Prajadhwani yatre: 17ರಂದು ಗೋಕಾಕನಲ್ಲಿ ಪ್ರಜಾಧ್ವನಿ ಸಮಾವೇಶಕ್ಕೆ ಭರ್ಜರಿ ಸಿದ್ಧತೆ

ಮಾ.17ರಂದು ಗೋಕಾಕನಲ್ಲಿ ಪ್ರಜಾಧ್ವನಿ ಸಮಾವೇಶ ಆಯೋಜಿಸಲಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್‌ ಹಲವು ಗಣ್ಯರು ಆಗಮಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

karnataka election prajadhwaniyatre at gokak on march 17 says satish jarkiholi

ಗೋಕಾಕ (ಮಾ.12) : ಮಾ.17ರಂದು ಗೋಕಾಕನಲ್ಲಿ ಪ್ರಜಾಧ್ವನಿ ಸಮಾವೇಶ ಆಯೋಜಿಸಲಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್‌ ಹಲವು ಗಣ್ಯರು ಆಗಮಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 1ನೇ ಹಂತದಲ್ಲಿ ಪ್ರಜಾಧ್ವನಿ ಯಾತ್ರೆ ಯಶಸ್ಸಿಯಾಗಿ ನಡೆಸಲಾಗಿದ್ದು, 2ನೇ ಹಂತದ ಯಾತ್ರೆಯನ್ನು ವಿಧಾನಸಭಾ ಕ್ಷೇತ್ರವಾರು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಧಾರ್ಮಿಕ ಕಾರ್ಯಗಳಲ್ಲಿ ರಾಜಕೀಯ ಮಾಡಬಾರದು: ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ಪ್ರಜಾಧ್ವನಿ ಯಾತ್ರೆಯಲ್ಲಿ ಘೋಷಿಸಿದ ಯೋಜನೆಗಳನ್ನು ಮನೆ ಮನೆಗೆ ತಿಳಿಸಲಾಗುವುದು, ಇನ್ನು ಅನೇಕ ಯೋಜನೆಗಳನ್ನು ಘೋಷಿಸಲಾಗುವುದು. ಇದರಲ್ಲಿ ಜಿಲ್ಲಾವಾರು ಯೋಜನೆಗಳು ಹಂಚಿಕೆಯಾಗಿವೆ. ಜನ ಆಶೀರ್ವಾದ ಮಾಡಿದರೆ ಈ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತೇವೆ ಎಂದರು.

ಚುನಾವಣೆ ಬಂದಾಗ ಪಕ್ಷಾಂತರ ಪರ್ವ ಸಹಜವಾಗಿದೆ. ಬಿಜೆಪಿ ಆಡಳಿತ ಅವಧಿಯಲ್ಲಿ ಬೆಲೆ ಏರಿಕೆಯಿಂದ ಜನರು ತತ್ತರಿಸಿಹೋಗಿದ್ದಾರೆ. ಹೀಗಾಗಿ ಬಿಜೆಪಿ ತೊರೆದು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ. ಮತದಾರರು ಸಹ ಕಾಂಗ್ರೆಸ್‌ ಅಧಿಕಾರ ಬಯಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಆಡಳಿತದಿಂದ ರಾಜ್ಯದ ಜನತೆ ರೋಸಿಹೋಗಿದ್ದಾರೆ ಎಂದರು.

ಎಲ್ಲ ಕಡೆಯಲ್ಲಿ ಗೊಂದಲಗಳಿವೆ. ಆದರೆ, ಟಿಕೆಟ್‌ ಫೈನಲ್‌ ಆಗುವುದು ಒಬ್ಬರಿಗೆ ಮಾತ್ರ. ನಾಯಕರ ಭವಿಷ್ಯ ಮತದಾರರ ಕೈಯಲ್ಲಿದೆ. ರಮೇಶ ಜಾರಕಿಹೊಳಿಯವರು ಆದರೂ ಅಷ್ಟೆ. ಪ್ರಜಾಧ್ವನಿಯಾತ್ರೆಯಲ್ಲಿ ಬಿಜೆಪಿ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಜನತೆ ಮುಂದೆ ಇಡಲು ಸಮಾವೇಶ ನಡೆಸಲಾಗುತ್ತಿದೆ ಎಂದರು.

ಕಾಂಗ್ರೆಸ್‌ ಮುಖಂಡ ಅಶೋಕ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ನೆಲೆಯೂರಿದೆ ಎಂದು ಬಿಜೆಪಿಗರು ಭ್ರಮೆಯಲ್ಲಿದ್ದಾರೆ. ಗೋಕಾಕ ಕ್ಷೇತ್ರದ ಬದಲಾವಣೆ ಜನರು ಬಯಸಿದ್ದಾರೆ. ಶಾಸಕ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಕಾರ್ಯಕರ್ತರನ್ನು ಬರಮಾಡಿಕೊಳ್ಳಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಕಾರ್ಯಕರ್ತರನ್ನು ಸತೀಶ ಜಾರಕಿಹೊಳಿ ಬರಮಾಡಿಕೊಂಡರು.

ಗೋಷ್ಠಿಯಲ್ಲಿ ವಿವೇಕ್‌ ಜತ್ತಿ, ಅಶೋಕ ಪೂಜಾರಿ, ಚಂದ್ರಶೇಖರ ಕೊಣ್ಣೂರ, ಲಖಪ್ಪ ಕಳಸನವರ ಹಾಗೂ ಇತರರು ಇದ್ದರು.

ಸತೀಶ್‌ ಜಾರಕಿಹೊಳಿ ಗೆಲುವಿನ ಓಟಕ್ಕೆ ಬಿಜೆಪಿ ಪಡೆ ಬ್ರೇಕ್‌ ಹಾಕುತ್ತಾ?

ಮೂಡಲಗಿಯಲ್ಲಿ 15ರ ಬದಲಾಗಿ 17ಕ್ಕೆ ಪ್ರಜಾಧ್ವನಿ

ಮೂಡಲಗಿ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್‌ ಧ್ರುವನಾರಾಯಣ ಅವರ ನಿಧನದ ಹಿನ್ನೆಲೆಯಲ್ಲಿ ಮಾ.15ರಂದು ಮೂಡಲಗಿಯಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮವನ್ನು ರದ್ದು ಮಾಡಿ ಮಾ.17ಕ್ಕೆ ಮುಂದೂಡಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಅರವಿಂದ ದಳವಾಯಿ ತಿಳಿಸಿದ್ದಾರೆ. ಮಾ.15ರಂದು ಮೂಡಲಗಿಯ ಶ್ರೀ ಬಸವರಂಗ ಮಂಟಪದ ಮೈದಾನದಲ್ಲಿ ವೇದಿಕೆ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದರು. ಆದರೆ ಧ್ರುವನಾರಾಯಣ ಅವರ ಅಕಾಲಿಕ ನಿಧನದಿಂದಾಗಿ ಕಾರ್ಯಕ್ರಮವನ್ನು ಮಾ.15ರ ಬದಲು 17ಕ್ಕೆ ಮುಂದೂಡಲಾಗಿದೆ ಮತ್ತು ಸಿದ್ದರಾಮಯ್ಯ ಅವರು ಮಾ.17ರಂದು ಮೂಡಲಗಿಗೆ ಆಗಮಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios