ಕರ್ನಾಟಕದ 3ನೇ ಎಲೆಕ್ಟ್ರಾನಿಕ್‌ ಕ್ಲಸ್ಟರ್‌ಗೆ ಅನುಮೋದನೆ, ಬೇಲೂರ ಬಳಿ 88 ಎಕರೆಯಲ್ಲಿ ಸ್ಥಾಪನೆ, 136 ಕೋಟಿ ವೆಚ್ಚ: ಕೇಂದ್ರ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ 

ನವದೆಹಲಿ(ಮಾ.25): ಕರ್ನಾಟಕದಲ್ಲಿ 3ನೇ ಎಲೆಕ್ಟ್ರಾನಿಕ್‌ ಉತ್ಪಾದನಾ ಕ್ಲಸ್ಟರ್‌ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಕೇಂದ್ರ ಧಾರವಾಡ ಬಳಿ ಸ್ಥಾಪನೆ ಆಗಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ ಘೋಷಿಸಿದ್ದಾರೆ.

ಟ್ವೀಟರ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿರುವ ರಾಜೀವ್‌, ‘ಹುಬ್ಬಳ್ಳಿ-ಧಾರವಾಡದ ಕೋಟೂರ ಹಾಗು ಬೇಲೂರ ಗ್ರಾಮಗಳ ನಡುವೆ ಕ್ಲಸ್ಟರ್‌ ಸ್ಥಾಪನೆ ಆಗಲಿದ್ದು, 88.48 ಎಕರೆ ವ್ಯಾಪ್ತಿಯಲ್ಲಿ ತಲೆಯೆತ್ತಲಿದೆ. 136.02 ಕೋಟಿ ರು. ವೆಚ್ಚ ತಗುಲಲಿದೆ. ಇದು ಎಲೆಕ್ಟ್ರಾನಿಕ್ಸ್‌ ವಲಯದಲ್ಲಿನ ಕರ್ನಾಟಕದ ನಾಯಕತ್ವ ವಿಸ್ತರಣೆಗೆ ನಾಂದಿ ಹಾಡಲಿದೆ’ ಎಂದು ಹರ್ಷಿಸಿದ್ದಾರೆ.

ಕೇಂದ್ರ ಸರ್ಕಾರಿ ನೌಕರರು,ಪಿಂಚಣಿದಾರರಿಗೆ ಬಂಪರ್ ಗಿಫ್ಟ್, ತುಟ್ಟಿಭತ್ಯೆ ಶೇ. 4 ರಿಂದ 42ಕ್ಕೆ ಏರಿಕೆ!

ಇದೇ ವೇಳೆ ಮೂರೂ ಕ್ಲಸ್ಟರ್‌ಗಳ ಒಟ್ಟಾರೆ ಮಾಹಿತಿ ನೀಡಿರುವ ಅವರು, ‘ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ ಯೋಜನೆಯು 224.5 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ತಲೆಯೆತತ್ತಲಿದೆ. 179 ಕೋಟಿ ರು. ಯೋಜನೆ ಇದಾಗಿದ್ದು, 89 ಕೋಟಿ ರು. ಕೇಂದ್ರೀಯ ಸಹಾಯವೂ ಲಭಿಸಲಿದೆ’ ಎಂದಿದ್ದಾರೆ.

ಈಗಾಗಲೇ ದೇವನಹಳ್ಳಿಯಲ್ಲಿ ಫಾಕ್ಸ್‌ಕಾನ್‌ ಹಾಗೂ ಕೋಲಾರದಲ್ಲಿ ವಿಸ್ಟ್ರಾನ್‌ನ ಆ್ಯಪಲ್‌ ಉತ್ಪಾದನಾ ಘಟಕಗಳಿಗೆ ಸರ್ಕಾರ ಅನುಮತಿಸಿದ್ದನ್ನು ಸ್ಮರಿಸಿದ್ದಾರೆ.

‘ದೇಶದ ಒಟ್ಟಾರೆ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ ಯೋಜನೆಗೆ 1500 ಕೋಟಿ ರು. ಬಂಡವಾಳ ಹರಿವು ನಿರೀಕ್ಷಿಸಲಾಗಿದೆ. 9 ಕಂಪನಿ ಹಾಗೂ ಸ್ಟಾರ್ಟಪ್‌ಗಳು 340 ಕೋಟಿ ರು. ಹೂಡಿಕೆಗೆ ಬದ್ಧತೆ ವ್ಯಕ್ತಪಡಿಸಿವೆ. 2500 ಜನರಿಗೆ ಉದ್ಯೋಗಾವಕಾಶ ಸಿಗಲಿದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.