Karnataka Assembly Election 2023 Result: ಕರುನಾಡ ಮುಡಿ ಜಾರಿದ ಕಮಲ: ಎಲ್ಲೆಡೆ 'ಕೈ' ಎತ್ತಿ ಹಿಡಿದ ಮತದಾರರು
ಡಳಿತ ವಿರೋಧಿ ಅಲೆಯಲ್ಲಿ ಎದ್ದು ಬಂದ ಕಾಂಗ್ರೆಸ್ ಜನಮಾನಸದಲ್ಲಿ ಅಭೂತಪೂರ್ವ ವಿಜಯ ಪತಾಕೆ ಹಾರಿಸಿದ್ದು, ಬಿಜೆಪಿ ಹೀನಾಯ ಸೋಲು ಕಂಡಿದೆ. ಅವಿರತವಾಗಿ ಶ್ರಮ ಹಾಕಿದರೂ ಫಲ ಸಿಗದೆ ಜೆಡಿಎಸ್ ಮಕಾಡೆ ಮಲಗಿದೆ.
ಬೆಂಗಳೂರು: ಆಡಳಿತ ವಿರೋಧಿ ಅಲೆಯಲ್ಲಿ ಎದ್ದು ಬಂದ ಕಾಂಗ್ರೆಸ್ ಜನಮಾನಸದಲ್ಲಿ ಅಭೂತಪೂರ್ವ ವಿಜಯ ಪತಾಕೆ ಹಾರಿಸಿದ್ದು, ಬಿಜೆಪಿ ಹೀನಾಯ ಸೋಲು ಕಂಡಿದೆ. ಅವಿರತವಾಗಿ ಶ್ರಮ ಹಾಕಿದರೂ ಫಲ ಸಿಗದೆ ಜೆಡಿಎಸ್ ಮಕಾಡೆ ಮಲಗಿದೆ. ಇದು ಇಡೀ ದೇಶದ ಗಮನ ಸೆಳೆದಿದ್ದ, ದೇಶದ ಮುಂದಿನ ವಿಧಾನಸಭೆ ಚುನಾವಣೆಗಳು ಹಾಗೂ 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿದ್ದ 16ನೇ ವಿಧಾನಸಭೆ ಚುನಾವಣೆಯ ಫಲಿತಾಂಶದ ಒಟ್ಟಾರೆ ಚಿತ್ರಣ.
ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾದ ರಾಜ್ಯದ ಜನರು ಉತ್ತಮವಾಗಿ ಸ್ಪಂದಿಸಿ ಶೇ. 73.19ರಷ್ಟು ಮತದಾನ ಮಾಡುವ ಮೂಲಕ ದಾಖಲೆ ಮತ ಚಲಾವಣೆಗೆ ಕಾರಣರಾಗಿದ್ದರು. ಶನಿವಾರ ಇದರ ಫಲಿತಾಂಶ ಪ್ರಕಟಗೊಂಡಿದ್ದು, 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 136 ಕ್ಷೇತ್ರದಲ್ಲಿ ಜಯಭೇರಿ ಗಳಿಸಿದೆ. ಈ ಮೂಲಕ ಸ್ಪಷ್ಟಬಹುಮತ ಗಳಿಸಿದೆ. ಬಿಜೆಪಿ 65 ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದ್ದು, ಜೆಡಿಎಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಹಲವು ಕ್ಷೇತ್ರದಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಇತರ ನಾಲ್ವರು ವಿಜಯಶಾಲಿಯಾಗಿದ್ದಾರೆ.
ತುರುಸಿನ ಮತ ಎಣಿಕೆ:
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾದಾಗ ಮೊದಲು ಸೇವಾ ಮತದಾರರ ಮತ ಎಣಿಕೆ ಮಾಡಲಾಯಿತು. ನಂತರ ಮನೆಯಿಂದಲೇ ಮತದಾನ ಮಾಡಿರುವ 94,931 ಮತಗಳ ಎಣಿಕೆ ಮಾಡಲಾಯಿತು. ತದನಂತರ ಇವಿಎಂ ಯಂತ್ರಗಳ ಮತ ಎಣಿಕೆ ನಡೆಸಲಾಯಿತು.
