ಕಾಂಗ್ರೆಸ್‌ ರಾಜ್ಯದ 124 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಮೊದಲ ಪಟ್ಟಿಬಿಡುಗಡೆ ಮಾಡಿದೆ. ಆದರೆ, ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಕೇವಲ ಒಂದೇ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಖೈರುಗೊಳಿಸಿದೆ. ಉಳಿದ ಆರು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಭ್ಯರ್ಥಿ ಆಯ್ಕೆ ಪಕ್ಷಕ್ಕೆ ತಲೆ ನೋವಾದಂತಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ (ಮಾ.26) : ಕಾಂಗ್ರೆಸ್‌ ರಾಜ್ಯದ 124 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಮೊದಲ ಪಟ್ಟಿಬಿಡುಗಡೆ ಮಾಡಿದೆ. ಆದರೆ, ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಕೇವಲ ಒಂದೇ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಖೈರುಗೊಳಿಸಿದೆ. ಉಳಿದ ಆರು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಭ್ಯರ್ಥಿ ಆಯ್ಕೆ ಪಕ್ಷಕ್ಕೆ ತಲೆ ನೋವಾದಂತಾಗಿದೆ.

ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರಕ್ಕೆ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ(MLA Prasad abbaiah) ಅವರ ಹೆಸರನ್ನು ಮಾತ್ರ ಅಖೈರುಗೊಳಿಸಲಾಗಿದೆ. ಕುಂದಗೋಳ ಕ್ಷೇತ್ರ(Kundagola assembly constituency)ದಲ್ಲಿ ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ(Kusumavati shivalli)ಯೇ ಶಾಸಕಿಯಾಗಿದ್ದರೂ ಅಲ್ಲಿ ಶಿವಳ್ಳಿಗೆ ಕೊಡಬಾರದೆಂದು ಒಂದು ಬಣ ಪಟ್ಟು ಹಿಡಿದಿದೆ. ಇಲ್ಲಿ ಕುಸುಮಾವತಿ ಸೇರಿದಂತೆ ಬರೋಬ್ಬರಿ 16 ಜನ ಆಕಾಂಕ್ಷಿಗಳಿದ್ದಾರೆ. ಇದರಲ್ಲಿ ಶಾಸಕಿ ಶಿವಳ್ಳಿ ಮೈದುನ ಮುತ್ತಣ್ಣ ಶಿವಳ್ಳಿ ಕೂಡ ಆಕಾಂಕ್ಷಿಯಾಗಿದ್ದಾರೆ. ಕುಸುಮಾವತಿಗೆ ಟಿಕೆಟ್‌ ಕೊಡದಿದ್ದರೆ ನನಗೆ ಕೊಡಿ ಎಂಬ ಬೇಡಿಕೆ ಮುತ್ತಣ್ಣ ಇಟ್ಟಿದ್ದಾರೆ. ಹೇಗಾದರೂ ಮಾಡಿ ಕುಟುಂಬದಲ್ಲೇ ಟಿಕೆಟ್‌ ಉಳಿಸಿಕೊಳ್ಳಬೇಕೆಂದು ತಂತ್ರಗಾರಿಕೆ ಶಿವಳ್ಳಿ ಕುಟುಂಬ ನಡೆಸುತ್ತಿದೆ.

ಧಾರವಾಡಕ್ಕೆ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಇದಕ್ಕೆ ನಾಲ್ಕಾರು ಜನ ಬೆಂಬಲವಾಗಿ ನಿಂತಿದ್ದಾರೆ. ಇನ್ನುಳಿದಂತೆ ಉಳಿದ 10 ಜನ ಆಕಾಂಕ್ಷಿಗಳು ಸೇರಿಕೊಂಡು ಸಿಂಡಿಕೇಟ್‌ ಮಾಡಿಕೊಂಡಿದ್ದಾರೆ. ಈ 10 ಜನರು ನಮ್ಮಲ್ಲಿ ಯಾರಾದರೊಬ್ಬರಿಗೆ ಕೊಡಿ. ಆದರೆ ಯಾವುದೇ ಕಾರಣಕ್ಕೂ ಶಿವಳ್ಳಿ ಕುಟುಂಬಕ್ಕೆ ಕೊಡುವಂತಿಲ್ಲ. ಕೊಟ್ಟರೆ ಬಂಡಾಯ ಖಚಿತ ಎಂದು ಈಗಾಗಲೇ ಎಚ್ಚರಿಕೆಯನ್ನೂ ನೀಡಿರುವುದುಂಟು. ಈ ಭಿನ್ನಮತದಿಂದಾಗಿಯೇ ಈಗಾಗಲೇ ಮೂರು ಬಾರಿ ಪ್ರಜಾಧ್ವನಿ ಕಾರ್ಯಕ್ರಮ ಕೂಡ ಮುಂದೂಡಲ್ಪಟ್ಟಿದೆ. ಇದೀಗ ಕೆಪಿಸಿಸಿಯು ಎರಡು ಬಣಕ್ಕೆ ಬಿಟ್ಟು ಹೊರಗಿನವರನ್ನೇ ತಂದರೆ ಹೇಗೆ ಎಂದು ಕೂಡ ಚಿಂತನೆ ನಡೆಸುತ್ತಿದೆ. ಇದರಿಂದಾಗಿ ಹಾನಗಲ್‌ ಮೂಲದ ಪ್ರಕಾಶಗೌಡ ಪಾಟೀಲ ಹೆಸರು ಕೂಡ ಇತ್ತೀಚಿಗೆ ಮುಂಚೂಣಿಗೆ ಬರುತ್ತಿದೆ.

