Karnataka Cabinet Formation: ಹೊಸ ಸಿಎಂಗೆ ಸಂಪುಟ ರಚನೆ ದೊಡ್ಡ ಸವಾಲ್‌: ಎಲ್ಲರಿಗೂ 'ಮಣೆ' ಚಾಲೆಂಜ್‌

ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿರುವ ಕಾಂಗ್ರೆಸ್‌ನಿಂದ ಯಾರೇ ಮುಖ್ಯಮಂತ್ರಿಯಾದರೂ ಸಚಿವ ಸಂಪುಟ ರಚನೆ ಎಂಬುದು ಕಬ್ಬಿಣದ ಕಡಲೆಯಾಗಿ ಕಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಮುಖ್ಯ ಕಾರಣ ಸಚಿವ ಸಂಪುಟ ಸೇರಲು ಅರ್ಹತೆ ಹಾಗೂ ಲಾಬಿ ನಡೆಸಲು ಸಜ್ಜಾಗಿರುವ ಕಾಂಗ್ರೆಸ್‌ನ ಘಟಾನುಘಟಿ ನಾಯಕರು.

Karnataka Election Result 2023 Victory of great leaders Cabinet formation is a big challenge for Karnatakas new CM akb

ಬೆಂಗಳೂರು: ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿರುವ ಕಾಂಗ್ರೆಸ್‌ನಿಂದ ಯಾರೇ ಮುಖ್ಯಮಂತ್ರಿಯಾದರೂ ಸಚಿವ ಸಂಪುಟ ರಚನೆ ಎಂಬುದು ಕಬ್ಬಿಣದ ಕಡಲೆಯಾಗಿ ಕಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಮುಖ್ಯ ಕಾರಣ ಸಚಿವ ಸಂಪುಟ ಸೇರಲು ಅರ್ಹತೆ ಹಾಗೂ ಲಾಬಿ ನಡೆಸಲು ಸಜ್ಜಾಗಿರುವ ಕಾಂಗ್ರೆಸ್‌ನ ಘಟಾನುಘಟಿ ನಾಯಕರು. ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿ ಪ್ರಭಾವಶಾಲಿಯಾಗಿದ್ದ ಹಲವರು ಸೇರಿದಂತೆ ಹಲವು ಪ್ರಮುಖ ನಾಯಕರು ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದ್ದಾರೆ. ಅಲ್ಲದೆ, ಹಿರಿತನ ಹಾಗೂ ಅನುಭವ ಇರುವ ಘಟಾನುಘಟಿಗಳು ಸಹ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ, ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಹಾಗೂ ಸೇರ್ಪಡೆಯಾದ ನಂತರ ಅವರನ್ನು ನಿಭಾಯಿಸುವುದು ಹೊಸ ಮುಖ್ಯಮಂತ್ರಿಗೆ ದೊಡ್ಡ ಸವಾಲಾಗಲಿದೆ.

ಏಕೆಂದರೆ, ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮಾಜಗಳಲ್ಲೂ ಅತ್ಯಂತ ಪ್ರಭಾವಶಾಲಿಗಳೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉದಾಹರಣೆಗೆ ಪರಿಶಿಷ್ಟರ ಕೋಟಾದಲ್ಲಿ ಸಚಿವರಾಗ ಬಯಸುವವರಲ್ಲಿ ಡಾ. ಜಿ.ಪರಮೇಶ್ವರ್‌, ಕೆ.ಎಚ್‌. ಮುನಿಯಪ್ಪ, ಎಚ್‌.ಸಿ. ಮಹದೇವಪ್ಪ, ಪ್ರಿಯಾಂಕ ಖರ್ಗೆ ಹಾಗೂ ಆರ್‌.ಬಿ. ತಿಮ್ಮಾಪುರ ಅವರಿದ್ದಾರೆ. ಪರಿಶಿಷ್ಟಪಂಗಡದಲ್ಲಿ ಸತೀಶ್‌ ಜಾರಕಿಹೊಳಿ, ನಾಗೇಂದ್ರ, ತುಕಾರಾಂ, ರಾಜಾ ವೆಂಕಟಪ್ಪ ನಾಯಕ್‌ ಇದ್ದಾರೆ.

