Karnataka election: ಕಾಂಗ್ರೆಸ್‌ಗೆ ಹೋಗ್ತೀನೆಂದು ನಾನೆಲ್ಲಿ ಹೇಳಿದ್ದೇನೆ?: ಸಚಿವ ಸೋಮಣ್ಣ
ಕಾಂಗ್ರೆಸ್‌ಗೆ ಹೋಗುವ ವದಂತಿಗಳಿಗೆ ಉತ್ತರ ನೀಡಲು ಆಗುತ್ತಾ? ವದಂತಿಗಳಿಗೆ ಯಾಕೆ ಉತ್ತರ ನೀಡಬೇಕು? ಎಂದು ವಸತಿ ಸಚಿವ ವಿ.ಸೋಮಣ್ಣ ಪ್ರಶ್ನಿಸಿದ್ದಾರೆ.
ಬೆಂಗಳೂರು (ಮಾ.7) : ಕಾಂಗ್ರೆಸ್‌ಗೆ ಹೋಗುವ ವದಂತಿಗಳಿಗೆ ಉತ್ತರ ನೀಡಲು ಆಗುತ್ತಾ? ವದಂತಿಗಳಿಗೆ ಯಾಕೆ ಉತ್ತರ ನೀಡಬೇಕು? ಎಂದು ವಸತಿ ಸಚಿವ ವಿ.ಸೋಮಣ್ಣ(V Somanna) ಪ್ರಶ್ನಿಸಿದ್ದಾರೆ.
ಸೋಮವಾರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ(Govindarajanagara Assembly constituency)ದಲ್ಲಿ ನಡೆದ ಬಿಜೆಪಿಯ ವಿಜಯಸಂಕಲ್ಪ ಯಾತ್ರೆ(Vijayasankalpa yatre)ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವದಂತಿಗಳಿಗೆ ನಾನು ಉತ್ತರ ಕೊಡಲಾಗದು. ನಾನೆಲ್ಲಾದರೂ ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ಹೇಳಿದ್ದೇನಾ? ಎಂದರು.
ಚುನಾವಣೆಗೆ ಬಿಎಸ್‌ವೈ, ಸೋಮಣ್ಣ ಒಟ್ಟಾಗಿ ಹೋಗಬೇಕು: ಮುಖಂಡರು, ಕಾರ್ಯಕರ್ತರ ಅಭಿಮತ
ಕಂದಾಯ ಸಚಿವ ಅಶೋಕ್ ಮಾತನಾಡಿ, ಸಚಿವ ಸೋಮಣ್ಣಗೆ ಯಾವುದೇ ಅಸಮಾಧಾನ ಇಲ್ಲ. ನಾನು ಅವರ ಜತೆ ಸತತವಾಗಿ ಸಂಪರ್ಕದಲ್ಲಿದ್ದೇನೆ. ಅವರು ಕಾಂಗ್ರೆಸ್‌ಗೆ ಹೋಗುತ್ತಾರೆ ಎನ್ನುವುದು ಇಲ್ಲಸಲ್ಲದ ಆರೋಪಗಳು. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವೆಲ್ಲಾ ಒಟ್ಟಾಗಿದ್ದೇವೆ. ಸೋಮಣ್ಣ ನಮ್ಮ ನಾಯಕರು ಎಂದು ಹೇಳಿದರು.