ವಲಸೆ- ಮೂಲ:

ಇನ್ನೂ ಪಶ್ಚಿಮ ಕ್ಷೇತ್ರದಲ್ಲಿ ಎಂಟು ಜನ ಆಕಾಂಕ್ಷಿಗಳಿದ್ದಾರೆ. ಆದರೆ, ಇತ್ತೀಚಿಗೆ ಮೋಹನ ಲಿಂಬಿಕಾಯಿ ಬಿಜೆಪಿಯಿಂದ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಲಿಂಬಿಕಾಯಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಂತೆ ಇಲ್ಲಿನ ಚಿತ್ರಣವೇ ಬದಲಾಗಿದೆ. ಲಿಂಬಿಕಾಯಿ ಕೂಡ ಈ ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವುದರಿಂದ ಎಲ್ಲಿ ಅವರಿಗೆ ಟಿಕೆಟ್‌ ಕೊಡುತ್ತದೆಯೋ ಎಂಬ ಆತಂಕ ಆಕಾಂಕ್ಷಿಗಳದ್ದು. ಹೀಗಾಗಿ ಲಿಂಬಿಕಾಯಿ ಸೇರ್ಪಡೆ ವಿರುದ್ಧ ಈಗಲೇ ಅಸಮಾಧಾನ ವ್ಯಕ್ತವಾಗುತ್ತಿದೆ. ಲಿಂಬಿಕಾಯಿ ಸೇರ್ಪಡೆಗೊಳಿಸುವ ಮುನ್ನ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ವಲಸೆ ಬಂದವರಿಗೆ ಟಿಕೆಟ್‌ ಕೊಡುವುದು ಬೇಡ. ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್‌ ಕೊಡಬೇಕು ಎಂಬ ಬೇಡಿಕೆಯನ್ನು ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ ಅವರೇ ಇಟ್ಟಿದ್ದಾರೆ. ಒಂದು ವೇಳೆ ಇಲ್ಲಿ ಲಿಂಬಿಕಾಯಿಗೆ ಟಿಕೆಟ್‌ ಕೊಟ್ಟರೆ ಬಂಡಾಯ ಏಳುವುದಂತೂ ಖಚಿತ ಎಂಬ ಮುನ್ಸೂಚನೆಯನ್ನು ನೀಡಿರುವುದುಂಟು. ಸೆಂಟ್ರಲ್‌ ಕ್ಷೇತ್ರದಲ್ಲೂ ಇದೇ ಪರಿಸ್ಥಿತಿ. ಇಲ್ಲೂ ಎಂಟ್ಹತ್ತು ಜನ ಆಕಾಂಕ್ಷಿಗಳಿದ್ದು, ಮುಸ್ಲಿಂ ಸಮುದಾಯ ಇದೀಗ ನಮಗೆ ಸೆಂಟ್ರಲ್‌ ಕ್ಷೇತ್ರದಲ್ಲಿ ಟಿಕೆಟ ಕೊಡಿ ಎಂದು ಬೆನ್ನು ಬಿದ್ದಿದೆ. ಯಾರಿಗೆ ಟಿಕೆಟ್‌ ಕೊಟ್ಟರೂ ಮತ್ತೊಬ್ಬರು ಸಿಟ್ಟಾಗುವುದು ಗ್ಯಾರಂಟಿ.

ಹೈವೋಲ್ಟೇಜ್‌ ಕ್ಷೇತ್ರ:

ಜಿಲ್ಲೆಯಲ್ಲೇ ಅತ್ಯಂತ ಹೈವೋಲ್ಟೇಜ್‌ ಕ್ಷೇತ್ರವೆಂದರೆ ಅದು ಕಲಘಟಗಿ(Kalaghatagi assembly constituency). ಇಲ್ಲಿ ಮಾಜಿ ಸಚಿವ ಸಂತೋಷ ಲಾಡ್‌(Santosh lad)ಗೆ ಕೊಟ್ಟರೆ, ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ಬಂಡಾಯ ಏಳುವುದು ಖಚಿತ. ಛಬ್ಬಿ ಕೊಟ್ಟರೆ, ಲಾಡ್‌ ಆಟ ಆಡದೇ ಇರಲಾರರು. ಇನ್ನು ಇವರಿಬ್ಬರ ನಡುವೆ ಬಂಗಾರೇಶ ಹಿರೇಮಠ ಕೂಡ ತಾವೂ ಆಕಾಂಕ್ಷಿ ಎಂದುಕೊಂಡು ಪ್ರಚಾರವನ್ನೂ ಶುರು ಹಚ್ಚಿಕೊಂಡಿದ್ದಾರೆ. ಛಬ್ಬಿ, ಲಾಡ್‌ ಇವರಲ್ಲಿ ಒಬ್ಬರನ್ನು ಹೇಗೆ ಸಮಾಧಾನ ಪಡಿಸುವುದು ಎಂಬುದು ತಿಳಿಯದೇ ಹೈಕಮಾಂಡ್‌ ಕಂಗಾಲಾಗಿದೆ.