ಒಕ್ಕಲಿಗರಲ್ಲಿ ಸಹಜವಾಗಿಯೇ ಡಿ.ಕೆ. ಶಿವಕುಮಾರ್‌, ಟಿ.ಬಿ. ಜಯಚಂದ್ರ, ಎಂ. ಕೃಷ್ಣಪ್ಪ, ಕೃಷ್ಣ ಬೈರೇಗೌಡ, ಚೆಲುವರಾಯಸ್ವಾಮಿ, ನಂಜೇಗೌಡ, ಡಾ. ಸುಧಾಕರ್‌, ಬಾಲಕೃಷ್ಣ, ಶಿವಲಿಂಗೇಗೌಡ ಹಾಗೂ ಟಿ.ಡಿ. ರಾಜೇಗೌಡ ಅವರಿದ್ದಾರೆ. ಲಿಂಗಾಯತರಲ್ಲಿ ಎಂ.ಬಿ. ಪಾಟೀಲ್‌, ಈಶ್ವರ್‌ ಖಂಡ್ರೆ, ಲಕ್ಷ್ಮಣ ಸವದಿ, ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ, ಯಶವಂತರಾಯಗೌಡ ಪಾಟೀಲ್‌, ಶಿವಾನಂದ ಪಾಟೀಲ್‌, ಸಿ.ಎಸ್‌. ನಾಡಗೌಡ, ಸಂಗಮೇಶ್‌, ಬಸವರಾಜ ರಾಯರೆಡ್ಡಿ, ವಿನಯ ಕುಲಕರ್ಣಿ, ಜಿ.ಎಸ್‌. ಪಾಟೀಲ್‌, ಲಕ್ಷ್ಮೇ ಹೆಬ್ಬಾಳಕರ್‌ ಅವರಂತಹ ಪ್ರಭಾವಿಗಳಿದ್ದಾರೆ.

ಕುರುಬರ ಪೈಕಿ ಸಿದ್ದರಾಮಯ್ಯ ಅವರಲ್ಲದೆ, ಎಚ್‌.ವೈ. ಮೇಟಿ, ಬೈರತಿ ಸುರೇಶ್‌, ರಾಘವೇಂದ್ರ ಹಿಟ್ನಾಳ್‌ ಇದ್ದಾರೆ. ರೆಡ್ಡಿಗಳಲ್ಲಿ ರಾಮಲಿಂಗಾರೆಡ್ಡಿ, ರಡ್ಡಿ ಲಿಂಗಾಯತರಲ್ಲಿ ಎಚ್‌.ಕೆ. ಪಾಟೀಲ, ಹಿಂದುಳಿದವರಲ್ಲಿ ಬಿ.ಕೆ. ಹರಿಪ್ರಸಾದ್‌, ಮಧು ಬಂಗಾರಪ್ಪ, ಮಂಕಾಳು ವೈದ್ಯ, ಸತೀಶ್‌ ಸೈಲ್‌, ಸಂತೋಷ್‌ ಲಾಡ್‌, ಅಜಯಸಿಂಗ್‌, ಅಲ್ಪಸಂಖ್ಯಾತರಲ್ಲಿ ಜಮೀರ್‌ ಅಹ್ಮದ್‌, ತನ್ವೀರ್‌ ಸೇಠ್‌, ಯು.ಟಿ. ಖಾದರ್‌, ಎನ್‌.ಎ. ಹ್ಯಾರೀಸ್‌, ಕೆ.ಜೆ. ಜಾಜ್‌ರ್‍ ಅವರಂತಹ ಘಟಾನುಘಟಿಗಳೇ ಇದ್ದಾರೆ. ಇಂತಹ ಘಟಾನುಘಟಿಗಳನ್ನು ಸಂಪುಟಕ್ಕೆ ತೆಗೆದುಕೊಳ್ಳುವುದರ ಜತೆಗೆ ಯುವಕರು ಹಾಗೂ ಮಹಿಳೆಯರಿಗೂ ಅವಕಾಶವನ್ನು ನೀಡಬೇಕು. ಇದನ್ನು ಸಂಭಾಳಿಸುವುದು ಮುಖ್ಯಮಂತ್ರಿಯಾದವರಿಗೆ ದೊಡ್ಡ ತಲೆನೋವಾಗುವುದು ಸಹಜ.

Latest Videos
Follow Us:
Download App:
  • android
  • ios