ಉತ್ತರ ಕನ್ನಡ: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ 2000 ಮೀನುಗಾರರು!
ಸಾಗರಮಾಲಾ, ಡ್ರೆಜ್ಜಿಂಗ್ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್‌ರನ್ನು ವಿರೋಧಿಸಿ ಕಾಂಗ್ರೆಸ್ ಪರವಾಗಿ ಜೈಕಾರ ಕೂಗಿದ್ದ ಮೀನುಗಾರರು ಇದೀಗ ವಾಪಾಸ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಉತ್ತರ ಕನ್ನಡ (ಮಾ.28) ಸಾಗರಮಾಲಾ, ಡ್ರೆಜ್ಜಿಂಗ್ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್‌ರನ್ನು ವಿರೋಧಿಸಿ ಕಾಂಗ್ರೆಸ್ ಪರವಾಗಿ ಜೈಕಾರ ಕೂಗಿದ್ದ ಮೀನುಗಾರರು ಇದೀಗ ವಾಪಾಸ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಕಾರವಾರ(Karwar)ದ ರಾಜಕೀಯ ಕಂಡು ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ನಡೆಸುವ ಅಭಿವೃದ್ಧಿ ಕಾರ್ಯದಿಂದ ಪ್ರೇರೇಪಣೆಗೊಂಡು ಸುಮಾರು 2 ಸಾವಿರ ಮೀನುಗಾರರು(Fishermen) ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ಸವಾಲಾಗಿ ಪರಿಣಮಿಸಿದೆ.
ಸಾಗರ ಪರಿಕ್ರಮ ಕಾರ್ಯಕ್ರಮ: ಮೀನುಗಾರರಲ್ಲಿ ಭರವಸೆ ಮೂಡಿಸಿದ ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲ
ಹೌದು, ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರ(Karwar-ankola assembly constituency)ದಲ್ಲಿ 24, 369 ಮೀನುಗಾರರ ಮತಗಳಿವೆ. ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಮತಗಳು ಬಿಜೆಪಿ ಪರವಾಗಿದ್ದು, ಕಾರವಾರದಲ್ಲಿ ಮಾತ್ರ ಬೈತ್‌ಕೋಲಾ ಹಾಗೂ ಮಾಜಾಳಿಯಲ್ಲಿ ಮೀನುಗಾರರ ಮತಗಳು ಬಿಜೆಪಿಯ ಶಾಸಕಿ ರೂಪಾಲಿ ನಾಯ್ಕ್(BJP MLA Roopali naik), ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಹಾಗೂ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ನಡುವೆ ಹಂಚಲ್ಪಟ್ಟಿದೆ. ಆದರೆ, ಇದೀಗ ಕಾಂಗ್ರೆಸ್ ಬೆಂಬಲಿತರಾಗಿದ್ದ ಸುಮಾರು 2000 ಮೀನುಗಾರರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಂಡು ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ್ ಜತೆ ಕೈ ಜೋಡಿಸಿ ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ತಮ್ಮದೂ ಕೊಡುಗೆ ನೀಡುವ ಉದ್ದೇಶದಿಂದ ಕಾಂಗ್ರೆಸ್‌ನಿಂದ ಬಿಜೆಪಿ ಸೇರುತ್ತಿರುವುದಾಗಿ ಮೀನುಗಾರರು ತಿಳಿಸಿದ್ದಾರೆ.
ಸಾಗರಮಾಲಾ(Sagaramala), ಡ್ರೆಜ್ಜಿಂಗ್(dredging) ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿ ಕೆಲವು ಮೀನುಗಾರರು ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್ ಅವರನ್ನು ವಿರೋಧಿಸಿ ಕಾಂಗ್ರೆಸ್ ಪರವಾಗಿ ನಿಂತು ಜೈಕಾರ ಕೂಗಿದ್ದರು. ಕಳೆದ ಬಾರಿಯಂತೂ ಸಾಗರಮಾಲಾ ವಿಚಾರ ಎದುರಾದಾಗ ಸಾವಿರಾರು ಮೀನುಗಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೂಡಾ ಜನಪ್ರತಿನಿಧಿಗಳ ಬೆಂಬಲಿಗರು ಹಾಗೂ ಕೆಲವು ಮೀನುಗಾರರ ನಡುವೆ ಭಾರೀ ಜಗಳವೇ ನಡೆದಿತ್ತು. ಈ ಸಂದರ್ಭದಲ್ಲಿ ಮೀನುಗಾರ ಮಹಿಳೆ ಸುಶೀಲಾ ಹರಿಕಂತ್ರ ಅವರು ಶಾಸಕಿ ಜತೆ ಜಗಳವಾಡಿದ್ದರು. ಈ ವಿಡಿಯೋವನ್ನೇ ಪ್ರಸ್ತುತ ಚುನಾವಣೆ ಸಂದರ್ಭದಲ್ಲಿ ಅಸ್ತ್ರವನ್ನಾಗಿಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರು ಶೇರ್ ಮಾಡುತ್ತಿದ್ದರು.