ಹೀಗಾಗಿ ಉಳಿದ ಆರು ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಅಖೈರುಗೊಳಿಸುವ ಗೋಜಿಗೆ ಹೋಗಿಲ್ಲ. ಈಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಹೆಸರು ಘೋಷಿಸಿಬಿಟ್ಟರೆ ಜೇನಿನಗೂಡಿಗೆ ಕೈ ಹಾಕಿದಂತೆ ಆಗುತ್ತದೆ. ಭಿನ್ನಮತ ಸ್ಫೋಟಗೊಂಡು ಟಿಕೆಟ್‌ ವಂಚಿತರು ಬೇರೆ ಬೇರೆ ಪಕ್ಷಗಳತ್ತ ಹೋಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಕೆಲವರು ಬೇರೆ ಪಕ್ಷಗಳಿಗೆ ಹೋಗಿ ಟಿಕೆಟ್‌ ಪಡೆಯದಿದ್ದರೂ ಪಕ್ಷದಲ್ಲೇ ಉಳಿದು ಒಳಹೊಡೆತ ಕೊಡುವ ಸಾಧ್ಯತೆಯೂ ಇದೆ. ಹೀಗಾಗಿ, ಈಗಲೇ ಟಿಕೆಟ್‌ ಘೋಷಣೆ ಬೇಡ. ಇನ್ನು ಸ್ವಲ್ಪ ದಿನ ಕಾಯ್ದು ನೋಡೋಣ ಎಂಬ ನಿರ್ಧಾರಕ್ಕೆ ಕೆಪಿಸಿಸಿ ಬಂದಿದೆ.

ಹುಬ್ಬಳ್ಳಿ ಅತಿರಥರ ಅಖಾಡ: ಬಿಜೆಪಿ ಭದ್ರಕೋಟೆಯಲ್ಲಿ ಕಮಾಲ್ ಮಾಡುತ್ತಾ ಕಾಂಗ್ರೆಸ್..?

ಒಟ್ಟಿನಲ್ಲಿ ಆರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಖೈರುಗೊಳಿಸುವುದು ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿರುವುದಂತೂ ಸತ್ಯ.

ಗ್ರಾಮೀಣ ಕ್ಷೇತ್ರಕ್ಕೆ ಯಾರು?

ಇನ್ನೂ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ವಿನಯ ಕುಲಕರ್ಣಿ(Vina Kulkarni) ಪ್ರಯತ್ನ ನಡೆಸಿದ್ದಾರೆ. ಆದರೆ ವಿನಯ್‌ ಅವರನ್ನು ಹಾವೇರಿ ಜಿಲ್ಲೆ ಶಿಗ್ಗಾಂವಿ- ಸವಣೂರು ಕ್ಷೇತ್ರಕ್ಕೆ ನಿಲ್ಲಿಸುವ ಯೋಚನೆ ಪಕ್ಷದ್ದು. ಜತೆಗೆ ಧಾರವಾಡ ಜಿಲ್ಲೆಗೆ ವಿನಯ್‌ ಪ್ರವೇಶಿಸುವಂತಿಲ್ಲ. ಹೀಗಾಗಿ ಇವರಿಗೆ ಇಲ್ಲಿ ಟಿಕೆಟ್‌ ಕೊಡುವುದು ಡೌಟು. ಒಂದು ವೇಳೆ ಶಿಗ್ಗಾಂವಿ- ಸವಣೂರಿಗೆ ವಿನಯ್‌ಗೆ ಟಿಕೆಟ್‌ ಕೊಟ್ಟರೆ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿ ಇಸ್ಮಾಯಿಲ್‌ ತಮಟಗಾರಗೆ ಟಿಕೆಟ್‌ ಕೊಡುವ ಸಾಧ್ಯತೆ ಇದೆ. ಇಲ್ಲಿ ವಿನಯ್‌ಗೆ ಟಿಕೆಟ್‌ ಕೊಟ್ಟರೆ ಶಿಗ್ಗಾಂವಿ- ಸವಣೂರಿಗೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ಕೊಡಬೇಕಾಗುತ್ತದೆ. ಹೀಗಾಗಿ, ಎಲ್ಲಿ ಯಾರಿಗೆ ಕೊಟ್ಟರೆ ಉತ್ತಮ ಎಂಬುದನ್ನು ಅಳೆದು ತೂಗಿ ನಿರ್ಧರಿಸಲು ತೀರ್ಮಾನಿಸಲಾಗಿದೆ.