ಟಿಕೆಟ್ ಕೈತಪ್ಪುವ ಭೀತಿಯಲ್ಲಿ ದೆಹಲಿಗೆ ತೆರಳಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ. ನೇರವಾಗಿ ಬಿಎಸ್ ಯಡಿಯೂರಪ್ಪ ಮನೆಗೆ ತೆರಳಿದ ಶೆಟ್ಟರ್ ತಮಗೆ ಅಥವಾ ಪುತ್ರನಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರು(ಏ.13): ಕರ್ನಾಟಕ ವಿಧಾನಸಭಾ ಚುನಾವಣೆ ಟಿಕೆಟ್ ಘೋಷಣೆ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಭ್ಯರ್ಥಿಗಳ 2 ಪಟ್ಟಿ ಬಿಡುಗಡೆಯಾಗಿದೆ. ಆದರೆ ಬಂಡಾಯ ದುಪ್ಪಟ್ಟಾಗಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಟಿಕೆಟ್ ಕೈತಪ್ಪು ಭೀತಿ ಎದುರಿಸುತ್ತಿರುವ ಜಗದೀಶ್ ಶೆಟ್ಟರ್ ಬಂಡಾಯವೆದ್ದ ಬೆನ್ನಲ್ಲೇ ದೆಹಲಿಗೆ ಕರೆಯಿಸಿಕೊಂಡ ಬಿಜೆಪಿ ಹೈಕಮಾಂಡ್ ಸತತ ಮಾತುಕತೆ ನಡೆಸಿದೆ. ಇದೀಗ ದೆಹಲಿಯಿಂದ ಬೆಂಗಳೂರಿಗೆ ಮರಳಿರುವ ಜಗದೀಶ್ ಶೆಟ್ಟರ್ ಎಲ್ಲವೂ ಸುಖಾಂತ್ಯದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಮಗೆ ಅಲ್ಲದಿದ್ದರೆ, ಪುತ್ರನಿಗೆ ಟಿಕೆಟ್ ಸಿಗುವ ವಿಶ್ವಾಸವ್ಯಕ್ತಪಡಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಜಗದೀಶ್ ಶೆಟ್ಟರ್, ನೇರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನೆಗೆ ತೆರಳಿದ್ದಾರೆ.

ಎಲ್ಲವೂ ಸರಿ ಆಗಲಿದೆ. ವರಿಷ್ಠರ ಜೊತೆ ಮಾತುಕತೆ ನಡೆಸಿದ್ದೇನೆ. ಎಲ್ಲರೂ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ. ದೆಹಲಿ ಮಾತುಕತೆ ಬಳಿಕ ಇದೀಗ ಮತ್ತೊಂದು ಸುತ್ತು ಬಿಎಸ್ ಯಡಿಯೂರಪ್ಪ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಕಾರ್ಯಕರ್ತರಿಗೆ ಟಿಕೆಟ್ ಬಿಟ್ಟುಕೊಡಲು ವರಿಷ್ಠರ ಸೂಚನೆಯಿಂದ ಕೆರಳಿದ್ದ ಶೆಟ್ಟರ್ ಬಂಡಾಯದ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಶೆಟ್ಟರ್ ದೆಹಲಿ ತೆರಳಿದ್ದರು. ಇತ್ತ ಶೆಟ್ಟರ್ ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದರು.

ಹೈಕಮಾಂಡ್‌ ಭೇಟಿಯಾದ್ರೂ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ಗೆ ಸಿಗದ ಟಿಕೆಟ್‌! ಮುಂದೇನು?

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಶೆಟ್ಟರ್‌ ಅವರನ್ನು ಕೈಬಿಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆಂಬಲಿಗರು, ಇಲ್ಲಿನ ಸರ್ವೋದಯ ಸರ್ಕಲ್‌ನಲ್ಲಿ ಜಮೆಯಾಗಿ ಪ್ರತಿಭಟನೆ ನಡೆಸಿದರು.ಈ ಸಲವೂ ಶೆಟ್ಟರ್‌ ಬೇಕೇ ಬೇಕು ಎಂದು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

ಕ್ಷೇತ್ರ ತ್ಯಾಗ ಮಾಡಲು ಸೂಚನೆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ್ದ ಜಗದೀಶ್ ಶೆಟ್ಟರ್, ಸಮೀಕ್ಷೆಯಲ್ಲಿ ಪಾಸಿಟಿವ್‌ ವರದಿ ಬಂದಿದೆ. ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ. ಪಕ್ಷ ನಿಷ್ಠನಾಗಿ ಕೆಲಸ ಮಾಡಿದ್ದೇನೆ. ಪಕ್ಷ ನಿಷ್ಠನಾಗಿ ಕೆಲಸ ಮಾಡಿದವರಿಗೆ ಗೌರವ ಇಲ್ಲವೇ? ಪಕ್ಷ ನಿಷ್ಠನಾಗಿರುವುದೇ ತಪ್ಪಾ? ಎಂದು ವರಿಷ್ಠರನ್ನು ಪ್ರಶ್ನಿಸಿದ್ದೇನೆ ಎಂದು ಶೆಟ್ಟರ್‌ ಹೇಳಿದ್ದಾರೆ. ವರಿಷ್ಠರು, ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಅವರ ತೀರ್ಮಾನ ನೋಡಿ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದರು. ಬೇರೆ ಅವಕಾಶ ಕೊಡಲಾಗುವುದು, ಬಂದು ಚರ್ಚಿಸಿ ಎಂದಿದ್ದಾರೆ. ಆದರೆ, ನಾನು ಚುನಾವಣೆಗೆ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದ್ದರು .

ಶೆಟ್ಟರ್‌ಗೆ ಬಿಜೆಪಿ ಟಿಕೆಟ್‌ ಸಿಕ್ಕೇ ಸಿಗುತ್ತೆ: ಯಡಿಯೂರಪ್ಪ

ಇದೀಗ ಶೆಟ್ಟರ್ ಪುತ್ರನಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇದರಿಂದ ಶೆಟ್ಟರ್ ಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.