ಬಿಜೆಪಿಗೆ ಕರ್ನಾಟಕ(Karnataka BJP) ದಕ್ಷಿಣ ಭಾರತ(South India)ದ ಹೆಬ್ಬಾಗಿಲು. ಮತ್ತೊಮ್ಮೆ ಪಕ್ಷವನ್ನು ಗೆಲ್ಲಿಸಿ ಅಧಿಕಾರ ಹಿಡಿಯುತ್ತೇವೆ. ಕಾಂಗ್ರೆಸ್ ಧೂಳೀಪಟವಾಗಲಿದೆ. ರಾಜ್ಯದಲ್ಲಿ ಮತದಾರ ದೊಡ್ಡವನು. ಯಾರ ಪಾಳೇಗಾರಿಕೆಯೂ ನಡೆಯುವುದಿಲ್ಲ. ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅಧಿಕಾರ ನೀಡಿದಾಗ ಅವರು ಆಡಳಿತ ನಡೆಸದೆ ಬಿಟ್ಟು ಹೋದರು. ಕಾಂಗ್ರೆಸ್-ಜೆಡಿಎಸ್‌ನದ್ದು ಕಳ್ಳ-ಮಳ್ಳ ಆಟ. ಕಾಂಗ್ರೆಸ್‌ನ ಬಿ ಟೀಂ ಜೆಡಿಎಸ್ ಆಗಿದ್ದು, ಕಾಂಗ್ರೆಸ್ ಮತ ದಳದ್ದು, ದಳದ ಮತ ಕಾಂಗ್ರೆಸ್‌ದಾಗಿರುತ್ತದೆ ಎಂದು ಟಾಂಗ್ ಕೊಟ್ಟರು.
ಗೋವಿಂದರಾಜನಗರ, ಪದ್ಮನಾಭನಗರದಲ್ಲಿ ಯಾತ್ರೆ
ವಿಧಾನಸಭೆ ಚುನಾವಣೆ(Assembly election) ಹಿನ್ನೆಲೆಯಲ್ಲಿ ಆಡಳಿತರೂಢ ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯು ನಗರದ ಗೋವಿಂದರಾಜ ನಗರ, ಬಸವನಗುಡಿ ಮತ್ತು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿತು.
ಗೋವಿಂದರಾಜ ನಗರ ಕ್ಷೇತ್ರದಲ್ಲಿ ನಡೆದ ರೋಡ್ ಶೋ, ಬೈಕ್ ರಾರಯಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ರೋಡ್ ಶೋ, ಬೈಕ್ ರಾರಯಲಿ ಮೂಲಕ ಜನಮನ ಸೆಳೆದ ಕಾರ್ಯಕರ್ತರು ಮತ್ತು ನಾಯಕರು ಬಿಜೆಪಿ ಸರ್ಕಾರದ ಸಾಧನೆಯ ಕುರಿತು ಪ್ರಚಾರ ಕೈಗೊಂಡರು. ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡುವಂತೆ ಜನರನ್ನು ವಿನಂತಿಸಿದರು.
ಈ ನಡುವೆ, ಬಿಜೆಪಿ ನಾಯಕರಿಂದ ಮುನಿಸಿಕೊಂಡಿದ್ದ ವಸತಿ ಸಚಿವ ವಿ.ಸೋಮಣ್ಣ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ಸಂದೇಶವನ್ನು ರವಾನಿಸಿದರು. ಈ ವೇಳೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್, ಕಂದಾಯ ಸಚಿವ ಅಶೋಕ್, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.
ನಡ್ಡಾ ಕಾರ್ಯಕ್ರಮಕ್ಕೇ ಸಚಿವ ಸೋಮಣ್ಣ ಗೈರು..!
ಬಸವನಗುಡಿ ಮತ್ತು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ವಿಜಯ ಸಂಕಲ್ಪವು ವಿಜಯ ಪಥವಾಗಿ ವಿಜಯೋತ್ಸವಕ್ಕೆ ದಾರಿ ಮಾಡಿಕೊಡಲಿದೆ. ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟುಸತ್ಯವೋ, ಬಿಜೆಪಿ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಪಡೆಯುವುದು ಅಷ್ಟೇ ಸತ್ಯ. ರಾಜ್ಯದಲ್ಲಿ ಕಮಲ ಅರಳಲಿದೆ. ವಿಧಾನಭೆಯ ಮೂರನೇ ಮಹಡಿಯಲ್ಲಿ ಮತ್ತೊಮ್ಮೆ ಆ ಭುವನೇಶ್ವರಿಯ ಸೇವೆ ಮಾಡಲು ಬಿಜೆಪಿಗೆ ಜನರ ಆರ್ಶೀವಾದ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.