ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ: 4 ಶಾಸಕರ ಪೈಕಿ ಯಾರಿಗೆ ಸಿಗಲಿದೆ ಪಟ್ಟ, ಚರ್ಚೆ ಜೋರು !
ರಾಜ್ಯದಲ್ಲಿ ರಚನೆಗೊಂಡಿರುವ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಈ ಬಾರಿಯಾದರು ರಾಯಚೂರು ಜಿಲ್ಲೆಗೆ ದೊರೆಯಲಿದೆಯೇ ಸ್ಥಾನ? ಇದೀಗ ಜಿಲ್ಲೆಯಾದ್ಯಂತ ಬಹು ಚರ್ಚಿತ ವಿಷಯ ಇದು.
ರಾಮಕೃಷ್ಣ ದಾಸರಿ
ರಾಯಚೂರು (ಮೇ.19) ರಾಜ್ಯದಲ್ಲಿ ರಚನೆಗೊಂಡಿರುವ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಈ ಬಾರಿಯಾದರು ರಾಯಚೂರು ಜಿಲ್ಲೆಗೆ ದೊರೆಯಲಿದೆಯೇ ಸ್ಥಾನ? ಇದೀಗ ಜಿಲ್ಲೆಯಾದ್ಯಂತ ಬಹು ಚರ್ಚಿತ ವಿಷಯ ಇದು.
ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆ ಏಳು ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್ ಗೆದ್ದಿದೆ. ಹೊಸ ಸರ್ಕಾರದಲ್ಲಿ ಕಾಂಗ್ರೆಸ್ನ ನಾಲ್ಕು ಜನ ಶಾಸಕರಲ್ಲಿ ಯಾರು ಸಚಿವ ಸ್ಥಾನವನ್ನು ಅಲಂಕರಿಸುತ್ತಾರೆ ಎನ್ನುವ ಸಂಗತಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Raichur Election Result 2023: 'ಕೈ' ಹಿಡಿದ ಬಿಸಿಲ ನಾಡ ಜನತೆ!
ಅನುಭವ, ಜಾತಿ ಹಾಗೂ ವರಿಷ್ಠರ ಪ್ರೀತಿಪಾತ್ರರಾದವರಿಗೆ ಸಚಿವ ಸ್ಥಾನ ದೊರೆಯಲಿದೆ ಎನ್ನುವ ಲೆಕ್ಕಾಚಾರವು ಜೋರಾಗಿ ಸಾಗಿದೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್(Basangowda daddal MLA), ಮಾನ್ವಿ ಜಿ.ಹಂಪಯ್ಯ ನಾಯಕ(G Hampaiah nayak MLA), ಸಿಂಧನೂರಿನ ಹಂಪನಗೌಡ ಬಾದರ್ಲಿ(Hampanagowda badarli MLA) ಹಾಗೂ ಮಸ್ಕಿಯ ಆರ್.ಬಸನಗೌಡ ತುರ್ವಿಹಾಳ(R Basangowda turvihal) ಅವರು ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ.
ಅನುಭವ, ಹಿರಿತನ, ಜಾತಿ ಲೆಕ್ಕಾಚಾರ, ಲಿಂಗಾಯತ ಸಮುದಾಯಕ್ಕೆ ಸೇರಿದ, ಐದು ಸಲ ಶಾಸಕರಾಗಿ ಆಯ್ಕೆಯಾಗಿರುವ ಸಿಂಧನೂರಿನ ಹಂಪನಗೌಡ ಬಾದರ್ಲಿ ಅವರು ರೇಸಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಮಾನ್ವಿ ಜಿ.ಹಂಪಯ್ಯ ನಾಯಕ ಅವರು ಮೂರು ಬಾರಿ ಶಾಸಕರಾಗಿದ್ದು, ಪರಿಶಿಷ್ಟಪಂಗಡದ ಕೋಠಾದಡಿ ಸಚಿವ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಇನ್ನು ಅದೇ ಎಸ್ಟಿಸಮುದಾಯಕ್ಕೆ ಸೇರಿರುವ ಬಸನಗೌಡ ದದ್ದಲ್ ಮತ್ತು ಆರ್.ಬಸನಗೌಡ ತುರ್ವಿಹಾಳ ಅವರು ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದು ಅವರು ಸಚಿವರಾಗಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಯಾವುದೇ ಪಕ್ಷಗಳ ಸರ್ಕಾರದ ರಚನೆಗೊಂಡರೂ ಜಿಲ್ಲೆಗೆ ಸಚಿವ ಸ್ಥಾನ ನೀಡದೇ ನಿರಂತರ ಅನ್ಯಾಯ ಮಾಡುತ್ತಾ ಬಂದಿರುವುದರ ವಿರುದ್ಧ ಜನಸಾಮಾನ್ಯರು ತೀವ್ರ ಬೇಸರಗೊಂಡಿದ್ದಾರೆ. 2010ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆ ಕೆ.ಶಿವನಗೌಡ ನಾಯಕ ಮತ್ತು 2018ರ ಆರಂಭದ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಿಂಧನೂರಿನ ವೆಂಕಟರಾವ್ ನಾಡಗೌಡರು ಅಲ್ಪಾವಧಿಗೆ ಸಚಿವರಾಗಿದ್ದು ಬಿಟ್ಟರೆ ಕಳೆದ 15 ವರ್ಷಗಳಿಂದ ರಾಯಚೂರು ಜಿಲ್ಲೆ ಸಚಿವ ಸ್ಥಾನದಿಂದ ವಂಚಿತಗೊಳ್ಳುತ್ತಲೇ ಬಂದಿದೆ. ಉಸ್ತುವಾರಿ ಸಚಿವರೂ ಸಹ ಬೇರೆ ಜಿಲ್ಲೆಯವರಾಗಿದ್ದರಿಂದ ಅಭಿವೃದ್ಧಿಗೆ ತೀವ್ರ ಹಿನ್ನಡೆ ಉಂಟಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ; ಮುದಗಲ್ನಲ್ಲಿ ಮತದಾನಕ್ಕಾಗಿ ವೃದ್ಧರ ಪರದಾಟ!
2013ರ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ದೊರೆಯುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿತ್ತು. ನಂತರ ಬಂದ ಸಮ್ಮಿಶ್ರ ಸರ್ಕಾರದ ಅಲ್ಪಾವಧಿಗೆ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕರೂ ಸಹ ಅದು ಹೆಸರಿಗಷ್ಟೇ ಎನ್ನುವಂತಾಗಿತ್ತು. ನಂತರ ಅಧಿಕಾರ ವಹಿಸಿಕೊಂಡ ಬಿಜೆಪಿ ಎರಡ್ಮೂರು ಸಲ ಸಚಿವ ಸಂಪುಟದ ವಿಸ್ತರಣೆಯನ್ನು ಮಾಡಿದರೂ ಮಲತಾಯಿ ಧೋರಣೆ ಪರಿಣಾಮ ಜಿಲ್ಲೆಯು ಸಚಿವ ಸ್ಥಾನದಿಂದ ವಂಚಿತಗೊಳ್ಳುತ್ತಲೇ ಬಂದಿತು. ಇದೀಗ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿಯಾದರು ಜಿಲ್ಲೆಗೆ ಸಚಿವ ಸ್ಥಾನ ಸಿಗಲಿದೆಯೇ ಎಂದು ಜನತೆ ಆಸೆಗಣ್ಣಿನಿಂದ ನೋಡುತ್ತಿದ್ದಾರೆ.