಏನು?
ನವೆಂಬರ್ 8, 2026ರಂದು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕುಮಾರಸ್ವಾಮಿ.. ಜಿಲ್ಲಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ವಾಟ್ಸಾಪ್ ಸಂಭಾಷಣೆಯ ಪ್ರತಿಗಳನ್ನು ಬಿಡುಗಡೆ ಮಾಡಿದ್ದರು. ಮೂರು ಕಲ್ಲು ಕ್ರಷರ್ ಘಟಕಗಳಿಗೆ ಅನುಮತಿ ನೀಡಲು ಸುಮಾರು ₹60 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಮತ್ತು ಸಕಲೇಶಪುರದಲ್ಲಿ ಬಡಾವಣೆ ನಿರ್ಮಾಣಕ್ಕೆ ಭೂಪರಿವರ್ತನೆ ಕಡತಗಳಿಗೆ ಲಂಚ ಕೇಳಿರುವ ಕುರಿತು ಈ ಸಂಭಾಷಣೆಗಳಲ್ಲಿ ಉಲ್ಲೇಖವಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಮುಂದುವರಿದು ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಹಾಸನದಲ್ಲೇ ಮುಂದುವರಿಯಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡಗೆ ₹75 ಲಕ್ಷ ಲಂಚ ನೀಡಲಾಗಿದೆ ಎಂದು ಆರೋಪಿಸಿದ್ದರು.
ಇನ್ನು, ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ತಾವು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಬಿಡುಗಡೆಯಾದ ವಾಟ್ಸಾಪ್ ಚಾಟ್ಗಳು ನಕಲಿ ಅಥವಾ ಎಡಿಟ್ ಮಾಡಿದ್ದಾಗಿರಬಹುದು ಎಂದಿದ್ದರು. ಈ ಬಗ್ಗೆ ಸೈಬರ್ ಕ್ರೈಂ ಮತ್ತು ಪೊಲೀಸ್ ತನಿಖೆ ಆಗಬೇಕು ಎಂದಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಜಿಲ್ಲಾಧಿಕಾರಿಯವರ ಆಪ್ತ ಸಹಾಯಕ (PA) ಶಶಿಕಿರಣ್ ತಮ್ಮ ಹೆಸರು ಮತ್ತು ಸಂಖ್ಯೆ ಬಳಸಿ ನಕಲಿ ಚಾಟ್ ಸೃಷ್ಟಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ತನಿಖೆಯ ಭಾಗವಾಗಿ ಇವತ್ತು ಕುಮಾರಸ್ವಾಮಿ ನಿವಾಸಕ್ಕೆ ಸೈಬರ್ ಠಾಣೆ ಪೊಲೀಸರು ದೌಡಾಯಿಸಿದ್ದರು.
