ಘಟಾನುಘಟಿಗಳಿಗೆ ಜಯ:
ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಅತ್ಯಧಿಕ 1,23,270 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಚಿವ ಆರ್. ಅಶೋಕ್ 3ನೇ ಸ್ಥಾನಕ್ಕೆ ಕುಸಿದಿದ್ದು, ಠೇವಣಿ ಕಳೆದುಕೊಂಡಿದ್ದರು. ಗಾಂಧಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ ಅತಿ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ವಿರುದ್ಧ ಕೇವಲ 105 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ಕಾರ್ಯವು 34 ಚುನಾವಣಾ ಜಿಲ್ಲಾ ಕೇಂದ್ರದಲ್ಲಿ 36 ಮತ ಎಣಿಕೆ ಕೇಂದ್ರಗಳಲ್ಲಿ ನಡೆಯಿತು. ಮತ ಎಣಿಕೆಗಾಗಿ 306 ವಿಶಾಲವಾದ ಕೊಠಡಿಗಳ ವ್ಯವಸ್ಥೆ ಮಾಡಿದ್ದು, 4,256 ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಮತ ಎಣಿಕೆ ಕಾರ್ಯದಲ್ಲಿ 224 ರಿಟರ್ನಿಂಗ್ ಅಧಿಕಾರಿಗಳು, 317 ಸಹಾಯಕ ರಿಟರ್ನಿಂಗ್ ಅಧಿಕಾರಿಗಳು ನಿಯೋಜನೆಗೊಂಡಿದ್ದರು. 4256 ಮತ ಎಣಿಕೆ ಮೇಲುಸ್ತುವಾರಿ ಅಧಿಕಾರಿಗಳು, 4256 ಸಹಾಯಕರು ಮತ್ತು 4,256 ಸೂಕ್ಷ್ಮ ವೀಕ್ಷಕರು ಕಾರ್ಯನಿರ್ವಹಿಸಿದ್ದಾರೆ. ಇವರ ಜತೆಗೆ 450 ಹೆಚ್ಚುವರಿ ಸಹಾಯಕ ರಿಟರ್ನಿಂಗ್ ಅಧಿಕಾರಿಗಳು ಸಹ ಕಾರ್ಯನಿರ್ವಹಿಸಿದರು.
ಕೊನೆಗೂ ಕಾಂಗ್ರೆಸ್ ಕಡೆಗೆ ವಾಲಿದ ಲಿಂಗಾಯತರು, ಒಕ್ಕಲಿಗ ಮತಗಳು
ಕಣದಲ್ಲಿದ್ದ 2615 ಅಭ್ಯರ್ಥಿಗಳಲ್ಲಿ 2430 ಅಭ್ಯರ್ಥಿಗಳು ಪುರುಷರು, 184 ಅಭ್ಯರ್ಥಿಗಳು ಮಹಿಳೆಯರು ಮತ್ತು ಒಬ್ಬರು ತೃತೀಯ ಲಿಂಗಿಯಾಗಿದ್ದರು. ಬಿಜೆಪಿಯಿಂದ 224 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದರೆ, ಕಾಂಗ್ರೆಸ್‌ನಿಂದ 223 ಕ್ಷೇತ್ರದಲ್ಲಿ ಹುರಿಯಾಳುಗಳಿದ್ದರು. ಜೆಡಿಎಸ್‌ನಿಂದ 209 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಎಎಪಿಯಿಂದ 209, ಸಿಪಿಎಂನಿಂದ 4, ಬಿಎಸ್‌ಪಿಯಿಂದ 133, ಎನ್‌ಪಿಪಿ 2 ಅಭ್ಯರ್ಥಿಗಳು ಕಣದಲ್ಲಿದ್ದರು. ನೊಂದಾಯಿತ ಮಾನ್ಯತೆ ಪಡೆಯದ ಪಕ್ಷದಿಂದ 254 ಮತ್ತು ಪಕ್ಷೇತರರು 918 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬುಧವಾರ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಿತು. ಶನಿವಾರ ಮಧ್ಯಾಹ್ನದ ವೇಳೆಗೆ ಸ್ಪಷ್ಟಚಿತ್ರಣ ಲಭ್ಯವಾಯಿತಾದರೂ ಜಯನಗರ ಕ್ಷೇತ್ರದಲ್ಲಿ ಮಾತ್ರ ನಾಲ್ಕು ಬಾರಿ ಮರು ಮತ ಎಣಿಕೆ ಮಾಡಿದ್ದರಿಂದ ತಡವಾಗಿ ಫಲಿತಾಂಶ ಪ್ರಕಟಿಸಲಾಯಿತು.
ರಾಜ್ಯದಲ್ಲಿ 5.30 ಕೋಟಿ ಮತದಾರರು ಮತದಾನಕ್ಕೆ ಅರ್ಹರಿದ್ದರು. ಈ ಪೈಕಿ 3.88 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. 1.96 ಕೋಟಿ ಪುರುಷರು, 1.91 ಕೋಟಿ ಮಹಿಳೆಯರು ಮತ್ತು 1037 ಇತರರು ಮತದಾನ ಮಾಡಿದ್ದರು. ಕಾಂಗ್ರೆಸ್‌ಗೆ ಶೇ.42.9ರಷ್ಟುಮಂದಿ ಮತಚಲಾಯಿಸಿದ್ದಾರೆ. ಒಟ್ಟು 1.67 ಕೋಟಿಗಿಂತ ಹೆಚ್ಚು ಮತದಾರರು ಕಾಂಗ್ರೆಸ್‌ಗೆ ಮತದಾನ ಮಾಡಿದ್ದಾರೆ. ಬಿಜೆಪಿಗೆ ಶೇ.36ರಷ್ಟುಮತದಾನವಾಗಿದೆ. ಒಟ್ಟು 1.40 ಕೋಟಿಗೂ ಹೆಚ್ಚು ಮತದಾರರು ಮತ ಚಲಾಯಿಸಿದ್ದಾರೆ. ಇನ್ನು, ಜೆಡಿಎಸ್‌ಗೆ ಶೇ.13.3ರಷ್ಟುಮತದಾನವಾಗಿದ್ದು, 52.05 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ನೋಟಾವನ್ನು 2.69 ಲಕ್ಷ ಮತದಾರರು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗವು ಹೇಳಿದೆ.