Asianet Suvarna News Asianet Suvarna News

ಧಾರವಾಡದಿಂದಲೇ ವಿನಯ್‌ ಕಣಕ್ಕೆ, ಹುಸಿಯಾಯ್ತು ಸಿಎಂ ವಿರುದ್ಧ ಸ್ಪರ್ಧೆ

  • ಧಾರವಾಡದಿಂದಲೇ ವಿನಯ್‌ ಸ್ಪರ್ಧೆ, ರಂಗೇರಲಿದೆ ಕಣ
  • ಶಿಗ್ಗಾಂವ್‌ ಕ್ಷೇತ್ರದಲ್ಲಿ ಹುಸಿಯಾದ ಸಿಎಂ ವಿರುದ್ಧ ಸ್ಪರ್ಧೆ
  • ಧಾರವಾಡ ಟಿಕೆಟ್‌ ಕೇಳಿದ್ದ ತಮಟಗಾರ ನಡೆ ಏನು?
  • ಚುನಾವಣೆಯಲ್ಲಿ ಮತ್ತೇ ವಿನಯ ವರ್ಸಸ್‌ ಅಮೃತ್‌ ದೇಸಾಯಿ ಸಾಧ್ಯತೆ
Karnataka election news Vinaya Kulkarni will contest from Dharwad constituency rav
Author
First Published Apr 7, 2023, 8:07 AM IST

ಧಾರವಾಡ (ಏ.7) : ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಗ್ರಾಮೀಣ ಅಭ್ಯರ್ಥಿಯ ಹೆಸರನ್ನು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ 2ನೇ ಪಟ್ಟಿಯಲ್ಲಿ ಘೋಷಿಸಿದೆ. ಧಾರವಾಡಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಟಿಕೆಟ್‌ ಘೋಷಣೆ ಮಾಡಿದ್ದು ಕ್ಷೇತ್ರಗಳಲ್ಲಿ ಈಗ ಭಾರಿ ಸಂಚಲನ ಮೂಡಿಸಿದೆ.

ಯೋಗೀಶಗೌಡ ಕೊಲೆ ಪ್ರಕರಣ(Yogish gowda murder case)ದಲ್ಲಿ ವಿನಯ ಕುಲಕರ್ಣಿ(Vinay kulkarni) ಅವರು ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj bommai) ವಿರುದ್ಧ ಶಿಗ್ಗಾಂವ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಕಾಂಗ್ರೆಸ್‌ ಆರಂಭದಲ್ಲಿ ಚಿಂತನೆ ನಡೆಸಿತ್ತು. ಈ ಕುರಿತು ಆಗ ವಿನಯ ಅವರೊಂದಿಗೂ ಚರ್ಚೆ ಮಾಡಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ವಿನಯ ಅವರಿಗೆ ತಮ್ಮದೇ ಕ್ಷೇತ್ರವಾದ ಧಾರವಾಡಕ್ಕೆ ಟಿಕೆಟ್‌ ಘೋಷಿಸಿ ಮಹತ್ವದ ನಿರ್ಧಾರವನ್ನು ಗುರುವಾರ ಪ್ರಕಟಿಸಿದೆ.

ಬಿಜೆಪಿ ಮುಖಂಡ Yogesh Gowda ಹತ್ಯೆ ಪ್ರಕರಣ, ಬಿರಾದಾರ್‌ ಮಾಫಿ ಸಾಕ್ಷಿಗೆ ಹೈಕೋರ್ಟ್ ಒಪ್ಪಿಗೆ

ಅಭಿಮಾನಿಗಳ ಸಾಥ್‌

ವಿನಯ ಅವರು ಧಾರವಾಡ ಪ್ರವೇಶಿಸದೇ ಇದ್ದರೂ ಅವರನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಕರ್ತವ್ಯ. ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆಂದು ಇತ್ತೀಚೆಗೆ ವಿನಯ ಅವರ ಮನೆ ಎದುರು ಕಾಂಗ್ರೆಸ್‌ ಹೈಕಮಾಂಡ್‌ಗೆ ಅಭಿಮಾನಿಗಳು ರಕ್ತದಿಂದ ಪತ್ರ ಬರೆದು ಆಗ್ರಹಿಸಿದ್ದರು.

ಅಲ್ಲದೇ ವಿನಯ ಪತ್ನಿ ಶಿವಲೀಲಾ ಸಹ ವಿನಯ ಕುಲಕರ್ಣಿ ಅವರಿಗೆ ಧಾರವಾಡದಿಂದಲೇ ಟಿಕೆಟ್‌ ನೀಡುತ್ತಾರೆ. ಯಾವುದೇ ಕಾರಣಕ್ಕೂ ಶಿಗ್ಗಾಂವ ಕ್ಷೇತ್ರಕ್ಕಿಲ್ಲ ಎಂದು ಈ ಮೊದಲೇ ಸ್ಪಷ್ಪಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವಿನಯ ಅವರಿಗೆ ಟಿಕೆಟ್‌ ಸಿಕ್ಕ ಹಿನ್ನೆಲೆಯಲ್ಲಿ ಕ್ಷೇತ್ರದ ಅವರ ಅಭಿಮಾನಿಗಳು ವಿಜಯೋತ್ಸವ ಸಹ ಮಾಡಿದ್ದಾರೆ.