ಶಾಸಕಿ ಹಾಗೂ ಮೀನುಗಾರರ ನಡುವೆ ಉತ್ತಮ ಬಾಂಧವ್ಯ ಬೆಳೆದಿದ್ದರೂ ರಾಜಕೀಯ ಹಿನ್ನೆಲೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗುತ್ತಿದ್ದದ್ದರಿಂದ ಖುದ್ದಾಗಿ ಮೀನುಗಾರರೇ ಬೇಸತ್ತಿದ್ದಾರೆ. ಶಾಸಕರು ಹಾಗೂ ಮೀನುಗಾರರ ನಡುವೆ ಉತ್ತಮ ಬಾಂಧವ್ಯ ಬೆಳೆದಿದ್ದು, ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿಗೆ ಸೇರಿದ್ದೇವೆ. ಶಾಸಕಿ ಜತೆ ಈ ಹಿಂದೆ ಜಗಳವಾಡಿದ ವಿಡಿಯೋವನ್ನು ವಿರೋಧ ಪಕ್ಷದವರು ಈಗಲೂ ರಾಜಕೀಯಕ್ಕಾಗಿ ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಕಾಂಗ್ರೆಸ್‌ನಲ್ಲಿದ್ದ ಮೀನುಗಾರರು ಬಿಜೆಪಿ ಸೇರಿದರೂ ಸಾಗರಮಾಲಾ ಯೋಜನೆ(Sagaramala project)ಗೆ ಮಾತ್ರ ಈಗಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೀನುಗಾರ ಮುಖಂಡರು ಹೇಳುವಂತೆ, ಬಂದರು ವಿಸ್ತರಣೆಗೆ ಮೀನುಗಾರರಿಂದ ಯಾವತ್ತಿಗೂ ಬೆಂಬಲ ಇಲ್ಲ. ಬಿಜೆಪಿ ಸೇರಿದರೂ, ಸಾಗರಮಾಲಾ ಯೋಜನೆಗೆ ತಮ್ಮ ವಿರೋಧ ಇದೆ. ಆದರೆ, ಕಾಂಗ್ರೆಸ್‌ನಲ್ಲಿ ಯಾವುದೂ ಸರಿ ಇಲ್ಲ. ನಾವು ಎಲ್ಲಿದ್ದೇವೆ, ಏನು ಕೆಲಸ ಮಾಡುವ ಗೊಂದಲ ಇತ್ತು. ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಬಿಜೆಪಿಯ ಅಭಿವೃದ್ಧಿ ಕೆಲಸ ಇಷ್ಟವಾಗಿದೆ. ಅದಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇವೆ. ಈ ಬಾರಿ ಶಾಸಕಿ ರೂಪಾಲಿಯೇ ಗೆದ್ದು ಬರುವುದಾಗಿ ತಿಳಿಸಿದ್ದಾರೆ.
ಅಂದಹಾಗೆ, ಇತ್ತೀಚೆಗೆ ಕಾರವಾರದ ಮಿತ್ರ ಸಮಾಜದಲ್ಲಿ ಮೀನುಗಾರರ ಮುಖಂಡರು ಹಾಗೂ ಸಾಮಾನ್ಯ ಮೀನುಗಾರರ ಜತೆ ನಡೆದ ಸಭೆಯಲ್ಲಿ ಸಾವಿರಕ್ಕೂ ಮಿಕ್ಕಿದ ಮೀನುಗಾರರು ಬಿಜೆಪಿ ಪರವಾಗಿ ಒಲವು ತೋರಿಸಿದ್ದಾರೆ. ಅಲ್ಲದೇ, ಮೀನು ಮಾರುಕಟ್ಟೆಗೆ ಮೊನ್ನೆಯಷ್ಟೇ ಭೇಟಿ ನೀಡಿದ ಶಾಸಕಿ ಮೀನುಗಾರರ ಮಹಿಳೆಯರ ಸಮಸ್ಯೆ ಆಲಿಸಿ ಅವರಿಗೆ ಪರಿಹಾರ ನೀಡುವ ವ್ಯವಸ್ಥೆ ಕೂಡಾ ಕಲ್ಪಿಸಿದ್ದಾರೆ. ಈ ಮೂಲಕ ಮೀನುಗಾರ ಸಮುದಾಯದಲ್ಲಿ ಕಾಂಗ್ರೆಸ್ ಪರವಾಗಿದ್ದ ಸುಮಾರು 2000 ಮತಗಳನ್ನು ತನ್ನ ಪರವಾಗಿಸಲು ಬಿಜೆಪಿ ಸಫಲವಾಗಿದೆ.
Karnataka Budget 2023: ಮೀನುಗಾರರಿಗೆ ಕೊಡುಗೆ: ಹಿಂದಿನ ಯೋಜನೆಗಳಿಗೆ ಭರಪೂರ ನೆರವು
ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಹಾಲಿ ಶಾಸಕಿ ರೂಪಾಲಿ ನಾಯ್ಕ್ ವಿರುದ್ಧವಾಗಿದ್ದ ಮೀನುಗಾರರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವುದು ದೊಡ್ಡ ಬೆಳವಣಿಗೆಯೇ ಸರಿ. ಸುಮಾರು 2000 ಮೀನುಗಾರರು ಬಿಜೆಪಿ ಸೇರಿರುವುದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್(Satish sail)ಗೆ ಮಾತ್ರವಲ್ಲದೇ, ಮಾಜಿ ಸಚಿವ ಆನಂದ್ ಆಸ್ನೋಟಿಕರ್(Anand Asnotikar)ಗೂ ದೊಡ್ಡ ಹೊಡೆತ ನೀಡುವುದರಲ್ಲಿ ಎರಡು ಮಾತಿಲ್ಲ.
ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