ತಮಟಗಾರ ನಡೆ ಏನು?

ಈ ಮಧ್ಯೆ ಇಸ್ಮಾಯಿಲ್‌ ತಮಟಗಾರ ಧಾರವಾಡ ಗ್ರಾಮೀಣ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಇದೀಗ ಅವರಿಗೆ ಕೈ ಟಿಕೆಟ್‌ ತಪ್ಪಿದ್ದು ಅವರ ಮುಂದಿನ ನಿರ್ಧಾರ ಹಾಗೂ ನಡೆ ಕುತೂಹಲವಾಗಿದೆ.

ತಮಟಗಾರ ಜೆಡಿಎಸ್‌ನತ್ತ ಮುಖ ಮಾಡುತ್ತಾರಾ ಅಥವಾ ಎಐಎಂಐಎಂ ಪಕ್ಷದ ಬೆನ್ನು ಬೀಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ತಮಟಗಾರ ಮಾತ್ರ ಈ ಬಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದ್ದು, ಅಲ್ಪಸಂಖ್ಯಾತರ ಮತಗಳನ್ನು ಅದರಲ್ಲೂ ಮುಸ್ಲಿಂ ಮತ ಪಡೆಯಲಿರುವ ತಮಟಗಾರ ಕಾಂಗ್ರೆಸ್ಸಿನ ವಿನಯ ಕುಲಕರ್ಣಿಗೆ ಕಂಟಕ ಆಗಬಹುದೆಂಬ ಚರ್ಚೆ ಕ್ಷೇತ್ರದಲ್ಲಿ ಜೋರಾಗಿದೆ..

ದೇಸಾಯಿಗೆ ಟಾಂಗ್‌...

ಇನ್ನು, ವಿನಯ ಕುಲಕರ್ಣಿ ಅವರಿಗೆ ಧಾರವಾಡ ಕ್ಷೇತ್ರದಿಂದ ಟಿಕೆಟ್‌ ಘೋಷಣೆ ಆಗುವುದೇ ತಡ ವಿನಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಅಮೃತ ದೇಸಾಯಿ(MLA Amrit desai)ಗೆ ಟಾಂಗ್‌ ನೀಡಿದ್ದಾರೆ. ಈ ಮೊದಲು ಅಮೃತ ದೇಸಾಯಿ ಸಮಾರಂಭವೊಂದರಲ್ಲಿ ‘ಎಲ್ಲೋ ಕೂತು ಬರತೇನಿ, ಬರತೇನಿ ಅಂತಿಯಾ ಧಮ್‌ ಇದ್ರೆ ಬಾರೋ...’ ಎಂದು ವಿನಯ ಕುಲಕರ್ಣಿಗೆ ಬಹಿರಂಗ ಸವಾಲು ಹಾಕಿದ್ದರು. ಇದೀಗ ವಿನಯ ಅವರ ಅಭಿಮಾನಿಗಳು ‘ಹಾಲು ಕುಡಿದ ಗೋಪಾಲಕೃಷ್ಣನನ್ನು ಬಾರೋ ಬಾರೋ ಎಂದು ಕರೆದಿದ್ದಿ. ನಮ್ಮ ಧಣಿ ಚುನಾವಣಾ ಕುರುಕ್ಷೇತ್ರಕ್ಕೆ ಬಂದಾಯಿತು’ ಎಂದೆಲ್ಲ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೆಳಗಾವಿ ರಾಜಕಾರಣ ಹುಬ್ಬಳ್ಳಿಗೆ ಶಿಫ್ಟ್: ರಹಸ್ಯ ಸಭೆಯಲ್ಲಿ ನಡೆದಿದ್ದೇನು?

ಒಟ್ಟಾರೆ, ಇಷ್ಟುದಿನ ಸಪ್ಪೆಯಾಗಿದ್ದ ಧಾರವಾಡ ಗ್ರಾಮೀಣ ಕ್ಷೇತ್ರ ಇದೀಗ ವಿನಯ ಅವರಿಗೆ ಟಿಕೆಟ್‌ ಘೋಷಣೆಯಾದ ಹಿನ್ನೆಲೆಯಲ್ಲಿ ತುಸು ರೋಚಕತೆ ಪಡೆದುಕೊಂಡಿದೆ. ಜೊತೆಗೆ ವಿನಯ ಅವರಿಗೆ ಟಿಕೆಟ್‌ ನೀಡಿದ್ದರಿಂದ ಧಾರವಾಡ ಪ್ರವೇಶಕ್ಕೆ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಜಾಸ್ತಿ ಇವೆ. ಅಲ್ಲಿಯವರೆಗೂ ಧಾರವಾಡ ಗಡಿ ಭಾಗದ ಕಿತ್ತೂರು, ಸವದತ್ತಿ, ದೊಡವಾಡದಲ್ಲಿ ಕುಳಿತು ಚುನಾವಣೆ ಎದುರಿಸುವ ತಂತ್ರವನ್ನು ವಿನಯ ಹಾಗೂ ಅವರ ಬಳಗ ಹೆಣೆಯಲಿದೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios